ಫುಲ್ ಮಾರ್ಕ್ ಪಡೆಯುವ ದುಷ್ಟ ಶಿಕ್ಷಕ ಮಾರ್ಕ್
ಚಿತ್ರ: ಮಾರ್ಕ್
ನಿರ್ದೇಶನ : ವಿಜಯ್ ಕಾರ್ತಿಕೇಯನ್
ನಿರ್ಮಾಣ : ಸತ್ಯಜ್ಯೋತಿ ಫಿಲ್ಮ್ಸ್
ತಾರಾಗಣ: ಕಿಚ್ಚ ಸುದೀಪ, ಚಿತ್ರಾ ಶೆಣೈ, ಅರ್ಚನಾ ಕೊಟ್ಟಿಗೆ ಮೊದಲಾದವರು.
ಆತನ ಹೆಸರು ಅಜಯ್ ಮಾರ್ಕಾಂಡೇಯ.ಮಾರ್ಕ್ ಎಂದೇ ಜನಪ್ರಿಯ. ಸದ್ಯಕ್ಕೆ ಅಮಾನತಿನಲ್ಲಿರುವ ಸೂಪರಿಂಟೆಂಡೆಂಟ್ ಆಫ್ ಪೊಲೀಸ್. ಹೀಗೆ ಸಸ್ಪೆಂಡ್ ಆಗಲು ಕಾರಣ ರಾಜ್ಯದ ಮುಖ್ಯಮಂತ್ರಿಯ ಪುತ್ರ.
ಆದರೆ ಇದೇ ಪುತ್ರನ ಕಾನೂನುಬಾಹಿರ ಕೃತ್ಯಗಳು ಅಜಯ್ ಗೆ ಅರಿವಾದಾಗ ಏನಾಗಬಹುದು? ರೆಡ್ ಹ್ಯಾಂಡ್ ಆಗಿ ಸಿಲುಕಿಸಲು ಏನೆಲ್ಲ ಪ್ರಯತ್ನ ನಡೆಸಬಹುದು? ಅವನ್ನೆಲ್ಲ ಸಿನಿಮೀಯವಾಗಿ ತೋರಿಸಿದ್ದಾರೆ.
ಚಿತ್ರದ ಕಥೆಯಲ್ಲಿ ಮೂರು ಮೂರು ಲೇಯರ್ ಗಳಿವೆ. ಆದರೆ ಅಜಯ್ ಮಾರ್ಕಾಂಡೇಯನ ಪ್ರಮುಖ ಗುರಿ ಅಪಹರಣಗೊಂಡ ಮಕ್ಕಳನ್ನು ರಕ್ಷಿಸುವುದು ಆಗಿರುತ್ತದೆ. ಈ ಪ್ರಯತ್ನದಲ್ಲಿ ದುಷ್ಟ ಶಿಕ್ಷಣೆ ನಡೆಯುತ್ತಾ ಹೋಗುತ್ತದೆ.
ಕಿಚ್ಚ ಸುದೀಪ ಮಾರ್ಕ್ ಆಗಿ ಅಬ್ಬರಿಸಿದ್ದಾರೆ. ಡ್ಯೂಟಿಯಲ್ಲಿ ಇರದ ಪೊಲೀಸ್ ಅಧಿಕಾರಿಯೊಬ್ಬರು ಎಷ್ಟೆಲ್ಲ ಸ್ವತಂತ್ರಯುತವಾಗಿ , ಸಮರ್ಥವಾಗಿ ಕಾರ್ಯನಿರ್ವಹಿಸಬಲ್ಲರು ಎನ್ನುವುದನ್ನು ಚಿತ್ರ ತೋರಿಸಿದೆ.
ಮಧ್ಯಂತರದ ಬಳಿಕ ಶುರುವಾದ ಹಾಗೆ ಆರಂಭದಲ್ಲೇ ಸಸ್ಪೆನ್ಸ್ ತುಂಬಿದ ಕಥೆಯಿಂದಲೇ ಚಿತ್ರ ಸೆಳೆಯುತ್ತದೆ. ಸುದೀಪ್ ಅವರ ಮೈಕಟ್ಟು, ಮಾತಿನಪಟ್ಟು ಆಕರ್ಷಿಸುತ್ತದೆ. ಪೊಲೀಸ್ ಸ್ಟೇಷನ್‌ನಲ್ಲೇ ನೀಡಲಾದ ಇಂಟ್ರೋ ಮತ್ತು ಬಳಿಕದ ಹಾಡುಗಳು ಆಕರ್ಷಕ. ಹಾಡಿಗೆ ಕಿಚ್ಚ ಹಾಕುವ ಹೆಜ್ಜೆ ಸರಳ ಸುಂದರ. ಮಾರ್ಕ್ ಚಿತ್ರದ ತುಂಬ ಸುದೀಪ್ ಮಾರ್ಕ್ ಎದ್ದು ಕಾಣಿಸುವಂತಿದೆ.
ಚಿತ್ರದಲ್ಲಿ ಇತರ ಪಾತ್ರಗಳು ಇದ್ದರೂ ಕಿಚ್ಚನ ವೈಭವವೇ ಮನ ತುಂಬಿಕೊಳ್ಳುತ್ತದೆ. ಹೀಗಾಗಿ ಸುದೀಪ್ ಅಭಿಮಾನಿಗಳು ನೋಡಲೇಬೇಕಾದ ಚಿತ್ರ ಇದು. ಆದರೆ ಸಿಕ್ಕ ಅವಕಾಶದಲ್ಲಿ ಅದ್ಭುತವಾಗಿ ಅಭಿನಯಿಸಿದ ಬಿ.ಎಂ ಗಿರಿರಾಜ್ ಬಗ್ಗೆ ನೆನಪಿಸಲೇಬೇಕು. ಗಿರಿರಾಜ್ ವೈದ್ಯರ ಪಾತ್ರದಲ್ಲಿ ನಟಿಸಿದ್ದಾರೆ. ಸುದೀಪ್ ತಾಯಿಯಾಗಿ ಆರಂಭಕಾಲದಲ್ಲಿ ತಾಯಿಯಾಗಿ ಜನಪ್ರಿಯರಾಗಿದ್ದ ಚಿತ್ರಾ ಶೆಣೈ ಇಲ್ಲಿಯೂ ಇದ್ದಾರೆ. ಪೊಲೀಸ್ ಅಧಿಕಾರಿಗಳಾಗಿ ಗೋಪಾಲಕೃಷ್ಣ ದೇಶಪಾಂಡೆ, ರಘು ರಾಮನಕೊಪ್ಪ ಮತ್ತು ಅರ್ಚನಾ ಕೊಟ್ಟಿಗೆ ಮೊದಲಾದವರು ನಟಿಸಿದ್ದಾರೆ.
ತಮಿಳಿನ ಪ್ರಮುಖ ನಟರಾದ ಯೋಗಿ ಬಾಬು, ನವೀನ್ ಚಂದ್ರ, ಗುರು ಸೋಮ ಸುಂದರಂ ಮತ್ತು ಮಲಯಾಳಂನ ಶೈನ್ ಟಾಮ್ ಚಾಕೋ ಮೊದಲಾದವರು ಪ್ರಮುಖ ಪಾತ್ರದಲ್ಲಿದ್ದಾರೆ. ಶೈನ್ ಟಾಮ್ ಚಾಕೋ ಖಳರ ನಡುವಿನ ಮಾಸ್ಟರ್ ಮೈಂಡ್ ಆಗಿದ್ದಾರೆ.
ಅಜನೀಶ್ ಲೋಕನಾಥ್ ಸಂಗೀತ, ಹಿನ್ನೆಲೆ ಸಂಗೀತ ಅದ್ಭುತ. ಕೆಲವೇ ಗಂಟೆಗಳೊಳಗೆ ನಡೆಯುವ ಕಥೆಯನ್ನು ಕಟ್ಟಿಕೊಟ್ಟಿರುವ ರೀತಿಯೇ ಸೊಗಸು.