ಬೆಟ್ಟಿಂಗ್ ನಟನೆಯಲ್ಲಿ ಮನಗೆಲ್ಲುವ ಡಾರ್ಲಿಂಗ್ ಕೃಷ್ಣ!
ಚಿತ್ರ: ಬ್ರ್ಯಾಟ್
ನಿರ್ದೇಶನ: ಶಶಾಂಕ್
ನಿರ್ಮಾಣ: ಡಾಲ್ಫಿನ್ ಎಂಟರ್ಟೈನ್ಮೆಂಟ್
ತಾರಾಗಣ: ಡಾರ್ಲಿಂಗ್ ಕೃಷ್ಣ, ಮನೀಷಾ ಕಂಡ್ಕೂರ್ ಮೊದಲಾದವರು.
ಡಾರ್ಲಿಂಗ್ ಕೃಷ್ಣ ಮತ್ತು ಶಶಾಂಕ್ ಮತ್ತೊಮ್ಮೆ ಒಂದಾಗಿದ್ದಾರೆ. ಸದಭಿರುಚಿಯ ಪ್ರೇಮ ಚಿತ್ರಗಳಿಂದ ಗಮನ ಸೆಳೆದ ಈ ಜೋಡಿ ಇದೀಗ ಬ್ರ್ಯಾಟ್ ಮೂಲಕ ಮತ್ತೊಂದು ಮಾದರಿಯ ಅಖಾಡದಲ್ಲಿ ಸಿಕ್ಸರ್ ಬಾರಿಸಿದೆ.
ಬಾಲ್ಯದಿಂದಲೇ ಹಣದ ಮೋಹಕ್ಕೆ ಬಿದ್ದ ಹುಡುಗ ಕೃಷ್ಣ. ಹುಡುಗ ಯುವಕನಾಗಿ ಕ್ರಿಸ್ಟಿಯಾಗಿ ಬದಲಾದರೂ ಹಣಕೊಡುವ ಸುಖ, ಸಂತೃಪ್ತಿ ಬೇರೆ ಎಲ್ಲೂ ಸಿಗುತ್ತಿಲ್ಲ ಎನ್ನುವಂಥ ವ್ಯಕ್ತಿತ್ವ. ದಿಢೀರ್ ಧನ ಸಂಪಾದನೆಗಾಗಿ ಈತ ಆಯ್ದುಕೊಳ್ಳುವ ದಾರಿ ಕ್ರಿಕೆಟ್ ಬೆಟ್ಟಿಂಗ್. ಆದರೆ ಈ ಬೆಟ್ಟಿಂಗ್ ನಿಂದಾಗಿ ಕ್ರಿಸ್ಟಿಗೆ ಎದುರಾಗುವ ಸಮಸ್ಯೆಗಳು ಒಂದೆರಡಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಮನೆಯಲ್ಲೇ ಇರುವ ತಂದೆ ಮಹಾದೇವ ಓರ್ವ ಪ್ರಾಮಾಣಿಕ ಪೊಲೀಸ್ ಕಾನ್ಸ್‌ಟೇಬಲ್. ಮಾತ್ರವಲ್ಲ ಮಗ ತಪ್ಪು ದಾರಿ ಹಿಡಿಯದಂತೆ ಸದಾ ಕಾಯುವ ಮಹಾದೇವ ಕ್ರಿಸ್ಟಿಯ ಪಾಲಿಗೆ ಸಮಸ್ಯೆಯಾಗಿಯೇ ಕಾಣುತ್ತಾನೆ. ಇವರಿಬ್ಬರ ಮಧ್ಯದ ನೆರಳು ಬೆಳಕಿನಾಟ ಚಿತ್ರದ ಕೊನೆಯವರೆಗೂ ಸಾಗುತ್ತದೆ. ಅಂತಿಮವಾಗಿ ಯಾರಿಗೆ ಗೆಲುವಾಗುತ್ತದೆ ಎನ್ನುವುದನ್ನು ಅತ್ಯಂತ ಸ್ವಾರಸ್ಯಕರವಾಗಿಯೇ ತೋರಿಸಿದ್ದಾರೆ ನಿರ್ದೇಶಕ ಶಶಾಂಕ್.
ಕ್ರಿಸ್ಟಿಯಾಗಿ ಡಾರ್ಲಿಂಗ್ ಕೃಷ್ಣ ನಟನೆ ಆಕರ್ಷಕ. ಆಕ್ಷನ್ ದೃಶ್ಯಗಳಲ್ಲಿ ಅದ್ಭುತವಾಗಿ ಕಾಣಿಸಿದ್ದಾರೆ. ತಂದೆಯಾಗಿ ಅಚ್ಯುತ್ ಕುಮಾರ್ ಎಂದಿನಂತೆ ಕ್ಲಾಸ್. ಕ್ರಿಸ್ಟಿಗೆ ಜೋಡಿಯಾಗಿರುವ ಮನೀಷಾ ತಾನೋರ್ವ ನವನಟಿ ಎನ್ನುವ ನೆನಪು ಮೂಡಿಸದ ಹಾಗೆ ಅಭಿನಯಿಸಿದ್ದಾರೆ. ಖಳನಾಗಿ ಡ್ರ್ಯಾಗನ್ ಮಂಜು ಭಯ ಮೂಡಿಸುತ್ತಾರೆ. ಜತೆಯಲ್ಲೇ ತನ್ನ ಅರ್ಥವಾಗದ ಇಂಗ್ಲಿಷ್ ಮೂಲಕ ನಗಿಸುತ್ತಾರೆ.
ರವಿಕುಮಾರ್ ಎನ್ನುವ ಭ್ರಷ್ಟ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ರಮೇಶ್ ಇಂದಿರಾ ನೀಡಿರುವ ನಟನೆ ಮನಮೋಹಕ! ಅರ್ಜುನ್ ಜನ್ಯ ಸಂಗೀತದಲ್ಲಿ ಎರಡು ಹಾಡುಗಳು ಆಕರ್ಷಕ. ಡಾನ್ಸ್ ನಲ್ಲೂ ಕೃಷ್ಣ ಗಮನ ಸೆಳೆಯುತ್ತಾರೆ. ಅಭಿಲಾಷ್ ಛಾಯಾಗ್ರಹಣ ಮೆಚ್ಚುವಂತಿದೆ.
ಪ್ರತಿಯೊಂದು ಪಾತ್ರಗಳು ಪ್ರೇಕ್ಷಕರ ಮನದೊಳಗೆ ಇಳಿಯುವಂತೆ ತೋರಿಸಲಾಗಿದೆ. ಹಿನ್ನೆಲೆ ಸಂಗೀತ ಕೂಡ ಇದಕ್ಕೆ ಪೂರಕವಾಗಿದೆ. ಕಥೆಯಲ್ಲಿ ಸಾಕಷ್ಟು ಸ್ವಾತಂತ್ರ್ಯ ತೆಗೆದುಕೊಳ್ಳಲಾಗಿದ್ದರೂ, ಅಂತಿಮವಾಗಿ ನೀತಿ ಸಾರುವಲ್ಲಿ ಶಶಾಂಕ್ ಗೆದ್ದಿದ್ದಾರೆ.