ಪಾಠಶಾಲಾ: ಹಳ್ಳಿ ಜೀವನದ ಭಾವ ಜಾಲ
ಚಿತ್ರ: ಪಾಠಶಾಲಾ
ನಿರ್ದೇಶಕ: ಹೆದ್ದೂರು ಮಂಜುನಾಥ ಶೆಟ್ಟಿ
ನಿರ್ಮಾಪಕ: ಹೆದ್ದೂರು ಮಂಜುನಾಥ ಶೆಟ್ಟಿ
ತಾರಾಗಣ: ಪ್ರಶಾಂತ್ ನಟನ, ಬಾಲಾಜಿ ಮನೋಹರ್, ಕಿರಣ್ ನಾಯಕ್ ಮೊದಲಾದವರು
ಪಾಠಶಾಲಾ ಚಿತ್ರದ ಮೂಲಕ ನಿರ್ದೇಶಕರು ಶಾಲೆಯನ್ನು , ಪಾಠವನ್ನು ಮಾತ್ರ ತೋರಿಸಿಲ್ಲ. ಮನುಷ್ಯನಿಗೆ ಒಂದು ಪಾಠವನ್ನೇ ಹೇಳಿಕೊಟ್ಟಿದ್ದಾರೆ.
ಮಲೆನಾಡಿನ ಸೌಂದರ್ಯದಿಂದ ಆರಂಭವಾಗುವ ಸಿನಿಮಾ ಭಯಾನಕ ಮುಖವನ್ನು ಅನಾವರಣಗೊಳಿಸುವ ಮೂಲಕ ಅಂತ್ಯಗೊಳ್ಳುತ್ತದೆ.
ತೀರ್ಥಹಳ್ಳಿ ಪ್ರದೇಶದ ಹಳ್ಳಿಯ ಜನಜೀವನವನ್ನು ಕಟ್ಟಿಕೊಡುವಂಥ ಚಿತ್ರ ಇದು.
ಒಂದು ಸರ್ಕಾರಿ ಶಾಲೆ. ಅದರ ತುಂಬ ವಿದ್ಯಾರ್ಥಿಗಳು. ಶಾಲೆಯಲ್ಲಿ ವಿದ್ಯಾರ್ಥಿಗಳ ಓದು, ಸ್ನೇಹದ ಪಾಠವಾದರೆ ಮನೆಯಲ್ಲಿ ಅವರ ತಂದೆ ತಾಯಿ ಸ್ನೇಹಿತರ ಸ್ನೇಹ ಪ್ರೇಮದ ಆಗುಹೋಗುಗಳನ್ನು ಸಾಧ್ಯವಾದಷ್ಟು ಸಹಜವಾಗಿ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ.
ಶಾಲಾ, ಕಾಲೇಜು ಮಕ್ಕಳನ್ನೇ ನವ ಪ್ರತಿಭೆಗಳಾಗಿ ಪರಿಚಯಿಸಿರುವ ನಿರ್ದೇಶಕರು ಅವರಿಂದ ಸಹಜವಾದ ಅಭಿನಯ ಹೊರತೆಗೆಸುವಲ್ಲಿ ಯಶಸ್ವಿಯಾಗಿದ್ದಾರೆ.
ಒಂದು ಕಡೆ ಶಾಲೆಗೆ ಹೋದ ವಿದ್ಯಾರ್ಥಿಗಳು ಸರಿಯಾಗಿ ವಿದ್ಯಾಭ್ಯಾಸ ಮಾಡುತ್ತಿಲ್ಲ ಎನ್ನುವುದು ಸಮಸ್ಯೆ. ಮತ್ತೊಂದೆಡೆ ಈ ಮಕ್ಕಳ ತಾಯಂದಿರು ಗದ್ದೆಯಲ್ಲಿ ಕೃಷಿ ಕೆಲಸದಲ್ಲಿ ಒದ್ದಾಡುತ್ತಿರುತ್ತಾರೆ. ಇದರ ಮಧ್ಯೆ ಗಂಡಸರಾಗಿರುವ ಮಂದಿ ಬೇಟೆಗಾಗಿ ಕಾಡಿನತ್ತ ಒಂದು ಕಣ್ಣು ನೆಟ್ಟೇ ಇರುತ್ತಾರೆ. ಆದರೆ ಆಹಾರದ ಬೇಟೆ ಎಷ್ಟು ಸರಿ? ಪ್ರಾಣಿ ಬೇಟೆಯ ಜತೆಯಲ್ಲಿ ಗಂಧದ ವ್ಯಾಪಾರ ಕೂಡ ನಡೆಯುತ್ತಿತ್ತಾ? ಅದರ ಹಿಂದಿನ ಸೂತ್ರಧಾರಿಗಳು ಯಾರು? ಹೀಗೆ ಸರಳವಾಗಿ ಆರಂಭಗೊಂಡ ಕಥೆ ಜಟಿಲವಾಗುತ್ತಾ ಸಾಗುತ್ತದೆ. ಪ್ರೇಕ್ಷಕರನ್ನು ಕುರ್ಚಿಯ ತುದಿಗೆ ತರುವಂತೆ ಮಾಡುವಲ್ಲಿ ನಿರ್ದೇಶಕ ಹೆದ್ದೂರು ಮಂಜುನಾಥ್ ಶೆಟ್ಟಿ ಗೆದ್ದಿದ್ದಾರೆ.
ನಿರ್ದೇಶಕರಿಗೆ ಇದು ಮೂರನೇ ಚಿತ್ರ. ಇಲ್ಲಿ ಮಂಜುನಾಥ್ ಶೆಟ್ಟಿ ನಿರ್ದೇಶಕ ಮಾತ್ರವಲ್ಲ, ಕಲಾವಿದರಾಗಿಯೂ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿನ ಮೂರು ಪ್ರಮುಖ ಕುಟುಂಬಗಳಲ್ಲಿ ಇವರ ಕುಟುಂಬಕ್ಕೂ ಒಂದು ಪ್ರಾಧಾನ್ಯತೆ ಇದೆ.
ನರಸಿಂಹಣ್ಣ, ಕಿಟ್ಟಣ್ಣ, ಸಂಜೀವಣ್ಣ ಎನ್ನುವ ಪಾತ್ರಗಳಿಗೆ ಲಕ್ಷ್ಮೀ,ವೀಣಾ, ಯಶೋಧಾ ಎನ್ನುವ ಜೋಡಿಗಳಿವೆ. ಯುವ ಪ್ರೇಮಿಗಳಿದ್ದಾರೆ. ಪ್ರೇಮಗೀತೆಗಳಿವೆ. ವಿಕಾಸ್ ವಸಿಷ್ಠ ಸಂಗೀತದಲ್ಲಿ ಹಾಡುಗಳು ಚೆನ್ನಾಗಿ ಮೂಡಿ ಬಂದಿವೆ.
ಮೊದಲೇ ಹೇಳಿದಂತೆ ಪಾಠಶಾಲಾ ಎನ್ನುವ ಹೆಸರಿದ್ದರೂ ಇದು ಮಕ್ಕಳ ಕಥೆ ಮಾತ್ರವಲ್ಲ. ಜನರಿಗೆ ಪಾಠ ಕಲಿಸುವ ಚಿತ್ರವೂ ಹೌದು.