ಒಂದು ಜಾತ್ರೆಯ ಹಿಂದಿನ ರಕ್ತ ಚರಿತ್ರೆ
ಚಿತ್ರ: ರೋಣ
ನಿರ್ದೇಶನ: ಸತೀಶ್ ಕುಮಾರ್
ನಿರ್ಮಾಣ: ಬಿ ಕೆ ಆರ್ ಪ್ರೊಡಕ್ಷನ್ಸ್
ತಾರಾಗಣ: ರಘುರಾಜ ನಂದ, ಪ್ರಕೃತಿ ಪ್ರಸಾದ್
ಅದೊಂದು ಹಳ್ಳಿ. ರೋಣ ಎನ್ನುವ ಆ ಹಳ್ಳಿಗೆ ರಾಮಕೃಷ್ಣ ಮಹಾ ಸಮಾಜ ಸೇವಕ. ಆತನ ಪುತ್ರ ಶಿವು ಕೂಡ ತಂದೆಯ ಬೆನ್ನೆಲುಬಾಗಿ ನಿಂತವ. ಆದರೆ ಅಲ್ಲಿನ ಶಾಸಕ ಸೇರಿದಂತೆ ರಾಜಕೀಯದ ಮಂದಿ ಇಡೀ ವ್ಯವಸ್ಥೆಯನ್ನೇ ಗಬ್ಬೆಬ್ಬಿಸಿರುತ್ತಾರೆ. ಇದರ ವಿರುದ್ಧ ನಡೆಸುವ ಹೋರಾಟದಲ್ಲಿ ತಂದೆ ಮಗನಿಗೆ ಎದುರಾಗುವ ಕಷ್ಟಗಳೇನು? ಹೊರಬರುವ ಭೀಕರ ಸತ್ಯ ಗಳೇನು ಎನ್ನುವುದೇ ಈ ಚಿತ್ರದ ಹೂರಣ.
ಮಹಾನ್ ಸಮಾಜ ಸೇವಕ ರಾಮಕೃಷ್ಣನಾಗಿ ಶರತ್ ಲೋಹಿತಾಶ್ವ ನಟಿಸಿದ್ದಾರೆ. ವೈಟ್ ಆಂಡ್ ವೈಟ್ ಹಾಕಿ ಬಟ್ಟೆಯಷ್ಟೇ ಶುಭ್ರ ವ್ಯಕ್ತಿತ್ವ ಹೊಂದಿರುವ ಪಾತ್ರ ಅದು. ನ್ಯಾಯಕ್ಕಾಗಿ ಕೈ ಎತ್ತಲು ಸದಾ ಸಿದ್ಧ.
ರಾಮಕೃಷ್ಣರ ಪುತ್ರ ಶಿವು ಪಾತ್ರದ ಮೂಲಕ ಕಥಾನಾಯಕನ ಸ್ಥಾನವನ್ನು ನಿಭಾಯಿಸಿರುವ ಕೀರ್ತಿ ನಟ ರಘು ರಾಜನಂದನದ್ದಾಗಿದೆ. ಬಾಡಿ ಲ್ಯಾಂಗ್ವೇಜ್, ಫೈಟ್ ಸೀನ್, ಡೈಲಾಗ್ ಡೆಲಿವರಿ ಎಲ್ಲದರಲ್ಲೂ ಭರವಸೆ ಮೂಡಿಸಿರುವ ನಟ ಈತ. ಶಿವು ಹೋರಾಟದಲ್ಲಿ ಜೋಡಿಯಾಗಿ ಪ್ರಕೃತಿ ಪ್ರಸಾದ್ ಕಾವ್ಯ ಪಾತ್ರಕ್ಕೆ ಜೀವ ನೀಡಿದ್ದಾರೆ.
ಹಿರಿಯ ನಟ ಕೆ ಎಸ್ ಶ್ರೀಧರ್ ಅಭಿನಯಿಸಿರುವ ಮುಖ್ಯಮಂತ್ರಿಯ ಪಾತ್ರ ಕಥೆಗೆ ಹೊಸದೊಂದು ತಿರುವು ನೀಡಿದೆ.
ರಾಮಕೃಷ್ಣರ ಬಲಗೈ ಬಂಟ ಹನುಮಂತುವಾಗಿ ಬಲ ರಾಜವಾಡಿ ನಟಿಸಿದ್ದಾರೆ. ನಾಯಕಿ ಕಾವ್ಯ ಇದೆ ಹನುಮಂತುವಿನ ಪುತ್ರಿಯಾಗಿರುತ್ತಾಳೆ. ರಾಮಕೃಷ್ಣರ ಮುದ್ದಿನ ಮಡದಿಯಾಗಿ, ನಾಯಕನ ತಾಯಿಯ ಪಾತ್ರವನ್ನು ನಟಿ ವಾಣಿ ಶ್ರೀ ನಿಭಾಯಿಸಿದ್ದಾರೆ.
ಚಿತ್ರಕ್ಕೆ ಪೂರಕವಾದ ಹಾಡುಗಳು ಪ್ರೇಕ್ಷಕರ ಮನಸೊರೆಗೊಳ್ಳುತ್ತವೆ. ಅದರಲ್ಲೂ ದೇವಿಯ ಕುರಿತಾದ ಹಾಡು ಗಗನ್ ಬಡೇರಿಯ ಸಂಗೀತ, ಕೈಲಾಶ್ ಖೇರ್ ಕಂಠದಲ್ಲಿ ಮೈ ರೋಮಾಂಚನಗೊಳಿಸುತ್ತದೆ.
ದೇವರ ಹೆಸರಲ್ಲಿ ಮತ ಬೇಡುವ ಪಕ್ಷ ಸಮಾಜಕ್ಕೆ ನಿಜವಾಗಿಯೂ ಮಾಡುವ ಅನ್ಯಾಯ ಏನು ಎನ್ನುವುದನ್ನು ಈ ಕಥೆಯ ಮೂಲಕ ತೆರೆದಿಡಲಾಗಿದೆ.