ಜೋರಾಗಿ ಬಂದು ತಣ್ಣಗೆ ಅಪ್ಪಳಿಸುವ ’ಮಾರುತ’
ನಿರ್ದೇಶನ: ಎಸ್ ನಾರಾಯಣ್
ನಿರ್ಮಾಣ: ಕೆ ಮಂಜು
ತಾರಾಗಣ: ದುನಿಯಾ ವಿಜಯ್, ಶ್ರೇಯಸ್ ಮಂಜು, ವಿ ರವಿಚಂದ್ರನ್ ಮೊದಲಾದವರು.
ಸೋಶಿಯಲ್ ಮೀಡಿಯಾದ ದುರ್ಬಳಕೆಯಿಂದ ಆಗುತ್ತಿರುವ ಪರಿಣಾಮಗಳ ಬಗ್ಗೆ ಈ ಚಿತ್ರ ಎನ್ನುವುದು ಆರಂಭದಲ್ಲೇ ನಿರ್ದೇಶಕರು ಕೊಡುವ ಸೂಚನೆ. ಕಥೆ ಶುರುವಾದಾಗಲೇ ಅದರ ದಟ್ಟ ಸೂಚನೆ ದೊರೆಯುತ್ತದೆ. ಈಶನೆಂಬ ಹಳ್ಳಿ ಹುಡುಗ ಮಂದಮಾರುತದಂತೆ ನಗರ ಸೇರಿರುತ್ತಾನೆ. ಆದರೆ ಆತನಿಗೆ ಎದುರಾಗುವ ಬಿರುಗಾಳಿಯಂಥ ಸಮಸ್ಯೆಗಳಿಗೆ ಚಂಡಮಾರುತವಾಗಿ ಉತ್ತರ ನೀಡುವಾತನೇ ಪೊಲೀಸ್ ಅಧಿಕಾರಿ ಅಮರೇಶ್ ಪಾಟೀಲ್. ಈಶನ ಕ್ಲೇಶಗಳೇನು? ಅಮರೇಶ ಅದನ್ನು ಕಳೆಯುವುದು ಯಾವ ರೀತಿ ಎಂದು ತಿಳಿಯಲು ಸಿನಿಮಾ ನೋಡಬೇಕು.
ಈಶ ಮಲೆನಾಡಿನ ಹುಡುಗ. ದಿನಸಿ ಅಂಗಡಿ ಚಂದ್ರಪ್ಪನ ಏಕೈಕ ಪುತ್ರ. ಚಂದ್ರಪ್ಪ ಈತನನ್ನು ಸಾಲಸೋಲ ಮಾಡಿ ಕಾಲೇಜ್ ಕಲಿಸಲೆಂದು ನಗರಕ್ಕೆ ಕಳಿಸಿರುತ್ತಾನೆ. ಆದರೆ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿಮಾನಿಯಾದ ಈತ ನಿರ್ದೇಶಕನಾಗಲು, ಬಳಿಕ ಹೀರೋವಾಗಲು ಕನಸು ಕಾಣುತ್ತಾನೆ. ವಿದ್ಯಾರ್ಥಿ ಜೀವನದಲ್ಲಿ ಎಡವಿದ ಈತ ಸಂಪೂರ್ಣವಾಗಿ ತನ್ನ ಹಳ್ಳಿಯನ್ನೇ ತೊರೆಯಬೇಕಾದ ಸಂದರ್ಭ ಸೃಷ್ಟಿಯಾಗುತ್ತದೆ. ಇದಕ್ಕೆ ಪಕ್ಕದ ಮನೆ ಹುಡುಗಿ ಅನನ್ಯ ಕೂಡ ಕಾರಣವಾಗಿರುತ್ತಾಳೆ. ಮತ್ತೊಂದೆಡೆ ಅನನ್ಯಾಗೂ ಸೋಶಿಯಲ್ ಮೀಡಿಯಾದಿಂದ ಅನ್ಯಾಯವಾಗಿರುತ್ತದೆ. ಇದೆಲ್ಲದರ ಪರಿಹಾರಕ್ಕಾಗಿ ಮಾರುತದಂತೆ ಎಂಟ್ರಿ ನೀಡುವಾತನೇ ಪೊಲೀಸ್ ಅಧಿಕಾರಿ ಅಮರೇಶ್ ಪಾಟೀಲ್.
ಈಶನಾಗಿ ಶ್ರೇಯಸ್ ಮಂಜು ನಟನೆ ಆಹ್ಲಾದ ನೀಡುತ್ತದೆ. ಪ್ರೇಮಲೋಕದ ರವಿಚಂದ್ರನ್ ಸ್ಟೈಲ್ ನಲ್ಲಿ ಎಂಟ್ರಿ ನೀಡುವ ಶ್ರೇಯಸ್ ಗೆ ಸ್ವತಃ ರವಿಚಂದ್ರನ್ ಅವರನ್ನು ಭೇಟಿಯಾಗುವ ಸನ್ನಿವೇಶವಿದೆ. ಅದು ಚಿತ್ರದ ಆಕರ್ಷಕ ದೃಶ್ಯಗಳಲ್ಲಿ ಒಂದು. ಅದೇ ರೀತಿ ಮಾರುತದಂತೆ ಬರುವ ದುನಿಯಾ ವಿಜಯ್ ಶ್ರೇಯಸ್ ಪಾತ್ರಕ್ಕೆ ಬೆಂಬಲವಾಗಿ ನಿಂತಿದ್ದಾರೆ. ದುನಿಯಾ ವಿಜಯ್ ಸ್ಟಾರ್ ಇಮೇಜ್ ಗೆ ಹೊಂದುವಂಥ ದೃಶ್ಯಗಳನ್ನು ನಿರ್ದೇಶಕ ಎಸ್ ನಾರಾಯಣ್ ಕಟ್ಟಿಕೊಟ್ಟಿದ್ದಾರೆ.
ಚಿತ್ರದ ನಾಯಕಿ ಅನನ್ಯಾ ಪಾತ್ರದಲ್ಲಿ ಬೃಂದಾ ಆಚಾರ್ಯ ಅಭಿನಯಿಸಿದ್ದಾರೆ. ಈಶನ ತಂದೆ ಚಂದ್ರಪ್ಪನಾಗಿ ಶರತ್ ಲೋಹಿತಾಶ್ವ ನೀಡಿರುವ ನಟನೆ ಅದ್ಭುತವಾಗಿದೆ. ವಿಲನ್ ಲುಕ್ ಗೆ ಹೆಸರಾದ ಇವರು ಭಾವನಾತ್ಮಕ ಸನ್ನಿವೇಶಗಳಲ್ಲಿ ರೋಮಾಂಚನ ಮೂಡಿಸುವಂತೆ ನಟಿಸಿದ್ದಾರೆ. ಚಂದ್ರಪ್ಪನ ಪತ್ನಿಯ ಪಾತ್ರವನ್ನು ತಾರಾ ಅನುರಾಧ ನಿಭಾಯಿಸಿದ್ದಾರೆ. ತಾರಾ ತಮ್ಮನಾಗಿ, ನಾಯಕನ ಪಾಲಿನ ಪ್ರೀತಿಯ ಮಾವನಾಗಿ ಸಾಧುಕೋಕಿಲ ನಗು ತರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಳ್ಳಿಯ ಪ್ರಚಾರ ಪ್ರಿಯ ರಾಜಕಾರಣಿಯಾಗಿ ರಂಗಾಯಣ ರಘು ನಟಿಸಿದ್ದಾರೆ.
ಚಿತ್ರದಲ್ಲಿ ಸಾಂದರ್ಭಿಕವಾಗಿ ಮೂಡಿ ಬಂದಿರುವ ಹಾಡುಗಳಿಗೆ ಜೆಸ್ಸಿ ಗಿಫ್ಟ್ ಸಂಗೀತ ಆಕರ್ಷಕವಾಗಿದೆ. ಸವದತ್ತಿ ಯಲ್ಲಮ್ಮನ ಗೀತೆಯಂತೂ ಭಕ್ತಿಪರವಶಗೊಳಿಸುತ್ತದೆ. ಆ್ಯಕ್ಷನ್, ಸೆಂಟಿಮೆಂಟ್, ಭಕ್ತಿ ಎಲ್ಲವನ್ನೂ ಸೇರಿಸಿರುವ ಅಧ್ಭುತ ಚಿತ್ರದ ಮೂಲಕ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣವನ್ನೇ ಬಡಿಸಲಾಗಿದೆ.