ಒಂದು ಮುತ್ತಿನ ಕನಸು ಕಾಣುವ ಉಡಾಳ
ಚಿತ್ರ: ಉಡಾಳ
ನಿರ್ದೇಶಕರು: ಅಮೋಲ್ ಪಾಟೀಲ್
ನಿರ್ಮಾಪಕರು: ರವಿ ಶಾಮನೂರು ಮತ್ತು ಯೋಗರಾಜ್ ಭಟ್
ತಾರಾಗಣ: ಪೃಥ್ವಿ ಶಾಮನೂರು, ಹೃತಿಕ ಶ್ರೀನಿವಾಸ ಮೊದಲಾದವರು.
ಸಂಪೂರ್ಣವಾಗಿ ಉತ್ತರ ಕರ್ನಾಟಕದ ಕಥೆಗೆ ಮತ್ತು ಪ್ರತಿಭೆಗಳಿಗೆ ಒತ್ತು ನೀಡಿರುವಂಥ ಚಿತ್ರ ಇದು. ಸಿನಿಮಾದ ಒಟ್ಟು ಚಿತ್ರೀಕರಣ ಬಿಜಾಪುರದಲ್ಲೇ ನಡೆದಿದೆ.
ಆತ ಬಿಜಾಪುರದಲ್ಲಿ ಗೋಲ್ ಗುಂಬಜ್ ಸುತ್ತಾಡಿಸುವ ಗೈಡ್. ಹುಟ್ಟಿನಿಂದ ಅನಾಥ. ಆದರೆ ಆತನಿಗೆ ಸದ್ಯಕ್ಕೆ ಇರುವುದು ಒಂದು ಮುತ್ತಿನ ಆಸೆ ಮಾತ್ರ. ಅದು ಕೂಡ ಕನಸಿನಲ್ಲಿ ಕಂಡ ತುಟಿಗಳು. ಕನಸಲ್ಲಿ ಕಂಡ ತುಟಿಗಳು ಮತ್ತೆ ಅವಳಿಗೆ ಕಾಣಿಸಿದ್ದು ಪಿಂಕಿ ಪಾಟೀಲ್ ಎನ್ನುವ ವಿದ್ಯಾರ್ಥಿನಿಯಲ್ಲಿ. ಅವಳಿಗಾಗಿ ಮತ್ತೆ ಕಾಲೇಜು ಸೇರುವ ಈ ಗೈಡ್ ಪಾಠ ಕಲಿತದ್ದಕ್ಕಿಂತ ಡ್ರಾಮ ಮಾಡಿದ್ದೇ ಹೆಚ್ಚು. ಈ ಡ್ರಾಮದಲ್ಲಿ ನಡೆಯುವ ಗೋಲ್ಮಾಲ್ ಗಳೇ ಉಡಾಳ ಸಿನಿಮಾದ ಹಿನ್ನೆಲೆ.
ಈ ಚಿತ್ರದಲ್ಲಿ ಪಕ್ಯ ಯಾನೆ ಪ್ರಕಾಶ ಎನ್ನುವ ಅಮರ ಪ್ರೇಮಿ
ಗೈಡ್ ಪಾತ್ರದಲ್ಲಿ ಪೃಥ್ವಿ ಶಾಮನೂರು ಕಾಣಿಸಿಕೊಂಡಿದ್ದಾರೆ. ಆತನ ಪಾಲಿಗೆ ಪ್ರೀತಿ ಉಳಿದವರಿಗೆ ಭೀತಿಯಾಗಿ ಕಾಡುವ ಸುಂದರಿ ಹೃತಿಕ ಶ್ರೀನಿವಾಸ್ ಚಿತ್ರದ ನಾಯಕಿ. ಈ ಇಬ್ಬರ ಪ್ರೇಮದ ನಡುವೆ ಒಬ್ಬ ಡಾನ್ ಕಥೆಯೂ ಸೇರಿಕೊಳ್ಳುತ್ತದೆ. ಡಾನ್ ಮಾರ್ತಾಂಡ ಸಾಟೆಯಾಗಿ ಬಲ ರಾಜವಾಡಿ ನಟಿಸಿದ್ದಾರೆ. ರ್ಯಾಗಿಂಗ್ ಮಾಡುವ ಕಾಲೇಜ್ ವಿದ್ಯಾರ್ಥಿಯಾಗಿ
ಮಾಳು ನಿಪ್ನಾಳ್ ಕಾಣಿಸಿದ್ದಾರೆ.
ಯೋಗರಾಜ್ ಭಟ್ ಅವರು ಬರೆದಿರುವ ಐದು ಹಾಡುಗಳು ಪರದೆ ಮೇಲೆ ಗಿಚ್ಚಿ ಗಿಲಿಗಿಲಿ ಮಾಡಿವೆ. ಚೇತನ್ ಡ್ಯಾವಿ ಸಂಗೀತ ನೀಡಿದ್ದಾರೆ. ಶಿವಶಂಕರ್ ನೂರಂಬಡ ಛಾಯಾಗ್ರಹಣದಲ್ಲಿ ಪ್ರೀತಿ, ಪ್ರೇಮ, ಸಾಹಸದ ದೃಶ್ಯಗಳು ಚೆನ್ನಾಗಿ ಮೂಡಿ ಬಂದಿವೆ.
ಮಕ್ಕಳಿಲ್ಲದ ತಾಯಿಯ ಪ್ರೀತಿ, ತಂದೆ ತಾಯಿ ಇರದ ಪುತ್ರನ ಉಡಾಳತನ ಮತ್ತು ಬಿಜಾಪುರದ ಬೆಂಕಿಯಂಥ ಹುಡುಗಿಯ ಚೆಲ್ಲಾಟ ಎಲ್ಲವನ್ನು ಉಡಾಳ ಗರಿಗರಿಯಾಗಿ ಬಿಚ್ಚಿಟ್ಟಿದೆ.