ಇದು ಜನುಮ ಜನುಮದ ಅಂದದ ಅನುಬಂಧ
ಚಿತ್ರ: ಗತ ವೈಭವ
ನಿರ್ದೇಶನ: ಸಿಂಪಲ್ ಸುನಿ
ನಿರ್ಮಾಣ: ದೀಪಕ್ ತಿಮ್ಮಪ್ಪ, ಸುನಿ ಸಿನಿಮಾಸ್, ಸರ್ವೆಗಾರ ಸಿಲ್ವರ್ ಸ್ಕ್ರೀನ್ಸ್
ತಾರಾಗಣ: ಎಸ್ ಎಸ್ ದುಷ್ಯಂತ್, ಆಶಿಕಾ ರಂಗನಾಥ್ ಮೊದಲಾದವರು.
ಇದು ಮೂರು ಜನ್ಮಗಳ ಕಥೆ. ಎಷ್ಟೇ ಜನ್ಮ ಎತ್ತಿದರೂ ಈ ಜೋಡಿ ಒಂದಾಗಬಾರದು ಎನ್ನುವ ದೇವಲೋಕದ ಶಾಪ ಪಡೆದ ಜೋಡಿ ಇದು. ತಮಾಷೆಯಂತೆ ಆರಂಭಗೊಳ್ಳುವ ಕಥೆ ಅಂತ್ಯದಲ್ಲಿ ವೀಕ್ಷಕರನ್ನು ಸೀಟಿನ ತುದಿಯಲ್ಲಿ ಕುಳಿತು ವೀಕ್ಷಿಸುವಂತೆ ಮಾಡುತ್ತದೆ.
ಕಥೆಯ ಆರಂಭದಲ್ಲಿ ಆತ ಆಕೆಗೆ ಅಪರಿಚಿತ. ಆದರೆ ಒಂದೇ ಭೇಟಿಯಲ್ಲಿ ಜನ್ಮಜನ್ಮಾಂತರದ ಸಂಬಂಧ ಇದೆ ಎನ್ನುವ ಸತ್ಯ ಅರಿವಾಗುತ್ತದೆ. ಇಂದಿನ ಕಾಲದ ಕಥೆಯೊಂದಿಗೆ ಆರಂಭಗೊಳ್ಳುವ ಚಿತ್ರದಲ್ಲಿ ಬೇರೆ ಬೇರೆ ಯುಗಗಳಲ್ಲಿನ ಪ್ರೀತಿಯನ್ನೇ ತೋರಿಸಲಾಗಿದೆ. ಆರಂಭದಲ್ಲಿ ಸಮುದ್ರ ಮಥನದ ಕಾಲ ಬಳಿಕ ಪೋರ್ಚುಗೀಸರ ಕಾಲ ಮತ್ತು ಸ್ವಾತಂತ್ರ್ಯ ಕಾಲದ ಸಂದರ್ಭಗಳಲ್ಲಿನ ಪ್ರೀತಿಯನ್ನು ಕೂಡ ತೋರಿಸಲಾಗಿದೆ. ಒಂದೊಂದು ಕಥೆಯೂ ಒಂದೊಂದು ಕಾಲಘಟ್ಟದ ಪ್ರೀತಿಯ ವೈಭವವನ್ನು ಸಾರಿದೆ. ಅದರಲ್ಲೂ ಮಂಗಳೂರು ಪ್ರಾಂತ್ಯದಲ್ಲಿ ನಡೆಯುವ ಪ್ರೇಮಕಥೆ ಇಡೀ ಚಿತ್ರದ ಜೀವಾಳವಾಗಿದೆ.
ಮಂಗಳೂರು ಕರಾವಳಿಯ ಕಂಬಳ, ದೈವಾರಾಧನೆ ಎಲ್ಲವನ್ನು ಕಣ್ಣಿಗೆ ಕಟ್ಟುವಂತೆ ತೋರಿಸಿರುವ ಕೀರ್ತಿ ಸುನಿಗೆ ಸಲ್ಲುತ್ತದೆ. ಅಲ್ಲಿ ನಾಯಕಿಯ ಹೆಸರು ಮಂಗಳ. ಆಕೆ ತಾನು ಕಂಡಿರದ ಕಂಬಳ ವೀರನಿಗೆ ಕಳಿಸುವ ಪತ್ರಗಳು, ಅದಕ್ಕೆ ದೊರೆಯುವ ಉತ್ತರಗಳು ಪ್ರತಿಯೊಂದು ಕೂಡ ಕುತೂಹಲಕಾರಿಯಾಗಿ ಸಾಗಿವೆ.
ಗತವೈಭವ ಎನ್ನುವ ಹೆಸರಿಗೆ ತಕ್ಕಂತೆ ಕಳೆದು ಹೋದ ಕಾಲದ ಪ್ರತಿಯೊಂದು ಸಂದರ್ಭವನ್ನು ವೈಭವವಾಗಿ ತೋರಿಸಿರುವ ಕೀರ್ತಿ ಸುನಿಗೆ ಸಲ್ಲುತ್ತದೆ. ನವನಾಯಕ ನಟ ದುಷ್ಯಂತ್ ಅದ್ಭುತವಾಗಿ ತಮ್ಮ ಪುರಾತನ ಪಾತ್ರವನ್ನು ನಿಭಾಯಿಸಿದ್ದಾರೆ. ಜನ್ಮಜನ್ಮಾಂತರದ ಪ್ರೀತಿಯನ್ನು ಹೇಳುವ ನಾಯಕಿ ಆಧುನಿಕ ಪಾತ್ರದಲ್ಲಿ ಆಶಿಕಾ ರಂಗನಾಥ್ ಗತವೈಭವ ಮೆರೆದಿದ್ದಾರೆ. ಎಲ್ಲ ಕಾಲ ಘಟ್ಟಗಳಲ್ಲೂ ಹೊಂದಿಕೊಳ್ಳುವಂಥ ವಸ್ತ್ರ ಶೈಲಿಯಲ್ಲಿ ಅದ್ಭುತವಾಗಿ ಮಿಂಚಿದ್ದಾರೆ.
ನಿರ್ದೇಶಕ ಸುನಿ, ಪ್ರಧಾನ ಪಾತ್ರಗಳ ಜತೆಯಲ್ಲಿಯೇ ಪೋಷಕ ಪಾತ್ರಗಳಿಗೂ ಮೆರುಗು ತಂದುಕೊಟ್ಟಿದ್ದಾರೆ. ಹಾಲು ಮಾರಾಟಗಾರ ಬಡಾಯಿ ಸುರೇಶನ ಪಾತ್ರ ಇದಕ್ಕೆ ಸ್ಪಷ್ಟವಾದ ಉದಾಹರಣೆ. ಈ ಪಾತ್ರವನ್ನು ನಿಭಾಯಿಸಿರುವ ರಂಗಿತರಂಗ ರಫೀಕ್ ಖ್ಯಾತಿಯ ಕಾರ್ತಿಕ್ ಮನದಲ್ಲೇ ಉಳಿಯುತ್ತದೆ.