Gharga.Film Reviews

Wednesday, February 04, 2026

 

ನಿಗೂಢ ಜಾಗದಲ್ಲಿ ರೋಮಾಂಚಕ ಪವಾಡ!

 

ಚಿತ್ರ: ಘಾರ್ಗಾ****

ನಿರ್ದೇಶನ: ಎಂ ಶಶಿಧರ್

ನಿರ್ಮಾಣ: ಅಶ್ವಿನಿ ರಾಮ್ ಪ್ರಸಾದ್

ತಾರಾಗಣ: ಅರುಣ್ ರಾಮ್ ಪ್ರಸಾದ್, ರೆಹಾನ, ಸಾಯಿ ಕುಮಾರ್ ಮೊದಲಾದವರು.

 

ಘಾರ್ಗಾ ಎನ್ನುವುದು ಒಂದು ಊರು. ಆದರೆ ಗೂಗಲ್ ಮ್ಯಾಪ್ ನಲ್ಲೇ ಇರದಂಥ ಅಪರೂಪದ ಊರು ಅದು.‌ ಅಂಥದೊಂದು ಊರಿಗೆ ಪಯಣಿಸುವ ವಿಕ್ರಮ್ ಅಡಿಗ ಎನ್ನುವ ವ್ಯಕ್ತಿಯ‌ ಪರಿಚಯದೊಂದಿಗೆ ಚಿತ್ರ ಆರಂಭವಾಗುತ್ತದೆ. ಆಮೇಲೆ ನಡೆಯುವುದೆಲ್ಲ ಅತಿಮಾನುಷವಾದಂಥ ಘಟನೆಗಳೇ. ಆದರೆ ಅದರ ಹಿನ್ನೆಲೆಯೇನು ಎನ್ನುವುದನ್ನು ಅನಾವರಣ ಗೊಳಿಸುವುದೇ ಘಾರ್ಗಾ ಚಿತ್ರ.

 

 

ಘಾರ್ಗಾ ಎನ್ನುವ ಊರಿನಲ್ಲಿ ಮಹಾಬಲ ಐತಾಳ ಒಬ್ಬ  ಮಹಾನುಭಾವ.‌ ಆದರೆ ಆತನ‌ ಮರಣದ ಬಳಿಕ‌ ಆ ಊರಿಗೆ ಪ್ರಮುಖ ವ್ಯಕ್ತಿ ಆಗಿರುವಾತನೇ ಆತನ ಪುತ್ರ ಗಜಾನನ ಐತಾಳ.‌ ಈತನಲ್ಲಿ ತಂದೆಯ ಬಗ್ಗೆ ತಿಳಿದುಕೊಂಡು ತಂದೆಯ ಬದುಕಿನ‌ ಬಗ್ಗೆ ಲೋಕಕ್ಕೆ ಅನಾವರಣಗೊಳಿಸಲು ಬರುವವನೇ ವಿಕ್ರಮ ಅಡಿಗ. ಆದರೆ ಈತನ ನಿಜವಾದ ಉದ್ದೇಶ ಏನು ಎನ್ನುವುದು ಮಧ್ಯಂತರದ ಹೊತ್ತಿಗೆ ಅರಿವಾಗುತ್ತದೆ. ಇಷ್ಟಕ್ಕೂ  ವಿಕ್ರಮ್ ಅಡಿಗ ಹೆಸರಲ್ಲಿ ಬಂದ ಆರ್ಯನ್ ಉದ್ದೇಶವೇನು? ಅದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ? ಆತನಿಗೆ ಎದುರಾಗುವ ಸಮಸ್ಯೆ ಏನು? ಮೊದಲಾದವನ್ನು ತಿಳಿಯಲು ಚಿತ್ರಮಂದಿರಕ್ಕೆ ಹೋಗಬೇಕು.

ಘಾರ್ಗಾ ಹೆಸರು ಎಷ್ಟು ಅಪರಿಚಿತವೋ ಪರದೆಯ ಮೇಲೆ ನಡೆಯುವ ಪ್ರತಿಯೊಂದು ಘಟನೆಗಳು ಕೂಡ ತುಂಬ ಅಪರಿಚಿತ. ಪ್ರೇಕ್ಷಕರ ಪಾಲಿಗೆ ಪ್ರತಿಯೊಂದು ಫ್ರೇಮ್ ಕೂಡ‌ ಹೊಸತು. ರಾತ್ರಿ ಹೊತ್ತಿನ‌ ಪ್ರಯಾಣ, ದೆವ್ವಗಳ ದಾಳಿ, ಮನೆ ಕೆಲಸದವರ ಸಾವು..‌ ಮಧ್ಯಂತರದ ತನಕ ಇವೆಲ್ಲ ನಿಗೂಢ. ಆದರೆ ಅಷ್ಟು‌ಹೊತ್ತಿಗಾಗಲೇ ಸಿನಿಮಾದೊಳಗೆ ಪ್ರೇಕ್ಷಕ‌ ಸೇರಿಕೊಂಡು ಬಿಟ್ಟಿರುತ್ತಾನೆ. ಆನಂತರದ ಕಥೆ ಏನಾಯಿತೆಂದು ತಿಳಿಯುವ ಕುತೂಹಲ ಕೊನೆಯವರೆಗೂ ಉಳಿಯುತ್ತದೆ‌. ಯಾಕೆಂದರೆ ಚಿತ್ರದ ಎರಡನೇ ಭಾಗಕ್ಕೂ ನಾಂದಿ ಹಾಡಲಾಗಿದೆ.

 

ವಿಕ್ರಮ್ ಅಡಿಗ ಮತ್ತು ಆರ್ಯನ್ ಎನ್ನುವ ಎರಡು ಹೆಸರುಗಳಿಂದ ಪರಿಚಯಿಸಲ್ಪಡುವ ಚಿತ್ರದ ನಾಯಕನಾಗಿ ಅರುಣ್ ರಾಮ್ ಪ್ರಸಾದ್ ನಟಿಸಿದ್ದಾರೆ.  ಅವರು ತಮ್ಮ ನಟನೆಯಲ್ಲಿ ಪಾತ್ರದ ನಿಗೂಢತೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸಾಹಸ ದೃಶ್ಯಗಳಲ್ಲಿ ಅದ್ಭುತವಾಗಿ ಭಾಗಿಯಾಗಿದ್ದಾರೆ. ರೆಹಾನ ನಾಯಕಿಯಾಗಿ ಎರಡೆರಡು ಶೇಡ್ಸ್ ನಲ್ಲಿ ಆಕರ್ಷಕ ನಟನೆ ನೀಡಿದ್ದಾರೆ. ಪ್ರೇಮಗೀತೆಗಳು ಮೆಲುಕು ಹಾಕುವಂತಿವೆ.

 

ಅರುಣ್ ಸಾಗರ್ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ನಿಭಾಯಿಸಿದ್ದಾರೆ. ಅವರ ಶೇಡ್ಸ್ ಬದಲಾಗುವ ರೀತಿ ಮೈಮರೆಯುವಂತೆ ಮಾಡುತ್ತದೆ. ಗಜಾನನ ಐತಾಳ ಪಾತ್ರದಲ್ಲಿ ಸಾಯಿಕುಮಾರ್ ಘನತೆ ತುಂಬಿದ ಪಾತ್ರವೊಂದನ್ನು ನಿಭಾಯಿಸಿದ್ದಾರೆ. ಪ್ರತಿಯೊಂದು ಪಾತ್ರಗಳು ಕೂಡ ಕುತೂಹಲ ಸೃಷ್ಟಿಸುವ ಈ ಚಿತ್ರ ಪ್ರೇಕ್ಷಕರಲ್ಲಿ ಹೊಸ ಹುರುಪು ಮೂಡಿಸುವುದರಲ್ಲಿ ಯಾವ ಸಂದೇಹವೂ ಇಲ್ಲ.

 

Copyright@2018 Chitralahari | All Rights Reserved. Photo Journalist K.S. Mokshendra,