ಜನ್ಮ ಜನ್ಮಾಂತರದಲ್ಲಿನ ಅಪ್ಪ ಮಗನ ಅನುಬಂಧ
ಚಿತ್ರ: ವೃಷಭ
ನಿರ್ದೇಶನ: ನಂದ ಕಿಶೋರ್
ನಿರ್ಮಾಣ: ಕನೆಕ್ಟ್ ಮೀಡಿಯಾ, ಬಾಲಾಜಿ ಮೋಶನ್ ಪಿಕ್ಚರ್ಸ್ ಮತ್ತು ಅಭಿಷೇಕ್ ಎಸ್ ವ್ಯಾಸ್ ಸ್ಟುಡಿಯೋ
ತಾರಾಗಣ: ಮೋಹನ್ ಲಾಲ್, ಸಮರ್ ಜಿತ್ ಲಂಕೇಶ್, ರಾಗಿಣಿ ಮೊದಲಾದವರು.
ಇದು ಎರಡು ಜನ್ಮಗಳ ಕಥೆ. ಸಿನಿಮಾ ಪ್ರಮುಖವಾಗಿ ಮಲಯಾಳಂ ಮತ್ತು ತೆಲುಗು ಭಾಷೆಯಲ್ಲಿ ನಿರ್ಮಿಸಲಾಗಿದೆ. ಕನ್ನಡ ಡಬ್ಬಿಂಗ್ ವರ್ಶನ್ ಸಿಗದೇ ಹೋದರೂ ಕನ್ನಡಿಗರೇ ತುಂಬಿರುವ ಚಿತ್ರವಾದ ಕಾರಣ ಖಂಡಿತವಾಗಿ ನೋಡಬಹುದು.
ವೃಷಭ ಮಹಾರಾಜನ ಕಥೆಯಿಂದ ಚಿತ್ರ ಶುರುವಾಗುತ್ತದೆ. ಪುತ್ರನಿಂದಲೇ ಅಪಾಯ ಎದುರಿಸಬೇಕೆನ್ನುವ ಶಾಪವನ್ನು ಆತನಿಗೆ ನೀಡಲಾಗಿರುತ್ತದೆ. ಆದರೆ ಈ ಶಾಪ ಫಲಿಸುವುದೇ? ಹಾಗಾದರೆ ಪುನರ್ಜನ್ಮದ ಕಥೆ ಏನು? ಎನ್ನುವ ಪ್ರಶ್ನೆಗಳಿಗೆ ಚಿತ್ರದಲ್ಲಿ ಉತ್ತರವಿದೆ.
ಶಾಪಗ್ರಸ್ತ ತಂದೆಯಾಗಿ ಮಲಯಾಳಂನ ಖ್ಯಾತ ನಟ ಮೋಹನ್ ಲಾಲ್ ನಟಿಸಿದ್ದಾರೆ. ಮೋಹನ್ ಲಾಲ್ ಪುತ್ರನಾಗಿ ಸಮರಜಿತ್ ಲಂಕೇಶ್ ಕಾಣಿಸಿದ್ದಾರೆ. ವಿಶೇಷ ಏನೆಂದರೆ ಇಲ್ಲಿ ಮೋಹನ್ ಲಾಲ್ ಗಿಂತ ಸಮರಜಿತ್ ಪಾತ್ರಕ್ಕೇನೇ ಪ್ರಾಧಾನ್ಯತೆ ಇದೆ. ಇದು ಕನ್ನಡಿಗರು ಖುಷಿ ಪಡುವ ಸಂಗತಿಯೂ ಹೌದು.
ಸಮರಜಿತ್ ಎರಡು ಜನ್ಮಗಳಿಗೂ ನ್ಯಾಯ ತುಂಬುವಂಥ ನಟನೆ ನೀಡಿದ್ದಾರೆ. ಪೌರಾಣಿಕ ಮಾದರಿಯ ವಸ್ತ್ರ ಶೈಲಿ, ಯುದ್ಧರೀತಿಗೆ ಹೇಗೆ ಹೊಂದುತ್ತಾರೆಯೋ ಅದೇ ರೀತಿ ಆಧುನಿಕ ಸೂಟು,ಬೂಟಿಗೂ ಹೊಡೆದಾಟಕ್ಕೂ ಎಲ್ಲಕ್ಕೂ ಹೊಂದಿಕೊಂಡಿದ್ದಾರೆ. ಎರಡನೇ ಚಿತ್ರದಲ್ಲೇ ಎರಡು ಭಾವಗಳನ್ನು ಅದ್ಭುತವಾಗಿ ನಿಭಾಯಿಸಿದ್ದಾರೆ.
ಪ್ರೇಮಗೀತೆಯೊಂದರಲ್ಲಿ ತನ್ನ ಜೋಡಿಯೊಂದಿಗೆ ಸಮರಜಿತ್ ಕುಣಿದಿರುವ ರೀತಿ ಅದ್ಭುತವಾಗಿದೆ. ಹೆಚ್ಚಿನ ದೃಶ್ಯಗಳನ್ನು ವಿಎಫ್ ಎಕ್ಸ್ ತಂತ್ರಜ್ಞಾನ ಬಳಸಿ ಚಿತ್ರೀಕರಿಸಲಾಗಿದೆ. ಪ್ರೇಕ್ಷಕರ ಕಣ್ಣಿಗೆ ಇದೊಂದು ದೃಶ್ಯ ವೈಭವವಾಗುವುದರಲ್ಲಿ ಸಂದೇಹವೇ ಇಲ್ಲ.
ಮೋಹನ್ ಲಾಲ್ ಗೆ ಜೋಡಿಯಾಗಿ ರಾಗಿಣಿ ನಟಿಸಿದ್ದಾರೆ. ಅಷ್ಟೇ ಅಲ್ಲದೆ ಪಾವನಾ, ಬಿಗ್ ಬಾಸ್ ರಘು, ಗರುಡ ರಾಮ್, ಕಿಶೋರ್ ಸೇರಿದಂತೆ ಕನ್ನಡ ಕಲಾವಿದರ ದಂಡೇ ಇಲ್ಲಿದೆ.
ಭಾರತೀಯರು ಅಭಿಮಾನ ಪಡುವ ರೀತಿಯಲ್ಲಿ ಮೂಡಿಬಂದಿರುವ ವೈವಿಧ್ಯಮಯ ಚಿತ್ರ ವೃಷಭ ಎನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ.