Bili Chukki Halli Hakki.Reviews

Thursday, October 23, 2025

 

ಚುಕ್ಕಿಯಾಟದ ನಡುವೆ ಮೂಡಿತು ಪ್ರೇಮ ರಂಗೋಲಿ!

 

 

ಚಿತ್ರ: ಬಿಳಿ ಚುಕ್ಕಿ ಹಳ್ಳಿ ಹಕ್ಕಿ

ನಿರ್ದೇಶಕ: ಮಹೇಶ್ ಗೌಡ

ನಿರ್ಮಾಪಕ: ಮಹೇಶ್ ಗೌಡ

ತಾರಾಗಣ: ಮಹೇಶ್ ಗೌಡ, ಕಾಜಲ್ ಕುಂದರ್, ವೀಣಾ ಸುಂದರ್ ಮೊದಲಾದವರು.

 

 

ಕಮರ್ಷಿಯಲ್ ಸಿನಿಮಾಗಳ ಲೆಕ್ಕಾಚಾರದ ಪ್ರಕಾರ ನಾಯಕ, ನಾಯಕಿಯ ಸೌಂದರ್ಯ ಕೂಡ ಚಿತ್ರದ ಪ್ರಮುಖ ಆಕರ್ಷಣೆ. ಇಂಥ ಸಂದರ್ಭದಲ್ಲಿ ದೇಹ ಸೌಂದರ್ಯಕ್ಕೆ ಅಡ್ಡಿಯಾಗಬಹುದಾದ ಮೈಮೇಲಿನ ಬಿಳಿಚುಕ್ಕಿಯನ್ನೇ ಪ್ರಧಾನವಾಗಿಸಿ ಚಿತ್ರ ಮಾಡುವ ಸಾಹಸವನ್ನು  ನಿರ್ದೇಶಕ ಮಹೇಶ್ ಗೌಡ ಮಾಡಿದ್ದಾರೆ.

 

 

ಆತನ ಹೆಸರು ಶಿವ. ಆದರೆ ಭಸ್ಮದ ಬದಲು ಬಿಳಿಬಣ್ಣವನ್ನೇ ಮೈಮೇಲೆ ಚಿತ್ತಾರವಾಗಿಸಿ ಕಳಿಸಿದ್ದಾನೆ ದೇವರು. ಎಳವೆಯಲ್ಲಿ ಅಲ್ಲೊಂದು ಇಲ್ಲೊಂದು ಕಡೆ ಕಾಣಿಸಿದ್ದ ಈ ಬಿಳಿ ಚುಕ್ಕಿ ಹುಡುಗ ಯುವಕನಾಗುತ್ತಿದ್ದಂತೆ ಮೈಯ ಬಹುಭಾಗವನ್ನು ಆಕ್ರಮಿಸಿಕೊಳ್ಳುತ್ತದೆ.‌ ಹೀಗಾಗಿಯೇ ಒಂದೊಳ್ಳೆಯ ಹುಡುಗಿಯನ್ನು ಮದುವೆಯಾಗುವುದು ಭ್ರಮೆಯಷ್ಟೇ ಎನ್ನುವ ನಿರ್ಧಾರಕ್ಕೆ ಬಂದಿರುತ್ತಾನೆ. ಆದರೆ ಮಗನಿಗೊಂದು ಒಳ್ಳೆಯ ಹೆಣ್ಣನ್ನೇ ತರುವ ಪ್ರಯತ್ನ ತಾಯಿ ಶಾಂತಳದ್ದಾಗಿರುತ್ತದೆ. ಈಕೆಯ ಪ್ರಯತ್ನದ ಫಲವಾಗಿ ದೊರಕುವವಳೇ ಕವಿತಾ. ಸೌಂದರ್ಯವತಿ ಕವಿತಾ ಶಿವನ ಬಾಳಿಗೆ ಎಂಟ್ರಿಯಾದ ಬಳಿಕ ಆಗುವ ಭಾವನೆಗಳ ಏರುಪೇರಿನ ಕಥೆಯನ್ನೇ ಈ ಚಿತ್ರದಲ್ಲಿ ಆಕರ್ಷಕವಾಗಿ ತೋರಿಸಲಾಗಿದೆ.

ಶಿವನಾಗಿ ಮಹೇಶ್ ಗೌಡರದ್ದು ಬಹುವಿಧ ಅವತಾರ. ಶಿವನ ಪಾತ್ರದಲ್ಲಿ ಅವರು ಒಬ್ಬ ವ್ಯಕ್ತಿಯ ಕಥೆಯನ್ನು ಮಾತ್ರ ಹೇಳಿಲ್ಲ. ತನ್ನಂತೆ ತಮ್ಮದಲ್ಲದ ತಪ್ಪಿಗೆ ಅಪರಾಧಿಯಂತೆ ನೋಯುವವರ ಮನಸಿಗೆ ಕನ್ನಡಿಯಾಗಿದ್ದಾರೆ. ಒಳ್ಳೆಯ ಗುಣವೊಂದಿದ್ದರೆ ಪರಿಸ್ಥಿತಿ ಹೇಗೆಲ್ಲ ಕೈ ಹಿಡಿಯಬಲ್ಲದು ಎನ್ನುವುದನ್ನು ಸಮಾಜಕ್ಕೆ ಸಾರಿದ್ದಾರೆ.

 

ಶಿವು ಬಾಳಿನಲ್ಲಿ ಹೊಸ ಕವಿತೆ ಬರೆಯುವ ಹುಡುಗಿ ಕವಿತಳಾಗಿ ಕಾಜಲ್ ಕುಂದರ್ ಅದ್ಭುತ ನಟನೆ ನೀಡಿದ್ದಾರೆ. ಕವಿತಾ ತಾಯಿ ಸುಶೀಲಳಾಗಿ ವೀಣಾ ಸುಂದರ್ ಸಹಜ‌ ನಟನೆಯಿಂದ ಗಮನ ಸೆಳೆಯುತ್ತಾರೆ. ಕವಿತಾ ತಂದೆಯಾಗಿ ಮಗಳಿಗೆ ಬೆಂಬಲ ನೀಡುವ ತಂದೆಯ ಪಾತ್ರಕ್ಕೆ ರವಿಭಟ್ ಶಕ್ತಿ ನೀಡಿದ್ದಾರೆ.

ಚಿತ್ರದ ನಾಯಕ ಶಿವು ತಾಯಿ ಶಾಂತಮ್ಮನ ಪಾತ್ರದಲ್ಲಿ ಲಕ್ಷ್ಮೀ ಸಿದ್ದಯ್ಯ ನಟಿಸಿದ್ದಾರೆ. ಶಾಂತಮ್ಮನ ಅಣ್ಣ ರಂಗನಾಗಿ ಜಹಾಂಗೀರ್ ತಮ್ಮ‌ಪಾತ್ರದಿಂದ ಚಿತ್ರಕ್ಕೆ ಹಾಸ್ಯದ ರಂಗು ತುಂಬಿದ್ದಾರೆ.

 

ಚಿತ್ರಕ್ಕೆ ಆಯ್ದುಕೊಂಡಿರುವ ವಿಷಯ, ಅದನ್ನು ನೈಜವಾಗಿ ತೋರಿಸಿರುವ ರೀತಿ ಎಲ್ಲ ವಿಚಾರದಲ್ಲೂ ಮಹೇಶ್ ಗೌಡರು ಪ್ರೇಕ್ಷಕರನ್ನು ಗೆದ್ದಿದ್ದಾರೆ. ನಾಯಕಿ ಕಾಜಲ್ ಕುಂದರ್ ತಮ್ಮ ಪಾತ್ರಕ್ಕೆ ನೀಡಿದ ನಟನೆಯಿಂದಲೇ ಮನ ಕದಿಯುತ್ತಾರೆ. ಕಥೆಗೆ ತಕ್ಕಷ್ಟೇ ಪಾತ್ರಗಳೊಂದಿಗೆ ಆಕರ್ಷಕ ಸಂಭಾಷಣೆ, ಮೈಮರೆಸುವ ಸಂಗೀತ ಮತ್ತು ಮನಸೂರೆಗೊಳ್ಳುವ ಛಾಯಾಗ್ರಹಣ ಈ ಚಿತ್ರದ ಪ್ರಮುಖ ಆಕರ್ಷಣೆ. ಕುಟುಂಬ ಸಮೇತ ನೋಡಬಹುದಾದ ಈ ಚಿತ್ರ ಕನ್ನಡದಲ್ಲೊಂದು ವಿಭಿನ್ನ ಸಿನಿಮಾ ಎನ್ನುವ ಸ್ಥಾನವನ್ನು ಇತಿಹಾಸದಲ್ಲಿ ದಾಖಲು ಮಾಡುವುದು ಖಚಿತ.

 

Copyright@2018 Chitralahari | All Rights Reserved. Photo Journalist K.S. Mokshendra,