ಕಾಡಿನ ಹೋರಾಟದಲ್ಲಿ ಕಾಡುವ ಪ್ರೇಮದಾಟ!
ಚಿತ್ರ: ಆಪರೇಷನ್ ಲಂಡನ್ ಕೆಫೆ
ನಿರ್ದೇಶನ: ಸಡಗರ ರಾಘವೇಂದ್ರ
ನಿರ್ಮಾಣ: ವಿಜಯ್ ಕುಮಾರ್, ರಮೇಶ್ ಕೊಠಾರಿ, ದೀಪಕ್ ರಾಣೆ.
ತಾರಾಗಣ: ಕವೀಶ್ ಶೆಟ್ಟಿ, ಮೇಘಾ ಶೆಟ್ಟಿ, ಅರ್ಜುನ್ ಕಾಪಿಕಾಡ್ ಮೊದಲಾದವರು.
ಅದು ಕಾಡಿಗೆ ಹೊಂದಿಕೊಂಡಂತಿರುವ ಹಳ್ಳಿ. ಆ ಹಳ್ಳಿಯ ಮಂದಿಗೆ ಪುನರ್ವಸತಿ ನೀಡುವುದಾಗಿ ಹೇಳಿ ಖಾಲಿ ಮಾಡಲು ಬಯಸುವ ಸರಕಾರ. ಆದರೆ ಸರಕಾರದ ಧೋರಣೆ ವಿರುದ್ಧ ಹೋರಾಡಲು ಹೇಳುವ ಹೋರಾಟಗಾರರು. ಹೆಚ್ಚಾಗಿ ಕಾಡಿನಲ್ಲೇ ಕಾಣಿಸಿಕೊಳ್ಳುವ ಅವರು ನಕ್ಸಲರು. ಸಾಮಾನ್ಯರ ಕಲ್ಪನೆಯ ನಕ್ಸಲರನ್ನು , ಅವರಲ್ಲಿನ ಕೆಲವು ಪಾತ್ರಗಳನ್ನು ಸಿನಿಮಾವಾಗಿ ಮಾಡಿದೆ ಚಿತ್ರತಂಡ.
ತಹಸೀಲ್ದಾರ ಕಚೇರಿಯಲ್ಲಿ ನಡೆಯುವ ಅನ್ಯಾಯ ಮತ್ತು ಆ ಅನ್ಯಾಯಕ್ಕೊಳಗಾದ ಯುವತಿಯ ಮನೆಯಲ್ಲಿ ನಡೆಯುವ ದುರಂತ ನಕ್ಸಲರ ಗಮನ ಸೆಳೆಯುತ್ತದೆ. ಕಚೇರಿಗೆ ನುಗ್ಗುತ್ತಾರೆ. ಯುವತಿಯನ್ನು ಕಾಡಿದ ಪೊಲೀಸ್ ಸ್ಟೇಷನ್ ಗೂ ಲಗ್ಗೆ ಹಾಕುತ್ತಾರೆ. ಯುವತಿಯನ್ನು ತಮ್ಮೊಂದಿಗೆ ಕಾಡಿಗೆ ಕರೆದೊಯ್ದು ಸದಸ್ಯೆ ಮಾಡಿಕೊಳ್ಳುತ್ತಾರೆ.
ನಕ್ಸಲರ ನಾಯಕರಲ್ಲೊಬ್ಬ ಕೇಶವ. ಆತ ನೋಡಲು ಸುಂದರ. ಆತನಿಗೊಂದು ಮಿಲಿಟರಿ ಹಿನ್ನೆಲೆ ಇದೆ. ಅದೇನು ಎನ್ನುವುದನ್ನು ಚಿತ್ರದಲ್ಲೇ ನೋಡಬೇಕು. ಆದರೆ ಈತನಿಗೆ ಮನಸೋಲುವ ಹಳ್ಳಿ ಹುಡುಗಿಯೊಬ್ಬಳಿದ್ದಾಳೆ. ಅವಳಿನ್ನೂ ಪೆನ್ಸಿಲ್ ಹಿಡಿದು ತಿರುಗಾಡುವ ವಿದ್ಯಾರ್ಥಿನಿ. ಆದರೆ ಆಕೆಯ ಮನದಲ್ಲಿ ಕೇಶವನೆಂದರೆ ವಿಪರೀತ ಪ್ರೇಮ. ಮುಂದಿನ ಎಲ್ಲ ಗಂಭೀರ ಘಟನೆಗಳಿಗೆ ಈಕೆಯ ಏಕಮುಖಿ ಪ್ರೇಮವೇ ಹೇತುವಾಗುತ್ತದೆ.
ಕೇಶವನಾಗಿ ಕವೀಶ್ ಶೆಟ್ಟಿ ಕಾಣಿಸಿದ್ದಾರೆ. ಪ್ರೇಮವನ್ನು ದೂರವಿರಿಸಿ ಹೋರಾಟಕ್ಕೆ ಮೀಸಲಾಗುವ ಯುವಕನ ಪಾತ್ರವನ್ನು ಕವೀಶ್ ಆಕರ್ಷಕವಾಗಿ ನಿಭಾಯಿಸಿದ್ದಾರೆ. ಈ ಆಕರ್ಷಣೆಗೆ ಮರುಳಾಗುವ ಹಳ್ಳಿ ಸುಂದರಿಯಾಗಿ ಮೇಘಾ ಶೆಟ್ಟಿ ನಟಿಸಿದ್ದಾರೆ. ನಕ್ಸಲರ ಹೋರಾಟಕ್ಕೆ ಕಡಿವಾಣ ಹಾಕಲು ಬರುವ ಯೋಧನಾಗಿ ಅರ್ಜುನ್ ಕಾಪಿಕಾಡ್ ಅಭಿನಯಿಸಿದ್ದಾರೆ. ಇವರಷ್ಟೇ ಅಲ್ಲದೆ ಹಿರಿಯ ನಟ ಬಿ ಸುರೇಶ್, ಮರಾಠಿ ಚಿತ್ರರಂಗದ ಶಿವಾನಿ ಸುರ್ವೆ, ವಿರಾಟ್ ಮಡ್ಕೆ, ಪ್ರಸಾದ್ ಖಾಂಡೇಕರ್ ಮೊದಲಾದವರ ತಾರಾಗಣ ಚಿತ್ರದಲ್ಲಿದೆ. ನಕ್ಸಲರ ಕಥೆ ಹೇಳುತ್ತಾ ಅಲ್ಲೊಂದು ಪ್ರೇಮಕಥೆಯನ್ನು ಹೇಳುವಲ್ಲಿ ಮತ್ತು ತ್ರಿಕೋನ ಪ್ರೇಮದ ಕಲ್ಪನೆ ಮೂಡಿಸುವಲ್ಲಿ ನಿರ್ದೇಶಕರು ಗೆದ್ದಿದ್ದಾರೆ.
ದಕ್ಷಿಣ ಕನ್ನಡದ ಹಸಿರು ಪರಿಸರಗಳನ್ನು ಆರ್.ಡಿ. ನಾಗಾರ್ಜುನ್ ತಮ್ಮ ಛಾಯಾಗ್ರಹಣದ ಮೂಲಕ ದೃಶ್ಯಕಾವ್ಯವಾಗಿಸಿದ್ದಾರೆ.
ಪಾಂಶು ಝಾ ಸಂಗೀತದ ಹಾಡುಗಳು ಒಂದೆಡೆ ಹೋರಾಟದ ಕಿಚ್ಚು ಹಚ್ಚುವಂತಿದ್ದರೆ ಮತ್ತೊಂದೆಡೆ ಪ್ರೇಮ ಸಂಗೀತದಲ್ಲೂ ಸೆಳೆಯುತ್ತವೆ. ವಿಕ್ರಂ ಮೋರ್, ಮಾಸ್ ಮಾದ ಮತ್ತು ಅರ್ಜುನ್ ರಾಜ್ ಸಾಹಸ ಅದ್ಭುತವಾಗಿದೆ. ಯುದ್ಧ ಪ್ರೇಮವನ್ನು ಹತ್ತಿರದಿಂದ ತೋರಿಸಿರುವ ಈ ಚಿತ್ರ ಪ್ರೇಕ್ಷಕರ ಮನಗೆಲ್ಲುವುದರಲ್ಲಿ ಸಂದೇಹವಿಲ್ಲ.