ಸಸ್ಪೆನ್ಸ್ ತುಂಬಿದ ಹಳ್ಳಿ ಪ್ರೇಮಕಥೆ
ಚಿತ್ರ: ಕುಂಟೆಬಿಲ್ಲೆ
ನಿರ್ದೇಶನ: ಸಿದ್ದೇಗೌಡ ಜಿಬಿಎಸ್
ನಿರ್ಮಾಣ: ಜೀವಿತ ಕ್ರಿಯೇಶನ್ಸ್
ತಾರಾಗಣ: ಯದು ಬಾಲಾಜಿ, ಮೇಘಶ್ರೀ, ಭವಾನಿ ಪ್ರಕಾಶ್ ಮೊದಲಾದವರು
ಇದೊಂದು ಹಳ್ಳಿಯ ಪ್ರೇಮಕತೆ. ಅವಳು ಕುಂಟಬಿಲ್ಲೆ ಕಾಲದಲ್ಲೇ ಆತನ ಸ್ನೇಹಿತೆ. ಹೆಸರು ಚಂದನಾ. ದೊಡ್ಡೋಳಾಗುತ್ತಲೇ ಈ ಗೆಳೆಯನಿಂದ ದೂರಾಗುತ್ತಾಳೆ. ಆದರೆ ಬೆಳೆದ ಮೇಲಿನ ಸ್ನೇಹ ಬದುಕಿನಿಂದಲೇ ದೂರಾಗಿಸುತ್ತದೆ. ಈ ಘಟನೆಯ ಹಿಂದಿನ ಕಾರಣವೇ ಕುಂಟೆಬಿಲ್ಲೆ ಚಿತ್ರದ ಹೂರಣ.
ಅವನ ಹೆಸರು ಚಾಮರಾಜ. ಚಂದನಾ ಇರುವ ಊರಲ್ಲೇ ಆತನೂ ವಾಸವಾಗಿರುತ್ತಾನೆ. ಆದರೆ ದೊಡ್ಡವರಾದ ಬಳಿಕ ಭೇಟಿಗೆ ಕಾರಣವಾಗುವುದು ಮಾತ್ರ ಸೋಶಿಯಲ್ ಮೀಡಿಯಾದ ಕಿತಾಪತಿ. ಆದರೆ ಈ ಕಿತಾಪತಿಯಿಂದಲೇ ಇವರಿಬ್ಬರು ಮತ್ತೆ ಆತ್ಮೀಯರಾಗುತ್ತಾರೆ. ಅದರಲ್ಲೂ ಚಂದನಾ ಪ್ರೇಮವಿವಾಹದ ಕನಸು ಕಾಣುತ್ತಾಳೆ. ಆದರೆ ಅದೊಂದು ದಿನ ಚಾಮರಾಜ್
ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗುತ್ತಾನೆ. ಇನ್ನೊಂದು ಟ್ವಿಸ್ಟ್ ಏನೆಂದರೆ ಚಂದನಾಳೇ ಕೊಲೆಯಾಗಿರುತ್ತಾಳೆ.
ಕೊಲೆ ಆರೋಪದಲ್ಲಿ ಚಾಮರಾಜ್ ಮತ್ತು ಸ್ನೇಹಿತರು ಜೈಲು ಸೇರುತ್ತಾರೆ. ನಿಯತ್ತಿನ ಸರ್ಕಲ್ ಇನ್ಸ್ಪೆಕ್ಟರ್ ತನಿಖೆ ನಡೆಸುತ್ತಾರೆ. ನಿಜವಾದ ಅಪರಾಧಿಯ ಪತ್ತೆ ಆಗುವುದೇ? ಚಂದನಾ ಕೊಲೆಯಾಗಲು ಕಾರಣವೇನು? ಮೊದಲಾದ ಪ್ರಶ್ನೆಗಳಿಗೆ ಸಿನಿಮಾ ಉತ್ತರ ನೀಡುತ್ತದೆ.
ಚಾಮರಾಜ್ ಪಾತ್ರವನ್ನು ಯದು ಬಾಲಾಜಿ ನಿರ್ವಹಿಸಿದ್ದಾರೆ. ಕೋಳಿ ಫಾರ್ಮ್ ನಲ್ಲಿ ಕೆಲಸ ಮಾಡುವ ಮುಗ್ದನಾಗಿ ಮತ್ತು ದ್ವಿತೀಯಾರ್ಧದಲ್ಲಿ ಆ್ಯಕ್ಷನ್ ಹೀರೋವಾಗಿ ಹೀಗೆ ಎರಡು ಮುಖಪ್ರದರ್ಶಿಸಿದ್ದಾರೆ. ನಾಯಕಿಯಾಗಿ ಮೇಘ ಶ್ರೀ ಗಂಡುಬೀರಿ ಪಾತ್ರಕ್ಕೆ ತಕ್ಕ ಅಭಿನಯ ನೀಡಿದ್ದಾರೆ. ಹರಿಕಾವ್ಯ ಸಂಗೀತದಲ್ಲಿನ ಪ್ರೇಮಗೀತೆ ಮತ್ತು ತಾಯಿ ಹಾಡು ಮತ್ತೆ ಮತ್ತೆ ಆಲಿಸುವಂತಿದೆ. ನಾಯಕನ ತಾಯಿಯಾಗಿ ಸುಧಾ ಬೆಳವಾಡಿ, ಖಡಕ್ ಪೊಲೀಸ್ ಅಧಿಕಾರಿಯಾಗಿ ಸುಚೇಂದ್ರ ಪ್ರಸಾದ್ ಚಿತ್ರದ ಎರಡು ಭಾವಗಳಿಗೆ ಕನ್ನಡಿಯಾಗಿದ್ದಾರೆ. ಚಂದನಾ ತಂದೆಯಾಗಿ ಶಂಕರ್ ಅಶ್ವಥ್ ನಿಗೂಢ ವ್ಯಕ್ತಿತ್ವದಲ್ಲಿ ಕಾಡುತ್ತಾರೆ. ತಾಯಿಯಾಗಿ ಭವಾನಿ ಪ್ರಕಾಶ್ ಗೆ ಉತ್ತಮ ನಟನೆಗೆ ಅವಕಾಶ ಸಿಕ್ಕಿದೆ. ಬಲರಾಜವಾಡಿ ನಟನೆಯೂ ಗಮನಾರ್ಹವಾಗಿದೆ.
ಚಿತ್ರದ ಛಾಯಾಗ್ರಹಣವನ್ನು ಮೆಚ್ಚಲೇಬೇಕು. ಮುಂಜಾನೆ ಮಂಜು ತಮ್ಮ ಪ್ರತಿಭೆಯನ್ನು ಪ್ರತಿ ಫ್ರೇಮ್ ಗಳಲ್ಲಿಯೂ ತೋರಿಸಿದ್ದಾರೆ. ಮಧು ಬಿ ಎ ಸಂಭಾಷಣೆ ಆಕರ್ಷಕವಾಗಿದೆ. ಚಿತ್ರದಲ್ಲೊಂದು ಪಾತ್ರವನ್ನು ಕೂಡ ನಿಭಾಯಿಸಿರುವ ನಿರ್ದೇಶಕ ಸಿದ್ದೇಗೌಡ ಅವರು ಒಂದೊಳ್ಳೆಯ ಎಚ್ಚರಿಕೆಯ ಸಂದೇಶಾತ್ಮಕ ಚಿತ್ರವನ್ನೇ ನೀಡಿದ್ದಾರೆ