ಹಸಿದ ಪ್ರೇಕ್ಷಕರಿಗೆ ಮನರಂಜನೆಯ ಫುಲ್ ಮೀಲ್ಸ್
ಚಿತ್ರ: ಫುಲ್ ಮೀಲ್ಸ್
ನಿರ್ದೇಶನ: ವಿನಾಯಕ ಎನ್
ನಿರ್ಮಾಪಕ: ಲಿಖಿತ್ ಶೆಟ್ಟಿ
ತಾರಾಗಣ: ಲಿಖಿತ್ ಶೆಟ್ಟಿ, ಖುಷಿ, ತೇಜಸ್ವಿನಿ
ಫೊಟೋಗ್ರಾಫಿ ಅಂದರೆ ಆತನಿಗೆ ಪ್ರಾಣ. ಆದರೆ ಅದನ್ನೇ ವೃತ್ತಿಯಾಗಿಸಿ ಯಶಸ್ಸು ಪಡೆಯಲು ಸೋತಿರುತ್ತಾನೆ. ಇಂಥ ವ್ಯಕ್ತಿಗೆ ಪ್ರಿ ವೆಡ್ಡಿಂಗ್ ಶೂಟ್ ಆಫರ್ ಒಂದು ಸಿಗುತ್ತದೆ. ಆದರೆ ಶೂಟಿಂಗ್ ಗೆ ಹೋದಾಗ ನಿಶ್ಚಿತಾರ್ಥಗೊಂಡ ಹುಡುಗಿಯೇ ಫೋಟೋಗ್ರಾಫರ್ ಜತೆಗೆ ಪ್ರೀತಿಯಲ್ಲಿ ಬೀಳುತ್ತಾಳೆ. ಅರೆ ಇದೆಲ್ಲ ಸಾಧ್ಯವಾ ಎನ್ನುವ ಸಂದೇಹವೇ ಮೂಡದಂತೆ ಕಥೆ ಹೇಳಿಕೊಂಡು ಹೋಗಿದ್ದಾರೆ ನವ ನಿರ್ದೇಶಕ ವಿನಾಯಕ.
ಮದುವೆ ನಿಶ್ಚಿತವಾದ ಹುಡುಗಿ ನಾಯಕನೊಡನೆ ಪ್ರೀತಿಯಲ್ಲಿ ಬೀಳುವ ಒಂದಷ್ಟು ಸಿನಿಮಾ ಈಗಾಗಲೇ ಬಂದಿವೆ. ಕೆಲವು ನೋವು ನೋಡಿ ಗೆದ್ದಿವೆ. ಇನ್ನು ಕೆಲವು ಸೋತು ನೋವು ನೀಡಿವೆ. ಆದರೆ ನೋವಿಗೆ ನೋವೇ ಎನ್ನುವಂತೆ ಆರಂಭದಿಂದ ಕೊನೆಯ ತನಕ ಪೂರ್ತಿ ಮನರಂಜಿಸುವಂತೆ ಮೂಡಿ ಬಂದಿರುವ ಚಿತ್ರವೇ ಫುಲ್ ಮೀಲ್ಸ್. ಮದುವೆ ಊಟ ಯಾವಾಗ ಎಂದು ಕೇಳುವವರಿಗೆ ಚಿತ್ರದ ನಾಯಕ ಫುಲ್ ಮೀಲ್ಸ್ ಖುಷಿಯನ್ನೇ ತಂದು ಕೊಟ್ಟಿದ್ದಾರೆ.
ನಾಯಕನಾಗಿ ಲಿಖಿತ್ ಶೆಟ್ಟಿಯದು ಸೆಟಲ್ಡ್ ಆಗಿರುವ ನಟನೆ. ಕೋಟು, ಸೂಟು ಹಾಕಿದಾಗ ಕ್ರೇಜಿಯಾಗಿ ಕಾಣಿಸುವ ನಾಯಕ ಮಧ್ಯಮವರ್ಗದ ಯುವಕನ ಪಾತ್ರಕ್ಕೂ ಹೊಂದಾಣಿಕೆಯಾಗುತ್ತಾರೆ. ಚಿತ್ರದಲ್ಲಿ ಇಬ್ಬರು ನಾಯಕಿಯರು. ಇಬ್ಬರು ಕೂಡ ನಾಯಕನನ್ನು ಪ್ರೀತಿಸುತ್ತಾರೆ. ಆರಂಭದಲ್ಲಿ ಇಬ್ಬರನ್ನೂ ಒಲ್ಲೆ ಎನ್ನುವ ನಾಯಕ ಕೊನೆಯಲ್ಲಿ ಯಾರ ಕೊರಳಿಗೆ ತಾಳಿಕಟ್ಟುತ್ತಾನೆ ಎನ್ನುವುದು ಸರ್ಪ್ರೈಸ್. ನಿಶ್ಚಿತಾರ್ಥಗೊಂಡ ಸುಂದರಿಯಾಗಿ ಖುಷಿ ಅಭಿನಯಿಸಿದ್ದಾರೆ. ಖುಷಿಯ ನಟನೆ ಪ್ರೇಕ್ಷಕರಿಂದ ಸಿಳ್ಳುಗಿಟ್ಟಿಸುತ್ತದೆ. ಮತ್ತೋರ್ವ ನಾಯಕಿಯಾಗಿ ತೇಜಸ್ವಿನಿ ಶರ್ಮ ನಟಿಸಿದ್ದಾರೆ.
ನಾಯಕನನ್ನು ಪ್ರೀತಿಯಿಂದ ಪೋಷಿಸುವ ಮಾವ ಪುಲಿಕೇಶಿಯಾಗಿ ರಂಗಾಯಣ ರಘು ಪಾತ್ರ ಮಾಡಿದ್ದಾರೆ. ರಘು ಜೋಡಿಯಾಗಿ ಚಂದ್ರಕಲಾಮೋಹನ್ ನಟನೆಯಿದೆ. ನಾಯಕನಿಗೆ ಛಾಯಾಗ್ರಹಣದಲ್ಲಿ ಸಹಾಯಕನಾಗಿ ಮಿರಿಂಡಾ ಪಾತ್ರವನ್ನು ವಿಜಯ್ ಚೆಂಡೂರ್ ನಿರ್ವಹಿಸಿದ್ದಾರೆ. ಉಳಿದಂತೆ ನಾಯಕಿಯ ಅಣ್ಣನಾಗಿ ನಟಿಸಿರುವ ರಾಜೇಶ್ ನಟರಂಗ, ರೆಸಾರ್ಟ್ ಮ್ಯಾನೇಜರ್ ಆಗಿ ಸುಜಯ್ ಶಾಸ್ತ್ರಿ, ಜನಪ್ರಿಯ ಛಾಯಾಗ್ರಾಹಕನ ಪಾತ್ರದಲ್ಲಿ ಹೊನ್ನವಳ್ಳಿ ಕೃಷ್ಣ ಹೀಗೆ ಖ್ಯಾತ ಕಲಾವಿದರ ತಾರಾಗಣವೇ ಚಿತ್ರದಲ್ಲಿದೆ.
ಗುರುಕಿರಣ್ ಸಂಗೀತದಲ್ಲಿ ಮೂಡಿ ಬಂದಿರುವ ಹಾಡು ಮತ್ತು ಹಿನ್ನೆಲೆ ಸಂಗೀತ ಅದ್ಭುತವಾದ ಮೋಡಿಯನ್ನೇ ಮಾಡಿದೆ. ಚಿತ್ರದ ಸಂಭಾಷಣೆ ಮತ್ತೊಂದು ಹೈಲೈಟ್. ಮನರಂಜನೆಯ ಫುಲ್ ಮೀಲ್ಸ್ ಆಗಿ ಮೂಡಿ ಬಂದಿರುವ ಈ ಸಿನಿಮಾ ಮಿಸ್ ಮಾಡದೇ ನೋಡಬಹುದು.