ಪಾತಕಿಗಳ ವಿರುದ್ಧದ ರೋಮಾಂಚಕಾರಿ ಹೋರಾಟ
ಚಿತ್ರ: ದಿ ಟಾಸ್ಕ್
ನಿರ್ದೇಶನ: ರಾಘು ಶಿವಮೊಗ್ಗ
ನಿರ್ಮಾಣ: ವಿಜಯ ಕುಮಾರ್ ಸಿ, ರಾಮಣ್ಣ ಇ.
ತಾರಾಗಣ: ಜಯಸೂರ್ಯ ಆರ್ ಅಜಾದ್, ಸಾಗರ್ ರಾಮ್ ಮೊದಲಾದವರು
ಇಬ್ಬರು ಹೊಸ ಮುಖಗಳನ್ನು ನಾಯಕರಾಗಿಸಿರುವ ನಿರ್ದೇಶಕ ರಾಘು ಶಿವಮೊಗ್ಗ ಅದ್ಭುತವಾದ ಚಿತ್ರವೊಂದನ್ನು ತೆರೆಗೆ ತಂದಿದ್ದಾರೆ. ವೈದ್ಯಕೀಯ ಲೋಕದ ಕರಾಳಮುಖದ ಪರಿಚಯ ಮಾಡುತ್ತಾ ಕುತೂಹಲಕಾರಿ ಕ್ರೈಮ್ ಥ್ರಿಲ್ಲರ್ ಚಿತ್ರವನ್ನು ಪ್ರೇಕ್ಷಕರಿಗೆ ನೀಡಿದ್ದಾರೆ.
ಸಮಾಜದ ಬಗ್ಗೆ ಕಾಳಜಿ ಇರುವ ವ್ಯಕ್ತಿಗಳಾಗಿ ಗುರುತಿಸಿಕೊಂಡವರು ಸಮಾಜ ಸುಧಾರಣೆಗೆ ಮುಂದಾದಾಗ ಎದುರಾಗುವ ಸವಾಲುಗಳು ಅದೆಷ್ಟು ಎನ್ನುವುದನ್ನು ಸಿನಿಮಾ ತೋರಿಸಿದೆ.
ಸೂರ್ಯಪ್ರಕಾಶ್ ಎನ್ನುವಾತ ವೈದ್ಯಕೀಯ ಲೋಕದ ಕರಾಳಮುಖವನ್ನು ಹೊಂದಿರುವ ವ್ಯಕ್ತಿ. ಕೋವಿಡ್ ಲಸಿಕೆಯ ಪ್ರಯೋಗಕ್ಕಾಗಿಯೇ ರೋಗಭಾದಿತ ವ್ಯಕ್ತಿಗಳನ್ನು ಬಲಿಪಶುವಾಗಿ ಬಳಸಿಕೊಂಡವನು. ಈ ಸತ್ಯವನ್ನು ನೋಡಿ ಯಾರೆಲ್ಲ ಸಮಸ್ಯೆಗೆ ಕಾರಣರಾಗಬಹುದು ಎಂದು ಕಾಣಿಸುತ್ತದೋ ಅಂಥವರನ್ನೆಲ್ಲ ಯಮಪುರಿಗೆ ಅಟ್ಟುತ್ತಾನೆ. ಇಂಥ ಸಂದರ್ಭದಲ್ಲೇ ಒಂದು ಸಾಕ್ಷಿ ಉಳಿದು ಬಿಡುತ್ತದೆ. ಆಕೆಯೇ ಸಿರಿ. ಆಕೆಯನ್ನು ಸಾಕ್ಷಿಯಾಗಿ ಕೋರ್ಟ್ ಮುಂದೆ ಹಾಜರುಪಡಿಸುವ ಪ್ರಯತ್ನವೇ ದಿ ಟಾಸ್ಕ್.
ಸಾಕ್ಷಿ ಹುಡುಗಿಯನ್ನು ಕೊಡಗಿನ ಹಳ್ಳಿಯಿಂದ ಬೆಂಗಳೂರಿಗೆ ಕರೆ ತರುವ ಪ್ರಯತ್ನದಲ್ಲಿ ಹೊಸ ಹೊಸ ಪಾತ್ರಗಳ ಪರಿಚಯವಾಗುತ್ತಲೇ ಹೋಗುತ್ತದೆ. ಈ ಟಾಸ್ಕ್ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿಯನ್ನು ಕೈಗೆತ್ತಿಕೊಳ್ಳುವ ಕಂಠಿ ಮತ್ತು ವಿಷ್ಣು ಎನ್ನುವ ಇಬ್ಬರು ಯುವ ಪ್ರತಿಭೆಗಳನ್ನು ಪ್ರಧಾನ ಪಾತ್ರಗಳಾಗಿ ಬಳಸಿಕೊಳ್ಳಲಾಗಿದೆ. ಕಂಠಿಯಾಗಿ ಜಯಸೂರ್ಯ ಆರ್ ಆಜಾದ್, ವಿಷ್ಣುವಾಗಿ ಸಾಗರ್ ರಾಮ್ ಅದ್ಭುತವಾಗಿ ನಟಿಸಿದ್ದಾರೆ. ಇವರಿಬ್ಬರು ನಟನೆ ಮಾತ್ರವಲ್ಲ, ಚಿತ್ರದ ತುಂಬ ಇರುವ ಹೊಡೆದಾಟಗಳಲ್ಲಿ ತಮ್ಮ ಸಾಹಸ ಪ್ರದರ್ಶನ ಮಾಡಿದ್ದಾರೆ. ಇವರಿಬ್ಬರನ್ನು ಕಣಕ್ಕಿಳಿಸುವ ಸೂತ್ರಧಾರ, ನಿವೃತ್ತ ಪೊಲೀಸ್ ಅಧಿಕಾರಿಯಾಗಿ ಅಚ್ಯುತ್ ಕುಮಾರ್ ನಟಿಸಿದ್ದಾರೆ. ಆದರೆ ಪೊಲೀಸ್ ಅಧಿಕಾರಿಗೆ ಈ ಮಾಹಿತಿ ಒದಗಿಸುವ ಮಹಿಳೆಯಾಗಿ, ಇಡೀ ಪ್ರಕಣರವನ ಕೈಗೆತ್ತಿಕೊಳ್ಳುವ ಲಾಯರ್ ಪ್ರತಿಮಾ ಪಾತ್ರದಲ್ಲಿ ಸಂಗೀತಾ ಭಟ್ ಅಭಿನಯಿಸಿದ್ದಾರೆ. ಸಾಕ್ಷಿ ಸಿರಿಯಾಗಿ ಕಾಣಿಸಿರುವ ಬಾಲನಟಿ ಶ್ರೀಲಕ್ಷ್ಮೀ ನಿಜವಾಗಿಯೂ ಚಿತ್ರದ ಸಿರಿಯಾಗಿದ್ದಾರೆ.
ಚಿತ್ರಕಥೆ, ಸಂಭಾಷಣೆಗಳನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವ ವಿಚಾರದಲ್ಲಿ ರಾಘು ಶಿವಮೊಗ್ಗ ನುರಿತ ಪಂಟರಾಗಿದ್ದಾರೆ. ನಿರ್ದೇಶನದ ಜತೆಯಲ್ಲೇ ಭರಮಪ್ಪ ಎನ್ನುವ ಕ್ರೂರ ಖಳನಪಾತ್ರವನ್ನು ಕೂಡ ನಿಭಾಯಿಸಿದ್ದಾರೆ. ಸೂರ್ಯ ಪ್ರಕಾಶ್ ಎನ್ನುವ ದುರುಳನಾಗಿ ಬಾಲಾಜಿ ಮನೋಹರ್ ನಟನೆ ಮನದಲ್ಲಿ ಸ್ಥಾನ ಪಡೆಯುತ್ತದೆ.
ಜೂಡಸ್ಯಾಂಡಿ ಸಂಗೀತದಲ್ಲಿ ನಾಗೇಂದ್ರ ಪ್ರಸಾದ್, ನಾಗಾರ್ಜುನ ಶರ್ಮ ಮತ್ತು ಪ್ರಮೋದ್ ಮರವಂತೆ ರಚನೆಯ ಹಾಡುಗಳು ಸಾಂದರ್ಭಿಕವಾಗಿ ಮೂಡಿ ಬಂದಿವೆ.
ಒಟ್ಟು ಸಿನಿಮಾ ತನ್ನ ಕಥೆ ಮತ್ತು ನಿರೂಪಣೆಯ ಮೂಲಕ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅಪರಾಧ ಲೋಕದ ಕಥೆಯನ್ನು ಕೂಡ ಸಂದೇಶಾತ್ಮಕವಾಗಿ ಹೇಗೆ ಜನರಿಗೆ ತಲುಪಿಸಬಹುದು ಎನ್ನುವುದಕ್ಕೆ ಇದೇ ಒಂದು ಉತ್ತಮ ಉದಾಹರಣೆ.