ನಿಗೂಢ ಜಗತ್ತಿನಲ್ಲಿ ಆ 45 ದಿನಗಳು!
ಚಿತ್ರ: 45
ನಿರ್ದೇಶನ: ಅರ್ಜುನ್ ಜನ್ಯ
ನಿರ್ಮಾಣ: ರಮೇಶ್ ರೆಡ್ಡಿ
ತಾರಾಗಣ: ಶಿವರಾಜ್ ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ಮೊದಲಾದವರು.
ಮೊದಲ ಚಿತ್ರದ ಶೀರ್ಷಿಕೆಯಿಂದಲೇ ಗಮನ ಸೆಳೆದವರು ಅರ್ಜುನ್ ಜನ್ಯ. ಇದೀಗ ಚಿತ್ರದ ಕಥೆಯಿಂದಲೂ ತಮ್ಮ ವಿಶೇಷತೆಯನ್ನು ಉಳಿಸಿಕೊಂಡಿಕೊಂಡಿದ್ದಾರೆ. ಇದು ವ್ಯಕ್ತಿಯೊಬ್ಬನ 45 ದಿನಗಳ ಕಥೆ. ಬದುಕಿದ್ದಾಗಿನ ಕಥೆಯೋ ಅಥವಾ ಸತ್ತ ಬಳಿಕದ ಕಥೆಯೋ ಎನ್ನುವುದು ಚಿತ್ರ ಮುಗಿದ ಬಳಿಕವೇ ಅರಿವಾಗುತ್ತದೆ.
ಸಿನಿಮಾ ಶುರುವಾದ ಬಳಿಕದ ಪ್ರತಿಯೊಂದು ಫ್ರೇಮ್ ಕೂಡ ಅದ್ಭುತ. ಮೊದಲ ದೃಶ್ಯದಲ್ಲೇ ವಿನಯ್ ಎನ್ನುವ ಟೆಕ್ಕಿ ಸಂಚರಿಸುತ್ತಿದ್ದ ಬೈಕ್ ಗೆ ಅಪಘಾತವಾಗುತ್ತದೆ. ಆನಂತರ ಏನಾಗುತ್ತದೆ ಎನ್ನುವುದೆಲ್ಲ ಕುತೂಹಲಕಾರಿಯಾಗಿಯೇ ಮುಂದುವರಿಯುತ್ತದೆ. ರಾಯಪ್ಪ ಎನ್ನುವ ಭೂಗತ ಪಾತಕಿಯ ಕಾಟವನ್ನು ಕಣ್ಣಿಗೆ ಕಟ್ಟುವಂತೆ ತೋರಿಸಿದ್ದಾರೆ. ಮಧ್ಯಂತರದ ಹೊತ್ತಿಗೆ ಶಿವಪ್ಪನ ಎಂಟ್ರಿಯೊಂದಿಗೆ ಚಿತ್ರ ಕುತೂಹಲದ ಉನ್ನತ ಹಂತವನ್ನು ತಲುಪುತ್ತದೆ. ವಿರಾಮದ ಬಳಿಕ ಬಂದು ಕುಳಿತ ಪ್ರೇಕ್ಷಕನಿಗೆ ಆರಾಮವೇ ಕೊಡದಂಥ ಭರ್ಜರಿ ಯುದ್ಧ ಸನ್ನಿವೇಶಗಳಿವೆ. ಇವೆಲ್ಲದರ ಅವಸಾನವನ್ನು ಕೂಡ ಆಕರ್ಷಕವಾಗಿದೆ.
ವಿನಯ್ ಎನ್ನುವ ಟೆಕ್ಕಿಯಾಗಿ ರಾಜ್ ಬಿ ಶೆಟ್ಟಿ ನಟಿಸಿದ್ದಾರೆ. ಆರಂಭದಲ್ಲಿ ಒಂದು ಮೊಟ್ಟೆಯ ಕಥಾನಾಯಕನಂತಿರುವ ರಾಜ್ ಮಧ್ಯಂತರದ ಬಳಿಕ ಗರುಡ ಗಮನ ವೃಷಭ ವಾಹನ ನೆನಪಿಸುತ್ತಾರೆ. ವಿನಯ್ ತಾಯಿಯ ಪಾತ್ರದಲ್ಲಿ ಮಾನಸಿ ಸುಧೀರ್ ನಟಿಸಿದ್ದಾರೆ. ರಾಯಪ್ಪನಾಗಿ ಉಪೇಂದ್ರ ಅಬ್ಬರಿಸಿದ್ದಾರೆ. ಶಿವಣ್ಣನಾಗಿ ಶಿವರಾಜ್ ಕುಮಾರ್ ಸಿಕ್ಸರ್ ಹೊಡೆದಿದ್ದಾರೆ.
ಅರ್ಜುನ್ ಜನ್ಯ ಸಂಗೀತದ ಹಾಡು, ಮೈ ರೋಮಾಂಚನಗೊಳಿಸುತ್ತದೆ. ಹಿನ್ನೆಲೆ ಸಂಗೀತವೂ ಅಷ್ಟೇ ಪಾತ್ರದೊಳಗೆ ನಮ್ಮನ್ನು ಸೆಳೆದೊಯ್ಯುವಂತಿದೆ. ಸಾಹಸ, ಸಿ.ಜಿ ಎಫೆಕ್ಟ್ ಎಲ್ಲವೂ ಅಷ್ಟೇ. ಈ ಚಿತ್ರವನ್ನು ಕನ್ನಡದ ಹೆಮ್ಮೆಯ ಚಿತ್ರ ವಾಗಿಸುವಲ್ಲಿ ಅರ್ಜುನ್ ಜನ್ಯ ಅಗ್ರಗಣ್ಯರಾಗಿದ್ದಾರೆ. ಶಿವಣ್ಣ, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಹೀಗೆ ಮೂವರು ತಾರೆಯರ ಅಭಿಮಾನಿಗಳು ಕೂಡ ಖುಷಿ ಪಡುವಂಥ ಸಿನಿಮಾ ಇದು.