ಅಫೇರ್ ಮಾಡಲು ಒಂದಕ್ಕೆ ಎರಡರ ಆಫರ್!
ಚಿತ್ರ: ಕಂಗ್ರಾಜುಲೇಶನ್ಸ್ ಬ್ರದರ್
ನಿರ್ದೇಶಕರು : ಪ್ರತಾಪ್ ಗಂಧರ್ವ
ನಿರ್ಮಾಪಕರು: ಪ್ರಶಾಂತ್ ಕಲ್ಲೂರು, ಹರೀಶ್ ಮತ್ತು ರವಿಕುಮಾರ್
ತಾರಾಗಣ: ರಕ್ಷಿತ್ ನಾಗ್, ಸಂಜನಾ ದಾಸ್, ಅನುಷಾ, ಶಶಿಕುಮಾರ್ ಮೊದಲಾದವರು.
ಗಂಡಸೊಬ್ಬ ಎರಡು ಮದುವೆ ಮಾಡಿಕೊಳ್ಳುವುದು ಹೊಸತೇನಲ್ಲ. ಆದರೆ ಇಬ್ಬರು ಹುಡುಗಿಯರನ್ನು ಒಮ್ಮೆಲೇ ಮದುವೆಯಾಗಬೇಕಾದ ಸಂದರ್ಭ ಮಾತ್ರ ಎದುರಾದರೆ ಹೇಗಿರುತ್ತದೆ? ಆದರೆ ಡಬಲ್ ಆಫರ್ ಧಮಾಕ ಅಲ್ಲ ಧಮಕಿ ಎನ್ನುವುದೇ ಈ ಚಿತ್ರದ ಸಾರಾಂಶ.
ಆತನ ಹೆಸರು ರಕ್ಷಿತ್. ಐಟಿ ಸಂಸ್ಥೆಯಲ್ಲಿ ಉದ್ಯೋಗಿ. ಜತೆಯಲ್ಲೇ ಕೆಲಸ ಮಾಡುವ ಮೂವರು ಹುಡುಗರು ಆತ್ಮೀಯ ಸ್ನೇಹಿತರು. ಆದರೆ ಅವರಿಗಿರುವಷ್ಟು ಹುಡುಗಿಯರ ಕುರಿತಾದ ಆಸಕ್ತಿ ಈತನಿಗೆ ಇಲ್ಲ. ಹೀಗಾಗಿಯೇ ಯಾವುದೇ ಹುಡುಗಿಯ ಆಫರ್ ಬಂದರೂ ಒಪ್ಪಿಕೊಳ್ಳುವುದಿಲ್ಲ. ಇಂಥ ರಕ್ಷಿತ್ ಗೆ ಕಚೇರಿಗೆ ಹೊಸದಾಗಿ ಬರುವ ಸಿರಿ ಮೇಲೆ ಪ್ರೀತಿ ಉಕ್ಕಿ ಹರಿಯುತ್ತದೆ. ಆಕೆಯಲ್ಲಿ ಹೇಳಿಕೊಂಡಾಗ ಆಕೆ ಒಂದು ಷರತ್ತು ಹಾಕುತ್ತಾಳೆ. ಅದರ ಪ್ರಕಾರ ರಕ್ಷಿತ್ ಸಿರಿಯ ಜತೆಗೆ ಸಿರಿಯ ಸ್ನೇಹಿತೆ ತನುವನ್ನು ಕೂಡ ಮದುವೆ ಆಗಬೇಕಾಗಿರುತ್ತದೆ. ಆಫರ್ ಒಪ್ಪಿಕೊಳ್ಳುವ ರಕ್ಷಿತ್ ಗೆ ಎದುರಾಗುವ ಪೀಕಲಾಟಗಳೇನು ಎನ್ನುವುದನ್ನು ಚಿತ್ರದಲ್ಲಿ ರಸವತ್ತಾಗಿ ತೋರಿಸಲಾಗಿದೆ.
ಮೊದಲ ನೋಟಕ್ಕೆ ಈ ಕಥೆ ಮತ್ತು ಸಂಭಾಷಣೆ ಯುವ ಪ್ರೇಕ್ಷಕರನ್ನು ಗಮನದಲ್ಲಿರಿಸಿಕೊಂಡು ಮಾಡಿದಂತಿದೆ. ಆದರೆ ನಾಯಕ ಮತ್ತು ನಾಯಕಿಯ ಫ್ಲ್ಯಾಶ್ ಬ್ಯಾಕ್ ಸ್ಟೋರಿಯಲ್ಲಿ ಸಾಕಷ್ಟು ಕೌಟುಂಬಿಕ ಮೌಲ್ಯಗಳನ್ನು ತುಂಬಲಾಗಿದೆ. ನಾಯಕನಾಗಿ ನವ ಪ್ರತಿಭೆ ರಕ್ಷಿತ್ ನಾಗ್ ಮತ್ತು ತಂದೆಯಾಗಿ ಶಶಿಕುಮಾರ್ ನಟಿಸಿದ್ದಾರೆ. ತಂದೆ ಸೆಂಟಿಮೆಂಟ್ ಸೇರಿದಂತೆ ಭಾವನಾತ್ಮಕ ದೃಶ್ಯಗಳಲ್ಲಿ ರಕ್ಷಿತ್ ಆಕರ್ಷಕ ನಟನೆ ನೀಡಿದ್ದಾರೆ. ಇಬ್ಬರು ನಾಯಕಿರಲ್ಲಿ ಸಿರಿಯಾಗಿ ಸಂಜನಾ ದಾಸ್ ಮೆರೆದಿದ್ದಾರೆ. ತನು ಪಾತ್ರದಲ್ಲಿ ಅನುಷಾ ಸಕತ್ ಸ್ಕೋರ್ ಮಾಡಿದ್ದಾರೆ. ನಾಯಕನ ಸ್ನೇಹಿತರಾಗಿ ಚೇತನ್ ದುರ್ಗಾ ನಟನೆ ನಗು ತರಿಸುತ್ತದೆ. ಕಚೇರಿಯ ಬಾಸ್ ಆಗಿ ರಘು ರಾಮನಕೊಪ್ಪ ಪ್ರೇಕ್ಷಕರ ಚಪ್ಪಾಳೆಗಿಟ್ಟಿಸುತ್ತಾರೆ.
ಹಾಡುಗಳು ಕುಳಿತಲ್ಲೇ ಹೆಜ್ಜೆ ಹಾಕುವಂತೆ ಮಾಡುತ್ತವೆ.
ಹರಿ ಸಂತೋಷ್ ಸಂಭಾಷಣೆಯಲ್ಲಿ ದ್ವಯಾರ್ಥ ಇದ್ದರೂ ಚುರುಕು ಮುಟ್ಟಿಸುತ್ತದೆ. ಒಂದು ವರ್ಗದ ಪ್ರೇಕ್ಷಕರನ್ನು ನಗಿಸುವಲ್ಲಿ ಚಿತ್ರ ಯಶಸ್ವಿಯಾಗುತ್ತದೆ. ಒಟ್ಟು ಮನರಂಜನೆ ಮಾತ್ರ ಬಯಸುವವರಿಗೆ ಹೇಳಿ ಮಾಡಿಸಿದ ಚಿತ್ರ ಇದು.