Karikaada.Film Reviews

Tuesday, February 03, 2026

 

ಸಾಹಸಿಗ ಕರಿಕಾಡನ ಅದ್ಭುತ ಪ್ರೇಮಕಥೆ

 

 

ಚಿತ್ರ: ಕರಿಕಾಡ

ನಿರ್ದೇಶನ: ವೆಂಕಟೇಶ ಕೆ

ನಿರ್ಮಾಣ: ದೀಪ್ತಿ ದಾಮೋದರ್

ತಾರಾಗಣ: ಕಾಡ‌ ನಟರಾಜ್, ನಿರೀಕ್ಷಾ ಶೆಟ್ಟಿ, ಯಶ್ ಶೆಟ್ಟಿ, ಬೇಬಿ ರಿದ್ದಿ ಮೊದಲಾದವರು.

 

ಕಾಡ ಬರೀ ಕಾಡ ಅಲ್ಲ. ಕರಿಕಾಡ! ಈ ಮಾತನ್ನು ಕಾಡನ ಎದುರಾಳಿಯ ಬಾಯಿಯಿಂದಲೇ ಹೇಳಿಸಲಾಗಿದೆ. ಅದಕ್ಕೆ ಕಾರಣ ಕಾಡಿನ ಒಳಗೆ ಸೇರಿಕೊಂಡರು ಕೂಡ ಕಾಡು ಮನುಷ್ಯನಷ್ಟೇ ಚಾಕಚಕ್ಯತೆಯಿಂದ ಬಾಳಬಲ್ಲ ಆತನ‌ ರೀತಿಯೇ ಆಗಿದೆ. ಹಾಗಂತ ನಾಗರಿಕ ಮನುಷ್ಯನಿಗಿರಬೇಕಾದ ಎಲ್ಲ ಒಳ್ಳೆಯತನಗಳು ಕೂಡ ಆತನಲ್ಲಿವೆ. ಅದೇ ಕರಿಕಾಡನ ವಿಶೇಷತೆ.

 

ಚಿತ್ರದಲ್ಲಿ ನಾಯಕನಿಗೆ ಎರಡು ಶೇಡ್ಸ್ ಇವೆ. ಆರಂಭದಲ್ಲಿ ‌ನಗರದ ಬದುಕಿನಿಂದ ಈ ಕಥೆ ಶುರುವಾಗುತ್ತದೆ. ಆದರೆ ಅದಕ್ಕೊಂದು ಪುನರ್ಜನ್ಮದ ನಂಟು ಇದೆ ಎನ್ನುವ ಸತ್ಯ ಮುಂದೆ ಅರಿವಾಗುತ್ತಾ ಹೋಗುತ್ತದೆ.

 

ಕಾಡನಾಗಿ ನಟರಾಜ್ ಅದ್ಭುತವಾಗಿ ನಟಿಸಿದ್ದಾರೆ. ಅದರಲ್ಲೂ ನಟನೆಯ ಜತೆಯಲ್ಲೇ ಆ್ಯಕ್ಷನ್ ಸನ್ನಿವೇಶಗಳಲ್ಲಿಯೂ ಆರ್ಭಟಿಸಿದ್ದಾರೆ. ಸಾಹಸ ದೃಶ್ಯಗಳು ನೈಜವಾಗಿದೆ ಎನ್ನುವ ಮಟ್ಟಿಗೆ ನಟರಾಜ್ ಬಾಡಜ ಲ್ಯಾಂಗ್ವೇಜ್ ಹೊಂದಿಕೊಂಡಿದೆ. ಪ್ರೀತಿಯಿಂದ ದೂರವೇ ಇದ್ದೇನೆ ಎಂದು ಪದೇ ಪದೆ ಹೇಳಿದರೂ ನೋಟದಲ್ಲೇ ಪ್ರೇಮಿಸುವ ಪ್ರೇಮಿಯಾಗಿ ಕಾಣಿಸುತ್ತಾರೆ. ಕನ್ನಡ ಚಿತ್ರರಂಗದಲ್ಲಿ ಭರವಸೆಯ ನಟನಾಗಿ ಬೆಳೆಯುವ ಎಲ್ಲ ಸಾಧ್ಯತೆ ಕೂಡ ಇವರದ್ದಾಗಿದೆ.

ಕಾಡನನ್ನು ಬೆನ್ನು ಬಿದ್ದು ಪ್ರೇಮಿಸುವ ಕನಕಳಾಗಿ ನಿರೀಕ್ಷಾ ಶೆಟ್ಟಿ ಅಭಿನಯಿಸಿದ್ದಾರೆ. ಹಳ್ಳಿ ಯುವತಿಯ ಪಾತ್ರಕ್ಕೆ ಜೀವತುಂಬುವಂತೆ ನಟಿಸಿ‌ ಗಮನ ಸೆಳೆದಿದ್ದಾರೆ. ಜಮೀನ್ದಾರನ ಮಗಳಾಗಿದ್ದರೂ ಪ್ರೀತಿಗಾಗಿ ಎಲ್ಲ ಕಷ್ಟವನ್ನು ಎದುರಿಸುವ ಛಾತಿಯನ್ನು ತಮ್ಮ ಕಣ್ಣುಗಳ‌ ಮೂಲಕವೇ ಪ್ರೇಕ್ಷಕರಿಗೆ ವರ್ಗಾಯಿಸಿದ್ದಾರೆ.

 

ಚಿತ್ರದ ಪ್ರತಿಯೊಂದು ಪಾತ್ರಗಳಿಗೂ‌ ಪ್ರಾಮುಖ್ಯತೆ ಇದೆ. ಪ್ರತಿಯೊಂದು ದೃಶ್ಯಗಳಿಗೂ‌ ಪರಸ್ಪರ ಸಂಬಂಧಗಳಿವೆ. ಹಾಗಾಗಿಯೇ ಎಲ್ಲ ದೃಶ್ಯಗಳನ್ನು ಕುತೂಹಲದಿಂದ ನೋಡುವಂತೆ ಮಾಡುತ್ತದೆ. ಸಾಹಸ ನಿರ್ದೇಶನ, ಅತಿಶಯ್ ಜೈನ್ ಮತ್ತು ಶಶಾಂಕ್ ಶೇಷಗಿರಿ ಸಂಗೀತ ಚಿತ್ರವನ್ನು ಮತ್ತಷ್ಟು ಮನಮೋಹಕಗೊಳಿಸಿವೆ.

 

ಚಿತ್ರದಲ್ಲಿ ಪ್ರಮುಖ ಖಳ ಪಾತ್ರವನ್ನು ಯಶ್ ಶೆಟ್ಟಿ ನಿಭಾಯಿಸಿದ್ದಾರೆ. ಯಶ್ ಶೆಟ್ಟಿಯ ತಂದೆಯ ಪಾತ್ರವನ್ನು  ಬಲರಾಜ್ ವಾಡಿ ನಿರ್ವಹಿಸಿದ್ದಾರೆ. ನಟ ವಿಜಯ್ ಚೆಂಡೂರ್ ಕೂಡ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

 

ಸಾಹಸಮಯ ಚಿತ್ರದ ಪ್ರಿಯರು ಖಂಡಿತವಾಗಿ ನೋಡಲೇಬೇಕಾದ ಸಿನಿಮಾ‌ ಇದು. ಬಹಳ‌ ಕಾಲದ ಬಳಿಕ ಕನ್ನಡದಲ್ಲಿ ಇಂಥದೊಂದು‌ ಹಳ್ಳಿಗಾಡಿನ‍ ಆ್ಯಕ್ಷನ್ ಪ್ರಧಾನ ಚಿತ್ರ ತೆರೆಗೆ ಬಂದಿದೆ. ಆ್ಯಕ್ಷನ್ ಜತೆ ಪ್ರೇಮಕಥೆಯನ್ನು ಕೂಡ ಹೇಳುವ ಈ ಸಿನಿಮಾ‌ ಇದೇ ಕಾರಣಕ್ಕೆ ಪ್ರಶಂಸೆ ಪಡೆದುಕೊಳ್ಳುತ್ತಿದೆ.

 

Copyright@2018 Chitralahari | All Rights Reserved. Photo Journalist K.S. Mokshendra,