ಕೃಷ್ಣನ ಸನಿಹ ಪ್ರೇಯಸಿಯರ ವಿರಹ..!
ಚಿತ್ರ: ಫ್ಲರ್ಟ್
ನಿರ್ದೇಶಕ: ಚಂದನ್ ಕುಮಾರ್
ನಿರ್ಮಾಪಕ: ಚಂದನ್ ಕುಮಾರ್
ತಾರಾಗಣ: ಚಂದನ್ ಕುಮಾರ್, ನಿಮಿಕಾ ರತ್ನಾಕರ್
ಕೋರ್ಟ್ ದೃಶ್ಯದೊಂದಿಗೆ ಸಿನಿಮಾ ಆರಂಭ. ಕಟಕಟೆಯಲ್ಲಿ ಕಥಾನಾಯಕ ಕೃಷ್ಣ ಅತ್ಯಾಚಾರದ ಆರೋಪ ಹೊತ್ತು ನಿಂತಿರುತ್ತಾನೆ. ಆರೋಪಿ ಪರ ವಕೀಲರ ಪ್ರಶ್ನೆಗಳಿಗೆ ಸಾಕ್ಷಿಗಳು ಉತ್ತರ ನೀಡುತ್ತಿರುವಂತೆ ನಾಯಕನ ಹಿನ್ನೆಲೆ ತೆರೆಯುತ್ತಾ ಹೋಗುತ್ತದೆ. ಮೊದಲ ಕಥೆಯ ಪ್ರಕಾರ ಕೃಷ್ಣ ಒಬ್ಬ ಜಿಮ್ ಟ್ರೈನರ್. ಬಾಲ ಈತನ ಸ್ನೇಹಿತ. ಬಾಲನ ಪ್ರೇಯಸಿ ಸನಿಹ. ಆದರೆ ಚಿತ್ರದಲ್ಲಿನ ಹೊಸ ಹೊಸ ತಿರುವುಗಳು ಸಂಬಂಧಗಳನ್ನು ಕಲಸು ಮೆಲೋಗರ ಮಾಡುತ್ತಾ ಸಾಗುತ್ತವೆ.
ಕೃಷ್ಣನಾಗಿ ಚಂದನ್ ಕುಮಾರ್ ಎರಡೆರಡು ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಕೋರ್ಟ್ ಕಟಕಟೆಯಲ್ಲಿ ಅತ್ಯಾಚಾರಿ ಆರೋಪ ಹೊತ್ತ ಚಂದನ್ ಒಬ್ಬ ಫ್ಲರ್ಟ್ ಎನ್ನುವುದು ನಿರೂಪಿತವಾಗುತ್ತಾ ಸಾಗುತ್ತದೆ. ಆದರೆ ಇದೇ ಕೃಷ್ಣ ಆರಂಭದಲ್ಲಿ ಶ್ರೀರಾಮನಂಥ ಗುಣವಿದ್ದ ಯುವಕನಾಗಿದ್ದ ಎನ್ನುವ ವಾದ ವೂ ಸಾಗುತ್ತದೆ. ಇವುಗಳಲ್ಲಿ ಯಾವುದು ಸತ್ಯ ಎನ್ನುವುದು ಅಂತಿಮವಾಗಿ ನಿರೂಪಿತಗೊಳ್ಳುತ್ತದೆ. ಆದರೆ ಎರಡೂ ರೀತಿಯ ಪಾತ್ರಗಳಿಗೆ ಚಂದನ್ ನ್ಯಾಯ ಒದಗಿಸಿದ್ದಾರೆ.
ಚಿತ್ರದಲ್ಲಿ ಚಂದನ್ ಗೆ ಜೋಡಿಯಾಗಿ ನಿಮಿಕಾ ರತ್ನಾಕರ್ ನಟಿಸಿದ್ದಾರೆ. ಇವರು ಚಂದನ್ ಗೆ ಮಾತ್ರ ಜೋಡಿಯಾಗಿಲ್ಲ. ನಾಯಕನ ಸ್ನೇಹಿತ ಗಿರೀಶ್ ಶಿವಣ್ಣನಿಗೂ ಜೋಡಿಯಾಗಿದ್ದಾರೆ. ನಿಮಿಕಾ ನಿರ್ವಹಿಸಿರುವ ಸನಿಹಾ ಪಾತ್ರದ ಆಳ, ಅಗಲಗಳನ್ನು ವಿವರಿಸಿದರೆ ಅದು ಕಥೆಯನ್ನು ಬಿಟ್ಟುಕೊಟ್ಟ ಹಾಗೆ. ಆದ ಕಾರಣ ಆ ಪಾತ್ರದ ಆಳ ಅಗಲಗಳನ್ನು ಥಿಯೇಟರ್ ನಲ್ಲಿ ನೋಡಿದರೆ ಅದೊಂದು ಹೊಸ ಅನುಭವವಾದೀತು.
ನಿಮಿಕಾ ತಂದೆಯ ಪಾತ್ರವನ್ನು ಅಥವಾ ಅರವಿಂದ್ ರಾವ್ ನಿರ್ವಹಿಸಿದ್ದಾರೆ. ಚಂದನ್ ಅಣ್ಣನಾಗಿ ರಂಗಾಯಣ ರಘು ಅಭಿನಯಿಸಿದ್ದಾರೆ. ವಕೀಲರಾಗಿ ಸಾಧು ಕೋಕಿಲ, ಶ್ರುತಿ ಕಾಣಿಸಿದರೆ ನ್ಯಾಯಾಧೀಶರಾಗಿ ಅವಿನಾಶ್ ನಟಿಸಿದ್ದಾರೆ. ಇಲ್ಲಿ ಚಂದನ್ ಸ್ನೇಹಿತನಾಗಿ
ನಟಿಸಿದ ಗಿರೀಶ್ ಶಿವಣ್ಣ, ಅಣ್ಣನಾದ ರಂಗಾಯಣ ರಘು, ಬಾಸ್ ಪಾತ್ರಧಾರಿ ವಿನಯ್ ಗೌಡ ಪಾತ್ರಗಳಿಗೂ ಹೊಸ ಹೊಸ ಮುಖಗಳಿರುತ್ತವೆ. ಚಿತ್ರ ಕಥೆಯಲ್ಲಿನ ತಿರುವುಗಳೇ ಈ ಚಿತ್ರದ ಹೈಲೈಟ್ಸ್ ಎಂದು ಹೇಳಲೇಬೇಕು.
ಪಂಚಿಂಗ್ ಸಂಭಾಷಣೆಗಳು, ಸುದೀಪ್ ಗಾಯನ, ಆಕರ್ಷಕ ಎಡಿಟಿಂಗ್ ಚಿತ್ರವನ್ನು ಆಕರ್ಷಣೀಯಗೊಳಿಸಿದೆ. ನಟನಾಗಿ ಮಾತ್ರವಲ್ಲ ಕಥೆಗಾರನಾಗಿ, ನಿರ್ದೇಶಕನಾಗಿಯೂ ಚಂದನ್ ಗೆದ್ದಿದ್ದಾರೆ. ಆದರೆ ಸಿನಿಮಾ ಪ್ರಿಯರೆಲ್ಲ ಈ ಸತ್ಯವನ್ನು ಒಪ್ಪಿಕೊಂಡಾಗಲೇ ಚಂದನ್ ಗೆ ನಿಜವಾದ ಗೆಲುವು ಲಭಿಸಲು ಸಾಧ್ಯ.