GST,Film Reviews

Friday, November 28, 2025

 

ದೆವ್ವಗಳ ಲೋಕದಲ್ಲಿ ಅದೃಷ್ಟವಂತ ಲಕ್ಕಿ!

 

ಚಿತ್ರ: ಜಿ ಎಸ್ ಟಿ

ನಿರ್ದೇಶಕ: ಸೃಜನ್ ಲೋಕೇಶ್

ನಿರ್ಮಾಪಕ: ಎನ್ ಸಂದೇಶ್

ತಾರಾಗಣ: ಸೃಜನ್ ಲೋಕೇಶ್, ರಜನಿ‌ ಭಾರಧ್ವಾಜ್

ಮೊದಲಾದವರು.

 

ಆರಂಭವೇ ಒಂದು ಚೇಸ್ ನಿಂದ ಶುರುವಾಗುತ್ತದೆ. ಬೈಕ್ ಹಿಂದೆ ಬೆನ್ನು ಬಿದ್ದ ಫೋರ್ ವೀಲರ್ ಬೈಕ್ ಸವಾರನಿಗೆ ಡಿಕ್ಕಿ ಹೊಡೆಯುತ್ತದೆ. ಮತ್ತೊಂದೆಡೆ ಕಥಾ ನಾಯಕ ಆತ್ಮಹತ್ಯೆಗೆ ಯತ್ನಿಸುತ್ತಾನೆ. ಆತನ‌ ಪ್ರಯತ್ನಗಳೆಲ್ಲ ವಿಫಲವಾಗುತ್ತವೆ. ಆ ಬಳಿಕ ಗೊತ್ತಾವುದೇನೆಂದರೆ ಆತ ಸಾಯದಂತೆ 4 ದೆವ್ವಗಳು ತಡೆದಿರುತ್ತವೆ. ಮುಕ್ತಿ ಸಿಗದೆ ಅಲೆದಾಡುವ ಆ ಆತ್ಮಗಳ ಸ್ನೇಹದೊಂದಿಗೆ ಕಥಾನಾಯಕ ಬದುಕುವ ಸ್ಫೂರ್ತಿ ಪಡೆಯುತ್ತಾನೆ. ಇದು ಆರಂಭದ ಕೆಲವು ನಿಮಿಷಗಳ‌ ಕಥೆ. ಮುಂದೇನೆಲ್ಲ ನಡೆಯುತ್ತದೆ ಎನ್ನುವುದೇ ಪ್ರಾಮುಖ್ಯತೆ.

 

ಜಿ ಎಸ್ ಟಿ ಅಂದರೆ ಘೋಸ್ಟ್ಸ್ ಇನ್ ಟ್ರಬಲ್. ದೆವ್ವಗಳನ್ನು ತೊಂದರೆಗೆ ಒಳಗಾಗಿಸಿದ್ದು ಯಾರು? ಅಥವಾ ದೆವ್ವಗಳು ಸಮಸ್ಯೆ ಸೃಷ್ಟಿಸಿದ್ದೇಕೆ ಎನ್ನುವುದು ಸಿನಿಮಾದ ಸ್ವಾರಸ್ಯ.

 

ಚಿತ್ರದಲ್ಲಿ ಸೃಜನ್ ಲೋಕೇಶ್ ಹೆಸರು ಲಕ್ಕಿ. ಆದರೆ ಆತ ಅನ್ ಲಕ್ಕಿ ಎಂದೇ ಹೆಸರಾದಾತ. ಆತನನ್ನು ಲಕ್ಕಿ ಎಂದು ಗುರುತಿಸಿದ ತಂದೆಯಾಗಿ ಹಿರಿಯನಟ ಅಶೋಕ್ ಅಭಿನಯಿಸಿದ್ದಾರೆ. ತಾಯಿ ಜಯಂತಿಯಾಗಿ ವಿನಯಾ ಪ್ರಕಾಶ್ ನಟಿಸಿದ್ದಾರೆ. ಲಕ್ಕಿ ಪ್ರೇಯಸಿಯಾಗಿ ರಜನಿ ಭಾರಧ್ವಾಜ್ ಅಭಿನಯಿಸಿದ್ದಾರೆ.

ಲಕ್ಕಿಯ ಆತ್ಮಹತ್ಯೆ ತಡೆಯುವ ದೆವ್ವಗಳಾಗಿ ಗಿರಿಜಾ ಲೋಕೇಶ್, ತಬಲಾ‌ನಾಣಿ, ನಿವೇದಿತಾ ಗೌಡ, ಗೊಬ್ಬರಗಾಲ ಮತ್ತು ಮಾಸ್ಟರ್ ಸುಕೃತ್ ನಟಿಸಿದ್ದಾರೆ.

 

ಲಕ್ಕಿಯ ಸ್ನೇಹಿತನಾಗಿ ಗಿರೀಶ್ ಶಿವಣ್ಣ ಕುಡುಕನಾಗಿ ನಗಿಸಿದ್ದಾರೆ. ನಿವೇದಿತಾ ಚಿಕ್ಕಪ್ಪ, ಚಿಕ್ಕಮ್ಮನಾಗಿ ಯಮುನಾ ಶ್ರೀನಿಧಿ ಮತ್ತು ನಟನಾ ಪ್ರಶಾಂತ್ ಕಾಣಿಸಿದ್ದಾರೆ.

 

ದೃಶ್ಯವೊಂದರಲ್ಲಿ ಸುಂದರ್, ವೀಣಾ ಸುಂದರ್, ದಿವ್ಯಾ ವಸಂತ, ಹನುಮಂತೇಗೌಡ ಸೇರಿ ಭರ್ಜರಿ ನಗಿಸುತ್ತಾರೆ. ಆರಂಭದಲ್ಲೇ ಚೇಸಿಂಗ್ ನಲ್ಲಿ ಅಪಘಾತಗೊಳ್ಳುವ ವ್ಯಕ್ತಿಯಾಗಿ ಅರವಿಂದ ರಾವ್ ನಟಿಸಿದ್ದಾರೆ. ಇವರ ಪಾತ್ರಕ್ಕೆ ದ್ವಿತೀಯಾರ್ಧದಲ್ಲಿ ಟ್ವಿಸ್ಟ್ ಇದೆ.

 

ಬ್ಯಾಂಕ್ ದರೋಡೆ ದೃಶ್ಯದಲ್ಲಿ ಹಿರಿಯ ನಟ ಶೋಭರಾಜ್, ಕಿರುತೆರೆ ನಟ ಶೋಭರಾಜ್ ಪಾವೂರು, ಶರತ್ ಲೋಹಿತಾಶ್ವ ಮೊದಲಾದವರು ಕಾಣಿಸಿಕೊಂಡಿದ್ದಾರೆ. ಟಾಕಿಂಗ್ ಸ್ಟಾರ್ ಸಿನಿಮಾದಲ್ಲಿ ತಾರೆಯರ ಸಾಗರವೇ ತುಂಬಿದ್ದು ನಗುವಿನ ರಸದೌತಣ ಸೃಷ್ಟಿಸಿದ್ದಾರೆ.

 

ಚಂದನ್ ಶೆಟ್ಟಿ ಸಂಗೀತದಲ್ಲಿನ ಹಾಡುಗಳು, ಸಂಹಿತಾ ವಿನ್ಯಾ ವಿಶೇಷ ನೃತ್ಯ ಮನಸೆಳೆಯುತ್ತವೆ. ಮೊದಲ‌ ನಿರ್ದೇಶನದಲ್ಲೇ ಸೃಜನ್ ಗೆದ್ದಿರುವುದಂತೂ ಸತ್ಯ.

 

Copyright@2018 Chitralahari | All Rights Reserved. Photo Journalist K.S. Mokshendra,