ಮತ್ತೊಮ್ಮೆ ದೈವ ನರ್ತನದ ರೋಮಾಂಚನ!
ಚಿತ್ರ: ಕಾಂತಾರ -1
ನಿರ್ದೇಶನ: ರಿಷಬ್ ಶೆಟ್ಟಿ
ನಿರ್ಮಾಣ: ಹೊಂಬಾಳೆ ಫಿಲ್ಮ್ಸ್
ತಾರಾಗಣ: ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್, ಜಯರಾಮ್ .
ಟ್ರೈಲರ್ ನಲ್ಲಿ ತೋರಿಸಿದ ಹಾಗೆಯೇ ಕಾಡುಬೆಟ್ಟು ಶಿವನ ಪುತ್ರ ತಂದೆ ಕಣ್ಮರೆಯಾದ ಬಗ್ಗೆ ಕೇಳುವ ಪ್ರಶ್ನೆಯಿಂದ ಚಿತ್ರ ಶುರುವಾಗುತ್ತದೆ. ಆದರೆ ಇಲ್ಲಿ ಹೇಳುವುದು ತಂದೆಯ ಕಥೆಯನ್ನಲ್ಲ. ಪೂರ್ವಿಕರ ಕಥೆ.
ಇದು ಸುಮಾರು ಐದನೇ ಶತಮಾನದಲ್ಲಿ ನಡೆದಿದೆ ಎನ್ನಲಾಗುವ ಕಥೆ. ಅವರು ತುಳುನಾಡಿನ ಕಾಂತಾರ ಎನ್ನುವ ಕಾಡಿನೊಳಗೆ ಈಶ್ವರ ಹೋದೋಟದ ಬಳಿ ವಾಸಿಸುವ ಬುಡಕಟ್ಟು ಜನಾಂಗದವರು. ವಿಜಯೇಂದ್ರನೆನ್ನುವ ಬಾಂಗ್ರಾದ ರಾಜ ಇವರ ಹೂದೋಟವನ್ನು ಆಕ್ರಮಿಸಲು ಪ್ರಯತ್ನಿಸುತ್ತಾನೆ. ಆದರೆ ಈ ಸಂದರ್ಭದಲ್ಲಿ ಗುಳಿಗ ಅವರನ್ನು ಬೆಂಕಿಯಾಗಿ ಬೇಟೆಯಾಡುತ್ತಾನೆ. ಹಾಗೆ ಬಾಂಗ್ರದವರು ಕಾಂತಾರದಿಂದ ದೂರವಾಗಿರುತ್ತಾರೆ. ಕಾಡಿನಲ್ಲಿ ನಿಗೂಢವಾಗಿ ದೊರಕುವ ಕಂದನನ್ನು ಬುಡಕಟ್ಟು ಮಹಿಳೆಯೊಬ್ಬರು ಸಾಕುತ್ತಾರೆ. ಮಗುವಿಗೆ ’ಬೆರ್ಮೆ’ ಎಂದು ಹೆಸರಿಡುತ್ತಾರೆ. ಈ ಬೆರ್ಮೆ ದೊಡ್ಡವನಾಗಿ ಕಾಡಿನ ಮಕ್ಕಳ ನಾಯಕನಂತೆ ಬೆಳೆಯುತ್ತಾನೆ.
ಬೆರ್ಮೆ ಬೆಳೆದ ನಂತರ ಆತನ ಪರಾಕ್ರಮ ಹೇಗಿತ್ತು ಎನ್ನುವುದನ್ನು ಪರದೆಯ ಮೇಲೆ ನೋಡುವುದೇ ಸೊಗಸು. ಯಾಕೆಂದರೆ ಈ ಚಿತ್ರ ಕಥೆಗಷ್ಟೇ ಸೀಮಿತವಾಗಿರುವಂಥದ್ದಲ್ಲ. ಅರವಿಂದ್ ಕಶ್ಯಪ್ ಅವರ ಕ್ಯಾಮರಾದಲ್ಲಿ ದೃಶ್ಯ ಕಾವ್ಯವಾಗಿ ಮೂಡಿದೆ. ಅಷ್ಟೇ ಅಲ್ಲ ಮಧ್ಯಂತರದ ಬಳಿಕ ಕಥೆಯಲ್ಲೊಂದು ಟ್ವಿಸ್ಟ್ ಕೂಡ ಇದೆ. ನಾಯಕಿಯ ಪಾತ್ರದ ನಟನೆಗೆ ಹೆಚ್ಚಿನ ಅವಕಾಶ ನೀಡುವಂಥ ಈ ದೃಶ್ಯವನ್ನು ಸರ್ಪ್ರೈಸ್ ಆಗಿ ಎದುರುಗೊಳ್ಳುವುದೇ ಸೊಗಸು. ರಾಜನಾಗಿ ಜಯರಾಮ್ , ಯುವರಾಜನಾಗಿ ಗುಲ್ಷನ್ ದೇವಯ್ಯ ಕೂಡ ತಮ್ಮ ಪಾತ್ರಗಳಿಗೆ ಬೇಕಾದ ರೀತಿಯಲ್ಲಿ ಜೀವ ತುಂಬಿದ್ದಾರೆ.
ಬೆರ್ಮೆ ಪಾತ್ರದಲ್ಲಿ ರಿಷಬ್ ಮತ್ತೆ ದೈವ ಸ್ವರೂಪಿಯಾಗಿ ಮೆರೆದಿದ್ದಾರೆ. ಮಧ್ಯಂತರದ ಬಳಿಕ ಕಾಣಿಸುವ ಒಂದೆರಡು ದೃಶ್ಯಗಳಲ್ಲಿ ಮೈನವಿರೇಳಿಸುವಂಥ ಅಭಿನಯ ನೀಡಿದ್ದಾರೆ. ರಿಷಬ್ ಸಾಕು ತಾಯಿಯಾಗಿ ಮಂಗಳ ರಘು ನಟಿಸಿದ್ದಾರೆ. ಬಾಂಗ್ರದ ಮಂತ್ರಿಯಾಗಿ ಪ್ರಮೋದ್ ಶೆಟ್ಟಿ ಹಾಸ್ಯ ತುಂಬಿದ ಪಾತ್ರಕ್ಕೆ ಜೀವ ನೀಡಿದ್ದಾರೆ.
ಅಜನೀಶ್ ಲೋಕನಾಥ್ ಸಂಗೀತದಲ್ಲಿನ ಹಾಡುಗಳು ಚಿತ್ರದ ಮತ್ತೊಂದು ಪ್ರಮುಖ ಆಕರ್ಷಣೆಯಾಗಿದೆ. ಐದನೇ ಶತಮಾನವನ್ನು ಕಲಾನಿರ್ದೇಶನದಲ್ಲಿ ಮೂಡಿಸಿದ ರೀತಿ ಅದ್ಭುತ. ಯುದ್ಧ, ಸಾಹಸದ ಸನ್ನಿವೇಶಗಳು ಮತ್ತು ಇವುಗಳಿಗೆ ಹೊಂದಿಕೊಂಡಂತೆ ವಿಶುಯೆಲ್ ಎಫೆಕ್ಟ್ಸ್ ನೀಡಿರುವುದು ಆಕರ್ಷಕವಾಗಿದೆ. ಸಿನಿಮಾ ನೋಡಲು ಕುಳಿತ ಪ್ರೇಕ್ಷಕರು ಮೈ ಮರೆಯುವುದು ಖಚಿತ.