Bank Of Bhagyalakshmi.Reviews

Monday, November 24, 2025

 

ಒಂದು ದರೋಡೆಯಲ್ಲಿ ಹಲವು ಜೀವ ಭಾವಗಳ ಸಂಗಮ!

 

 

ಚಿತ್ರ: ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ

ನಿರ್ದೇಶಕರು: ಅಭಿಷೇಕ್ ಮಂಜುನಾಥ್

ನಿರ್ಮಾಪಕರು: ಎಚ್.ಕೆ.‌ಪ್ರಕಾಶ್

ತಾರಾಗಣ: ದೀಕ್ಷಿತ್ ಶೆಟ್ಟಿ, ಬೃಂದಾ ಆಚಾರ್ಯ, ಗೋಪಾಲಕೃಷ್ಣ ದೇಶಪಾಂಡೆ ಮೊದಲಾದವರು.

 

 

ಚಿತ್ರದ ಹೆಸರೇ ಸೂಚಿಸುವಂತೆ ಇದು ಬ್ಯಾಂಕ್ ಗೆ ಸಂಬಂಧಿಸಿದ ಕಥೆ. ಭಾಗ್ಯಲಕ್ಷ್ಮೀ ಎನ್ನುವ ಕೋಆಪರೇಟಿವ್ ಬ್ಯಾಂಕ್ ಗೆ ಐದು ಮಂದಿ ದರೋಡೆಕೋರರು ನುಗ್ಗುತ್ತಾರೆ.  ಒಳಗಡೆ ಇರುವ ಸಿಬ್ಬಂದಿ ಮತ್ತು ಗ್ರಾಹಕರ ಸಮೇತವಾಗಿ ಶಟರ್ ಹಾಕಿ ಕ್ಲೋಸ್ ಮಾಡುತ್ತಾರೆ. ಶಟರ್ ಹೊರಗಿನಿಂದ ಲಾಕ್ ಆಗುವ ಕಾರಣ ಖದೀಮರು ಒಳಗಡೆಯೇ ಸಿಕ್ಕಿ ಬೀಳುತ್ತಾರೆ. ಮುಂದೇನಾಗುತ್ತದೆ ಎನ್ನುವ ಕುತೂಹಲಕಾರಿ ಪ್ರಶ್ನೆಗೆ ಈ ಚಿತ್ರದಲ್ಲಿ ಆಕರ್ಷಕವಾಗಿ ಉತ್ತರ ನೀಡಲಾಗಿದೆ.

 

ನಿರುದ್ಯೋಗಿ,‌ ಮೂರ್ಖ ಯುವಕರನ್ನೇ ಚಿತ್ರದ ಪ್ರಧಾನ ಪಾತ್ರವಾಗಿಸಿದ ನಿರ್ದೇಶಕರ ಜಾಣ್ಮೆ ಮೆಚ್ಚಲೇಬೇಕು. ಯಾಕೆಂದರೆ ಮುಂದೆ ತಿರುವು ತೆಗೆದುಕೊಳ್ಳುವ ಕಥೆಯಲ್ಲಿ ಸೂಕ್ತ ಸಲಹೆ, ಸೂಚನೆ, ಮಾರ್ಗದರ್ಶನಗಳು ಸಿಕ್ಕರೆ ಯುವಕರು ಹೇಗೆ ಆದರ್ಶಪ್ರಾಯರಾಗಿ ಬದಲಾಗಬಲ್ಲರು ಎನ್ನುವುದನ್ನು ಚಿತ್ರದಲ್ಲಿ ಆಕರ್ಷಕವಾಗಿ ತೋರಿಸಲಾಗಿದೆ.

ಚಿತ್ರದಲ್ಲಿ ದರೋಡೆಕೋರರ ಮುಖ್ಯಸ್ಥನಾಗಿ ದೀಕ್ಷಿತ್ ಶೆಟ್ಟಿ ನಟಿಸಿದ್ದಾರೆ. ಟೈಗರ್ ಎನ್ನುವ ಅಡ್ಡ ಹೆಸರಿನಿಂದ ಕರೆಸಲ್ಪಡುವ ಈ ನೆಗೆಟಿವ್ ಶೇಡ್ ಪಾತ್ರ, ಪಾಸಿಟಿವ್ ಆಗಿ ಬದಲಾಗುವ ರೀತಿಯೇ ಸೋಜಿಗ. ಶಟರ್ ಮುಚ್ಚಿದ ಬ್ಯಾಂಕ್ ಒಳಗೆ ಸಂಭವಿಸುವ ಕಾರ್ಯಚಟುವಟಿಕೆಗಳನ್ನು ಆಕರ್ಷಕವಾಗಿ ತೋರಿಸಲು ಸಾಧ್ಯವಾಗಿರುವುದು ನಿರ್ದೇಶಕರ ಹೆಗ್ಗಳಿಕೆ.‌ ಬ್ಯಾಂಕ್ ಒಳಗೆಯೇ ಕಥಾನಾಯಕಿ ಪಾತ್ರವನ್ನು ಸೃಷ್ಟಿಸಿ, ಅದಕ್ಕೊಂದು ಪ್ರಾಮುಖ್ಯತೆಯನ್ನು ಕೂಡ ನೀಡಲಾಗಿದೆ. ಚಿತ್ರದ ದ್ವಿತೀಯಾರ್ಧದಲ್ಲಿ ಪ್ರಮುಖ ತಿರುವು ಉಂಟಾಗುವುದು ಕೂಡ ನಾಯಕಿಯ ಕಡೆಯಿಂದಲೇ ಎನ್ನುವುದು ವಿಶೇಷ. ಇಂಥದೊಂದು ಪಾತ್ರವನ್ನು ಬೃಂದಾ ಆಚಾರ್ಯ ಸಮರ್ಥವಾಗಿ ನಿಭಾಯಿಸಿದ್ದಾರೆ. ದರೋಡೆಕೋರರ ನಡುವಿನ ಆತಂಕ ಮತ್ತು ಅದರ ಮಧ್ಯೆಯೇ ನಾಯಕನ ಜತೆಗೆ ತೋರುವ ಅಕ್ಕರೆ ಈ ಎರಡು ಭಾವಗಳನ್ನು  ಪ್ರದರ್ಶಿಸುವಲ್ಲಿ ಬೃಂದಾ ಸ್ಕೋರ್ ಮಾಡಿದ್ದಾರೆ.‌

 

ಒಳಭಾಗದಲ್ಲಿ ಸಿಬ್ಬಂದಿ ಮತ್ತು ಗ್ರಾಹಕರು ಸೇರಿ ವೈವಿಧ್ಯಮಯ ಪಾತ್ರಗಳಿವೆ. ಅವುಗಳಲ್ಲಿ ಉಷಾ ಭಂಡಾರಿಯವರು ನಿರ್ವಹಿಸಿರುವ ಜಾನಪದ ಗಾಯಕಿಯ ಪಾತ್ರವೂ ಆಕರ್ಷಕವಾಗಿದೆ. ಪ್ರಮುಖ ಹಾಡೊಂದನ್ನು ಉಷಾ ಭಂಡಾರಿಯವರಿಗೆ ಮೀಸಲಾಗಿಸಲಾಗಿದೆ. ಅದೇ ರೀತಿ ಉತ್ತರ ಕರ್ನಾಟಕದ  ಯೂಟ್ಯೂಬರ್ ಪಾತ್ರವೂ ಕಥೆಯೊಳಗೆ ಸೇರಿಕೊಳ್ಳುವ ರೀತಿಯೇ ರೋಚಕ.

 

ಬ್ಯಾಂಕ್ ಒಳಗೆ ಇಷ್ಟೆಲ್ಲ‌ ನಡೆಯಬೇಕಾದರೆ ಹೊರಗಡೆ ಕೂಡ ಪ್ರಮುಖ ಘಟನಾವಳಿಗಳು ಸಂಭವಿಸುತ್ತವೆ. ರಾಜಕಾರಣಿಗಳ ನಡುವೆ ನಿಂತು ಸಲಹೆ ನೀಡುವ ಶ್ರುತಿಹರಿಹರನ್ ಪಾತ್ರ ಕುತೂಹಲ ಸೃಷ್ಟಿಸುತ್ತದೆ. ಹೊರಗಡೆ ಸುದ್ದಿ ಮಾಡಲು ನಿಂತ ಯೂಟ್ಯೂಬರ್ ಕೇಶವಾದಿತ್ಯನಾಗಿ ಗೋಪಾಲಕೃಷ್ಣ ದೇಶಪಾಂಡೆ ನೈಜ‌ ಪತ್ರಕರ್ತರ ಧ್ವನಿಯಾಗಿದ್ದಾರೆ. ಪೊಲೀಸರ ಕೈಗೆ ತಾನಾಗಿ ಹೋಗಿ ಸಿಕ್ಕಿಕೊಳ್ಳುವ ತಿಪ್ಪೇಸ್ವಾಮಿಯಾಗಿ ವಿಜಯ್ ಚೆಂಡೂರ್ ನಗಿಸುತ್ತಾರೆ. ಇಡೀ‌ ಕಾರ್ಯಾಚರಣೆಯ ನೇತೃತ್ವ ವಹಿಸಿರುವ ಇನ್ಸ್ಪೆಕ್ಟರ್ ಅಜಿತ್ ಪಾತ್ರಧಾರಿ ಕೂಡ‌ ಭರವಸೆಯ ಕಲಾವಿದರಾಗಿ ಕಾಣಿಸುತ್ತಾರೆ.

 

ಜುಡಾ ಸ್ಯಾಂಡಿ‌‌ ಸಂಗೀತದಲ್ಲಿ ಮೂಡಿರುವ ಹಾಡುಗಳು ಮತ್ತು ಹಿನ್ನೆಲೆ ಸಂಗೀತ, ಕ್ಲೈಮ್ಯಾಕ್ಸ್ ನಲ್ಲಿನ ಗ್ರಾಫಿಕ್ಸ್ ಎಫೆಕ್ಟ್ ಎಲ್ಲವೂ ಚಿತ್ರವನ್ನು ಮತ್ತೊಂದು ಲೆವೆಲ್ ಗೆ ಕೊಂಡೊಯ್ಯುವಲ್ಲಿ ಗೆದ್ದಿದೆ. ಟೈಮ್ ಪಾಸ್ ಮಾಡಲೆಂದು ಚಿತ್ರ ನೋಡಲು ಬರುವ ಪ್ರೇಕ್ಷಕರಿಗೆ ಒಂದೊಳ್ಳೆಯ ಅಡ್ವೆಂಚರ್‌ ಅನುಭವದ ಜತೆಗೆ ಮನೋರಂಜನೆ ಮತ್ತು ಸಂದೇಶವನ್ನು ನೀಡುವುದು ಬ್ಯಾಂಕ್ ಆಫ್ ಭಾಗ್ಯ ಲಕ್ಷ್ಮೀ ಹೆಗ್ಗಳಿಕೆ.

 

Copyright@2018 Chitralahari | All Rights Reserved. Photo Journalist K.S. Mokshendra,