Kite Brothers.Reviews

Wednesday, November 12, 2025

 

ಬದುಕಿಗಾಗಿ ಫೈಟ್ ಮಾಡುವ ಕೈಟ್ ಬ್ರದರ್ಸ್!

 

ಚಿತ್ರ: ಕೈಟ್ ಬ್ರದರ್ಸ್

ನಿರ್ದೇಶನ: ವಿರೇನ್ ಸಾಗರ್ ಬಗಡೆ

ನಿರ್ಮಾಪಕರು: ಬಿ.ಎಸ್ ಮಂಜುನಾಥ್, ರಜನಿಕಾಂತ್ ರಾವ್ ದಳವಿ

ತಾರಾಗಣ: ಪ್ರಣೀಲ್ ನಾಡ್ಗಿರ್, ವಿನೋದ್ ಬಗಡೆ, ಸಮರ್ಥ್ ಆಶಿ, ಶ್ರೇಯಾ ಹರಿಹರ ಮೊದಲಾದವರು.

 

 

ಇದು ಉತ್ತರ ಕರ್ನಾಟಕದ ಒಂದು ಹಳ್ಳಿಯ ಕಥೆ. ಅಲ್ಲೊಂದು ಮುರುಕು ಸರ್ಕಾರಿ ಶಾಲೆ. ಸಹಜವಾಗಿಯೇ ಅದರ ವಿದ್ಯಾರ್ಥಿಗಳೆಲ್ಲ ಬಡವರು. ಆ ಶಾಲೆಗೆ ತಮ್ಮ ಮಕ್ಕಳನ್ನು ಕಳಿಸುವ ಪ್ರತಿ ತಂದೆತಾಯಿಯ ಮನದೊಳಗೂ ಒಂದು ದೊಡ್ಡ ಕನಸು. ತಾವು ಪಟ್ಟ ಕಷ್ಟ ಮಕ್ಕಳು‌ ಪಡದಿರಲಿ ಎನ್ನುವ ಆ ಕನಸನ್ನು ಮಕ್ಕಳು ವಿದ್ಯಾಭ್ಯಾಸ ಪಡೆದು ನನಸು ಮಾಡಲಿ ಎನ್ನುವುದು ಅವರ ಆಶಯ. ಸರ್ಕಾರಿ ಶಾಲೆಯ ವಿದ್ಯಾರ್ಥಿ ಹನುಮಂತನಿಗೆ ಪಕ್ಕದ ಆಂಗ್ಲಮಾಧ್ಯಮ‌ ಶಾಲೆಯ ಶ್ರೀರಾಮನೆಂದರೆ ಆತ್ಮೀಯತೆ. ಎರಡು ಜಾತಿ, ಎರಡು ಆರ್ಥಿಕ ಪರಿಸ್ಥಿತಿಯ ಪ್ರತಿನಿಧಿಗಳಾದ ಇವರಿಬ್ಬರು ಕೂಡ ಸ್ನೇಹದಲ್ಲಿ ಮಾತ್ರ ಸದಾ ಒಂದು. ಆದರೆ ಒಂದು ಮಳೆಗಾಲದ ಭಾರೀ ಗಾಳಿಮಳೆಗೆ ಸರ್ಕಾರಿ ಶಾಲೆ ಮುರಿದು ಬೀಳುತ್ತದೆ. ಅದನ್ನು ಮತ್ತೆ ಕಟ್ಟಲು ಟೊಂಕ‌ಕಟ್ಟಿ‌ ನಿಂತ ಹನುಮ ಮತ್ತು ಶ್ರೀರಾಮ ಕೈಗೊಂಡ ತೀರ್ಮಾನ ಏನು ಎನ್ನುವುದೇ ಚಿತ್ರದ ಹೈಲೈಟ್.

ಕೈಟ್ ಬ್ರದರ್ಸ್ ಎನ್ನುವ ಚಿತ್ರದ ಹೆಸರಿಗೆ ತಕ್ಕಂತೆ ಗಾಳಿಪಟ ಹಾರಿಸಿ ಸಾಧನೆ ಮಾಡಲು ಬಯಸುವ ಇಬ್ಬರು ಹುಡುಗರ ಕಥೆ ಇದು.‌ ಹನುಮ‌ ಮತ್ತು ರಾಮನ ಪಾತ್ರಧಾರಿಗಳು ಇಡೀ ಚಿತ್ರದ ಕೇಂದ್ರ ಬಿಂದು. ಗಾಳಿ‌ಪಟ ತಯಾರಿಸಿ ಮಾರಾಟಕ್ಕಾಗಿ ನಗರಕ್ಕೆ ಸೈಕಲ್ ತುಳಿಯುವ ಹನುಮನ ಬಡ ತಂದೆಯ ಪಾತ್ರ, ಜಾತಿ ಪದ್ಧತಿಯ ವಿರುದ್ಧ ನಿಂತು ಮಕ್ಕಳೆಲ್ಲ ಒಂದೇ ಎನ್ನುವ ಶ್ರೀರಾಮನ ತಂದೆ ಕುಲಕರ್ಣಿಯ ಪಾತ್ರವಾಗಲೀ ಪ್ರತಿಯೊಂದು‌ ಕೂಡ ನೈಜ ನಟನೆಯಿಂದ ಗಮನ ಸೆಳೆದಿವೆ. ಎಲ್ಲಕ್ಕಿಂತ ಮುಖ್ಯವಾಗಿ ಸರ್ಕಾರಿ ಶಾಲೆಯ ಶಿಕ್ಷಕನ ಪಾತ್ರವನ್ನು ಮರೆಯಾದ ಕವಿ ಬೇಂದ್ರೆಯವರನ್ನು ಹೋಲುವ ವ್ಯಕ್ತಿಗೆ ನೀಡಲಾಗಿದೆ. ಇದು ಶಿಕ್ಷಕನ‌ ಪಾತ್ರಕ್ಕೆ ಇನ್ನಷ್ಟು ಶಕ್ತಿ ತಂದುಕೊಟ್ಟಂತಾಗಿದೆ. ಅದೇ ರೀತಿ ಶ್ರೀರಾಮನ ಪಾತ್ರಕ್ಕೆ ಕನಸಲ್ಲಿ ಪದೇಪದೆ ಮಹಾತ್ಮಾ ಗಾಂಧೀಜಿ ಬರುವುದು ಮತ್ತು ಶ್ರೀರಾಮನೊಡನೆ ಮಾತುಕತೆ ನಡೆಸುವುದು ಕೂಡ ಪ್ರೇಕ್ಷಕರ‌ ಮೇಲೆ ಉತ್ತಮವಾಗಿ ಪರಿಣಾಮ ಬೀರುವ ದೃಶ್ಯಗಳಾಗಿವೆ.

 

 

ನಿರ್ದೇಶಕ ವಿರೇನ್ ಸಾಗರ್ ಎಳೆಯ ಮಕ್ಕಳಿಂದ‌ ಅದ್ಭುತವಾದ ಅಭಿನಯವನ್ನು ಹೊರತೆಗೆದಿದ್ದಾರೆ. ಆ ದೃಶ್ಯಗಳನ್ನು ದೃಶ್ಯ ಮಾಂತ್ರಿಕ ಅಶೋಕ್ ಕಶ್ಯಪ್ ತಮ್ಮ ಛಾಯಾಗ್ರಹಣದಲ್ಲಿ ಆಕರ್ಷಕವಾಗಿ ಸೆರೆ ಹಿಡಿದಿದ್ದಾರೆ. ಇವೆರಡು ಪಾಸಿಟಿವ್ ಅಂಶಗಳ ಜತೆಯಲ್ಲೇ ಸರ್ಕಾರಿ ಶಾಲೆಯ ಬಗ್ಗೆ ಕಾಳಜಿ ಹೊಂದಿರುವ ಈ ವಸ್ತು ಮತ್ತು ಮಕ್ಕಳ ಸಾಧನೆಗೆ ಪೂರಕವಾಗುವ ಕಥೆ ಕೂಡ ಪ್ರೇಕ್ಷಕರ ಮನಗೆಲ್ಲುತ್ತದೆ.

 

Copyright@2018 Chitralahari | All Rights Reserved. Photo Journalist K.S. Mokshendra,