ನಂಬಿಕೆ ಮತ್ತು ಪ್ರೀತಿಯ ಸಂದೇಶ ನೀಡುವ ಕೋಣ
ಚಿತ್ರ: ಕೋಣ
ನಿರ್ದೇಶನ: ಹರಿಕೃಷ್ಣ ಎಸ್
ನಿರ್ಮಾಣ: ಕುಪ್ಪಂಡ ಪ್ರೊಡಕ್ಷನ್ಸ್
ತಾರಾಗಣ: ಕೋಮಲ್ ಕುಮಾರ್, ತನಿಷಾ ಕುಪ್ಪಂಡ ಮೊದಲಾದವರು.
1842ರ ಕಾಲಘಟ್ಟದಿಂದ ಆರಂಭಗೊಳ್ಳುವ ಕಥೆ ಇದು. ಅಂದು ಒಂದು ಇಡೀ ಊರಿಗೆ ಮಾರಿಯ ಕಾಟ ಆದಾಗ ಅದಕ್ಕೆ ರಾಜ ಕಂಡ ಪರಿಹಾರದಿಂದ ಚಿತ್ರದ ಕಥೆ ಆರಂಭಗೊಳ್ಳುತ್ತದೆ. ಇಂದಿನ ಕಾಲಘಟ್ಟದಲ್ಲಿ ಅಲೆಮಾರಿಯೋರ್ವ ಕಕಂಪ್ಯೂಟರ್ ಬೊಂಬೆಯನ್ನಿಟ್ಟು ಭವಿಷ್ಯ ಹೇಳಿ ಬದುಕು ಸಾಗಿಸುತ್ತಿರುತ್ತಾನೆ. ಈ ಅಲೆಮಾರಿ ನಾರಾಯಣನ ಬಾಳಲ್ಲಿ ಒಂದು ಕೋಣಕ್ಕೆ ಸಂಬಂಧಿಸಿ ನಡೆಯುವ ಕಥೆಯೇ ಕೋಣ ಸಿನಿಮಾದ ಹಿನ್ನೆಲೆ.
ನಾರಾಯಣನಿಗೊಂದು ಸಮಸ್ಯೆ ಇದೆ. ಅದು ಆತ ಹೆಚ್ಚಾಗಿ ಒಬ್ಬೊಬ್ಬನೇ ಮಾತನಾಡುತ್ತಾ ಇರುತ್ತಾನೆ. ಆದರೆ ನಾರಾಯಣನ ಪಾಲಿಗೆ ಅದು ಆತ ತನ್ನ ಪತ್ನಿ ಲಕ್ಷ್ಮೀ ಜತೆಗೆ ಆಡುವ ಮಾತುಗಳಾಗಿರುತ್ತವೆ. ಅನಿರೀಕ್ಷಿತವಾಗಿ ಅಗಲಿದ ಪತ್ನಿ ಸಾವಿಗೆ ಕಾರಣ ಏನಾಗಿತ್ತು ಎನ್ನುವುದು ಕ್ಲೈಮ್ಯಾಕ್ಸ್ ನಲ್ಲಿ ತೋರಿಸಲಾಗಿದೆ.
ಕೋಮಲ್ ಕುಮಾರ್ ಪಾತ್ರಕ್ಕೆ ಎರಡು ಶೇಡ್ಸ್ ಇವೆ. ಒಬ್ಬ ಅಮಾಯಕ ಅಲೆಮಾರಿ ಎನ್ನುವುದು ಒಂದಾದರೆ ಕೊನೆಯಲ್ಲಿ ಪ್ರತ್ಯಕ್ಷಗೊಳ್ಳುವ ಮಂತ್ರವಾದಿಯ ಪಾತ್ರ ಮತ್ತೊಂದು ಅದ್ಭುತ. ತನಿಷಾ ಕುಪ್ಪಂಡ ಒಂದೊಳ್ಳೆಯ ಸಿನಿಮಾವನ್ನು ನಿರ್ಮಿಸುವ ಜತೆಯಲ್ಲೇ ಅಭಿನಯ ಪ್ರಾಧಾನ್ಯತೆ ಇರುವ ಪಾತ್ರದಲ್ಲೂ ಕಾಣಿಸಿದ್ದಾರೆ.
ಸಿನಿಮಾದ ಆರಂಭದಿಂದ ಅಂತ್ಯದ ತನಕ ಹಾಸ್ಯರಸದೊಂದಿಗೆ ಸಾಗುತ್ತದೆ. 1842ರ ಕಾಲಘಟ್ಟದ ರಾಜನಾಗಿ ನಟಿಸಿದ ವಿನಯ್ ಗೌಡನಿಂದ ಹಿಡಿದು ಮಂಜು ಪಾವಗಡ ತನಕ ಸಾಕಷ್ಟು ಮಂದಿ ಬಿಗ್ ಬಾಸ್ ಕಲಾವಿದರು ಚಿತ್ರದಲ್ಲಿದ್ದಾರೆ. ರಿಯಾಲಿಟಿ ಶೋಗಳ ಕಲಾವಿದರು ಕೂಡ ಗಮನ ಸೆಳೆಯುತ್ತಾರೆ. ಚಿತ್ರದಲ್ಲಿ ಬಳಸಲಾಗಿರುವ ಗ್ರಾಫಿಕ್ಸ್ ತಂತ್ರಜ್ಞಾನ ಮತ್ತು ಅದಕ್ಕೆ ಪೂರಕವಾದ ಹಿನ್ನೆಲೆ ಸಂಗೀತ ಪ್ರೇಕ್ಷಕರನ್ನು ಚಿತ್ರದೊಳಗೆ ಸೆಳೆಯುವಂತೆ ಮಾಡಿದೆ.
ಚಿತ್ರದ ಶೀರ್ಷಿಕೆಯಾಗಿರುವ ಕೋಣವನ್ನು ಕೂಡ ಚೆನ್ನಾಗಿಯೇ ತೋರಿಸಲಾಗಿದೆ. ಕೋಣ ಬಲಿ ನೀಡಲಾಗುತ್ತಾ ಇಲ್ವಾ ಎನ್ನುವುದು ಕೂಡ ಚಿತ್ರದ ಹೈಲೈಟ್ ನಲ್ಲಿ ಒಂದು. ಸಿನಿಮಾದ ಆರಂಭ ಮತ್ತು ಅಂತ್ಯಕ್ಕೆ ನವರಸ ನಾಯಕ ಜಗ್ಗೇಶ್ ನೀಡಿರುವ ಹಿನ್ನೆಲೆ ಧ್ವನಿ ಪರಿಣಾಮಕಾರಿಯಾಗಿದೆ. ಇಲ್ಲಿ ಇತಿಹಾಸ, ಪುರಾಣ, ನಂಬಿಕೆ ಮಾತ್ರವಲ್ಲ ಪ್ರೇಮಕಥೆಯೂ ಇದೆ. ಚಿತ್ರ ಎಲ್ಲ ವರ್ಗದ ಪ್ರೇಕ್ಷಕರನ್ನು ಸೆಳೆಯುವುದು ಖಚಿತ.