ಇದು ನಕ್ಕು ಟೈಮ್ ಪಾಸ್ ಮಾಡಲು ನೋಡುವಂಥ ಚಿತ್ರ
ಚಿತ್ರ : ಟೈಮ್ ಪಾಸ್
ನಿರ್ದೇಶನ : ಕೆ ಚೇತನ್ ಜೋಡಿದಾರ್
ನಿರ್ಮಾಪಕರು : ಗುಂಡೂರ್ ಶೇಖರ್,
ಕಿರಣ್ ಕುಮಾರ್ ಶೆಟ್ಟಿ ಮತ್ತು
ಎಂ ಎಚ್ ಕೃಷ್ಣ ಮೂರ್ತಿ
ತಾರಾಗಣ: ಇಮ್ರಾನ್ ಪಾಶ, ಅಶ್ವಿನಿ, ರಾಮ್ ಮೊದಲಾದವರು.
ಇದು ಸಿನಿಮಾದವರದ್ದೇ ಕಥೆ.
ಸಿನಿಮಾ ಮಂದಿಯ ವೈಯಕ್ತಿಕ ಕಥೆ ಕೇಳಲು ಎಲ್ಲರಲ್ಲೂ ಕುತೂಹಲ ಸಹಜ. ಇಲ್ಲಿ ಅಂಥದೇ ಕಥೆಗೆ ಇನ್ನಷ್ಟು ಬಣ್ಣ ಸೇರಿಸಿ ರೋಚಕತೆಯೊಂದಿಗೆ ಉಣಬಡಿಸಲಾಗಿದೆ. ಹೀಗಾಗಿಯೇ ಸಿನಿಮಾ ಎಲ್ಲವರ್ಗದ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಹೊರಟಾಗ ಸಂಕಷ್ಟ ಎದುರಾಗುವುದು ಸಹಜ. ಅದನ್ನೇ ಮತ್ತೆ ತೆರೆಯ ಮೇಲೇಯೂ ತೋರಿಸಿದರೆ ಜನಗಳು ತಿರಸ್ಕರಿಸುವ ಸಾಧ್ಯತೆಯೇ ಅಧಿಕ. ಇದನ್ನು ಅರ್ಥ ಮಾಡಿಕೊಂಡೇ ನಿರ್ದೇಶಕ ಚೇತನ್ ಜೋಡಿದಾರ್ ಹೊಸ ಪ್ರಯೋಗ ಮಾಡಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಏಳು ಸಿನಿಮಾ ಮಾಡಿದ ನಿರ್ಮಾಪಕ ಪರಮೇಶ್ವರ್ ಲಾಸ್ ಆಗಿ ಬೀದಿ ಸೇರುತ್ತಾನೆ. ಹೀಗೆ ಬೀದಿ ಸೇರಿದ ನಿರ್ಮಾಪಕನಲ್ಲಿ ತನಗೊಂದು ಚಿತ್ರ ನಿರ್ಮಿಸುವಂತೆ ಬೆನ್ನು ಬೀಳುತ್ತಾನೆ ನಿರ್ದೇಶಕ ಶಂಕರ್. ನಿರ್ದೇಶನದ ಹುಚ್ಚಲ್ಲಿ ಮನೆ ಬಿಟ್ಟು ಬಂದ ಈತನಿಗೆ ಕೊನೆಗೂ ಪರಮೇಶ್ವರ ಅವಕಾಶ ಮಾಡಿಕೊಡುತ್ತಾನೆ. ಈ ಎಂಟನೇ ಚಿತ್ರ ಹೇಗೆ ಮೂಡಿ ಬರುತ್ತದೆ ಎನ್ನುವುದೇ ಟೈಮ್ ಪಾಸ್ ಚಿತ್ರದ ಹೈಲೈಟ್.
ಪ್ರಥಮ ಚಿತ್ರದಲ್ಲೇ ಇಮ್ರಾನ್ ಪಾಶ ಅದ್ಭುತವಾಗಿ ನಟಿಸಿದ್ದಾರೆ. ನಿರ್ಮಾಪಕರಾಗಿ ಪ್ರಭಾಕರ್ ರಾವ್ ನೈಜ ನಟನೆ ನೀಡಿದ್ದಾರೆ. ಮ್ಯಾನೇಜರ್ ಪಾತ್ರಧಾರಿ ನವೀನ್ ಮಹಾಬಲೇಶ್ ಮಾತುಗಳು ಕಚಗುಳಿ ಇಟ್ಟು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತದೆ.
ಚಿತ್ರದಲ್ಲಿ ಡಬಲ್ ಮೀನಿಂಗ್ ಮತ್ತು ಒಂದಷ್ಟು ಹಸಿಬಿಸಿ ದೃಶ್ಯಗಳಿವೆ. ಆದರೆ ಚಿತ್ರಕ್ಕೆ ವಯಸ್ಕರ ಸರ್ಟಿಫಿಕೇಟ್ ನೀಡಲಾಗಿರುವ ಕಾರಣ ಚಿತ್ರ ವೀಕ್ಷಿಸುವ ಪ್ರೇಕ್ಷಕರಿಗೆ ಆ ದೃಶ್ಯಗಳ ಹಿನ್ನೆಲೆಯೂ ಅರ್ಥವಾಗಬಲ್ಲದು.
ಚಿತ್ರದಲ್ಲಿ ಕ್ಯಾಮರಾಮ್ಯಾನ್ ಆಗಿ ನಟಿಸಿರುವವರು, ನೃತ್ಯ ನಿರ್ದೇಶನ ಮಾಡಿ ಕುಣಿದಿರುವ ವೈಷ್ಣವಿ ಸತ್ಯನಾರಾಯಣ ವಿಶೇಷ ಮೆಚ್ಚುಗೆ ಪಡೆಯುತ್ತಾರೆ.
ಡಿಕೆ ಸಂಗೀತದಲ್ಲಿ ಎರಡೂ ಹಾಡುಗಳು ಆಕರ್ಷಕವಾಗಿವೆ.