Radheya.Film Reviews

Wednesday, November 19, 2025

 

ಸರಣಿ‌ ಕೊಲೆಗಾರನ‌ ಕರುಣೆ ತುಂಬಿದ ಕಥೆ!

 

ಚಿತ್ರ: ರಾಧೇಯ

ನಿರ್ದೇಶಕ: ವೇದಗುರು

ನಿರ್ಮಾಣ: ಕೀರ್ತಿ ಚಹ್ನ ಸಿನಿಮಾ ಕಾರ್ಖಾನೆ

ತಾರಾಗಣ: ಅಜಯ್ ರಾವ್, ಧನ್ಯಾ ಬಾಲಕೃಷ್ಣ, ಸೊನಾಲ್ ಮೊಂತೆರೋ‌ ಮೊದಲಾದವರು

 

 

ಆತ 36 ಕೊಲೆಗಳನ್ನು ಮಾಡಿದವನು. ಈ ಸರಣಿ ಹಂತಕನನ್ನು ಅದೇ ಕಾರಣಕ್ಕೇನೇ ಮರಣದಂಡನೆಗೆ ಗುರಿ ಮಾಡಲಾಗುತ್ತದೆ. ಆದರೆ ಮರಣದಂಡನೆಗೆ ಒಳಗಾದ ಖೈದಿಯ ಹಿನ್ನೆಲೆ ಅರಿಯುವ ಎಸಿಪಿಯ ಮುಂದೆ ಹೊಸ ಕಥೆಯೊಂದು  ಅನಾವರಣವಾಗುತ್ತದೆ.

 

 

36 ಕೊಲೆಗಳನ್ನು ಮಾಡಿದ್ದೀಯ ಎಂದು ಪ್ರಶ್ನಿಸಿದರೆ, "ನಾನು ಮಾಡಿರುವುದು 42 ಕೊಲೆಗಳು" ಎನ್ನುವ ಕಥಾ ನಾಯಕ ತೆರೆದಿಡುವ ಒಂದೊಂದು ಕೊಲೆಯೂ ಭೀಕರವಾಗಿರುವಂಥದ್ದು. ಹೆತ್ತ ತಾಯಿಯನ್ನೇ ಕೊಂದವನು, ಗರ್ಭಿಣಿ ಪತ್ನಿಯನ್ನೇ ಕೊಲೆ ಮಾಡಿದವನು ಎನ್ನುವ ಆರೋಪ ಹೊತ್ತವನನ್ನು ಲಾಯರ್ ಭೇಟಿಯಾಗುತ್ತಿದ್ದ ಹಾಗೆಯೇ ಹೊಸ ಕಥೆಯೊಂದು ತೆರೆದುಕೊಳ್ಳುತ್ತದೆ. ಈ ಕಥೆಯನ್ನು ದಾಖಲಿಸಲೆಂದು ಕೊಲೆಗಾರನ ಆಶಯದಂತೆ ಆಗಮಿಸುವ ಪತ್ರಕರ್ತೆ ಇನ್ನಷ್ಟು ಹೊಸ ಬೆಳವಣಿಗೆಗಳಿಗೆ ಸಾಕ್ಷಿಯಾಗುತ್ತಾಳೆ.

 

 

ಪ್ರತಿಯೊಬ್ಬ ಕೊಲೆಗಾರ ಕೂಡ ತಾನು ಮಾಡಿದ ಕೊಲೆಗೆ ಸಮರ್ಥನೆ ನೀಡಬಲ್ಲವನಾಗಿರುತ್ತಾನೆ. ಆದರೆ ಇಲ್ಲಿ ಕೆಲವೊಂದು ಕೊಲೆಗಳನ್ನು ಈತ ಮಾಡಿರುವುದೇ ಇಲ್ಲ. ಇನ್ನು ಕೆಲವು ಕೊಲೆಗಳು ಈತ ನೀಡುವ ಸಮರ್ಥನೆ ಅನಿವಾರ್ಯ ಎನ್ನುವುದಾಗಿರುತ್ತದೆ. ತಾಯಿಯ ಕೊಲೆ ತಾನು ಮಾಡಿಲ್ಲ ಎನ್ನುವ ನಾಯಕ ಬಿಚ್ಚಿಡುವ ಘಟನೆಗಳು ಈತ ಹೇಗೆ ರಾಧೇಯ ಎನ್ನುವುದನ್ನು ಸಾಬೀತು ಮಾಡುತ್ತದೆ.

 

ಸರಣಿ ಹಂತಕನಾಗಿ ಅಜಯ್ ರಾವ್ ಅದ್ಭುತ ಅಭಿನಯ ನೀಡಿದ್ದಾರೆ. ತಾನು ಮುದ್ದಾದ ಮುಖ‌ ಇಟ್ಟುಕೊಂಡು ಕೃಷ್ಣನಾಗಿ ಕಾಣಿಸುವುದು ಮಾತ್ರವಲ್ಲ ಕೊಲೆಗಾರನಾಗಿ ಅಬ್ಬರಿಸುವುದಕ್ಕೂ ಸೈ ಎಂದು ಸಾಬೀತು ಮಾಡಿದ್ದಾರೆ ಅಜಯ್ ರಾವ್. ಅಜಯ್ ರಾವ್ ಪತ್ನಿಯಾಗಿ ಸೊನಾಲ್ ಮೊಂತೆರೊ ಅಭಿನಯಿಸಿದ್ದಾರೆ. ನಾಯಕನನ್ನು ಜೈಲೊಳಗೆ ಭೇಟಿಯಾಗುವ ಅನುಪಮಾ ರಂಜನ್ ಎನ್ನುವ ಪತ್ರಕರ್ತೆಯಾಗಿ ಧನ್ಯಾ ಬಾಲಕೃಷ್ಣ ಆಕರ್ಷಕ‌‌ ನಟನೆ ನೀಡಿದ್ದಾರೆ. ನಾಯಕ ಕಥೆ ಹೇಳುವ ಪ್ರತಿ ಹಂತದಲ್ಲೂ ಧನ್ಯಾ ಕುಳಿತಲ್ಲೇ ತಮ್ಮ ಮುಖಭಾವದಿಂದಲೇ ತಮ್ಮ ಪ್ರತಿಭೆ ಏನು ಎಂದು ಸಾಬೀತು ಮಾಡಿದ್ದಾರೆ.

ಇವರ ಪತಿಯಾಗಿ ನಟಿಸಿರುವ ಅಶೋಕ್ ಕೂಡ ಮೂರೇ ದೃಶ್ಯಗಳಲ್ಲಿ ಬಂದರೂ ಇಡೀ ಚಿತ್ರಪೂರ್ತಿ ತುಂಬಿಕೊಳ್ಳುವಂಥ ಪಾತ್ರಕ್ಕೆ ಜೀವ ನೀಡಿದ್ದಾರೆ.

 

ಎಸಿಪಿಯಾಗಿ ಅರವಿಂದ್ ರಾವ್ ರಂಗಿತರಂಗದ ಬಳಿಕ ಮತ್ತೊಮ್ಮೆ ನೋಟದಲ್ಲೇ ಕುತೂಹಲ ಸೃಷ್ಟಿಸುವ ಪೊಲೀಸ್ ಅಧಿಕಾರಿಯಾಗಿದ್ದಾರೆ. ಲಾಯರ್ ವರಲಕ್ಷ್ಮಿಯಾಗಿ ಭವಾನಿ ಪ್ರಕಾಶ್ ತೆರೆಯಲ್ಲಿ ಕಾಣಿಸುವ ಕೆಲವೇ ನಿಮಿಷಗಳಲ್ಲೇ ಪ್ರೇಕ್ಷಕರನ್ನು ಥರಗುಟ್ಟಿಸುತ್ತಾರೆ! ಜೈಲೊಳಗೆ ಕೂಡ‌ ನಗುವಿನ ವಾತಾವರಣ ತುಂಬುವಲ್ಲಿ ಗಿರೀಶ್ ಶಿವಣ್ಣ ಯಶಸ್ವಿಯಾಗಿದ್ದಾರೆ.

ಪ್ರತಿಯೊಂದು ಪಾತ್ರಗಳ ಆಯ್ಕೆಯಲ್ಲೂ ನಿರ್ದೇಶಕ ವೇದಗುರು ಗೆದ್ದಿದ್ದಾರೆ. ಛಾಯಾಗ್ರಹಣ, ಹಿನ್ನೆಲೆ ಸಂಗೀತ ಕೂಡ ಚಿತ್ರಕ್ಕೆ ಪೂರಕವಾಗಿದೆ.‌ ಕ್ರೈಮ್ ಥ್ರಿಲ್ಲರ್ ಜತೆಗೆ ತಾಯಿ ಸೆಂಟಿಮೆಂಟ್ ಕೂಡ‌ ತುಂಬಿರುವ ಚಿತ್ರ ಇದು. ಹೀಗಾಗಿ ಎಲ್ಲ ವರ್ಗದ ಪ್ರೇಕ್ಷಕರನ್ನು ಸೆಳೆಯುವಲ್ಲಿ ಎರಡು ಮಾತಿಲ್ಲ.

 

Copyright@2018 Chitralahari | All Rights Reserved. Photo Journalist K.S. Mokshendra,