ಹೃದಯಕ್ಕೆ ನಾಟುವ ಪ್ರೇಮಿಯ ಕಥೆ ದಿಲ್ ಮಾರ್
ಚಿತ್ರ: ದಿಲ್ ಮಾರ್
ನಿರ್ದೇಶನ: ಎಂ. ಚಂದ್ರಮೌಳಿ
ನಿರ್ಮಾಣ: ನಾಗರಾಜ್ ಭದ್ರಾವತಿ
ತಾರಾಗಣ: ರಾಮ್, ಅದಿತಿ ಪ್ರಭುದೇವ, ಡಿಂಪಲ್ ಹಯಾತಿ ಮೊದಲಾದವರು.
ಆತನ ಹೆಸರು ಶುಕ್ಲ. ಮಹಾ ಪ್ರೇಮಿ. ಅದಕ್ಕೆ ಕಾರಣ ಅಕ್ಷತಾ ಎನ್ನುವ ಹುಡುಗಿ. ಆಕೆ 4 ವರ್ಷಗಳಿಂದ ಒಬ್ಬನೊಂದಿಗೆ ಪ್ರೇಮದಲ್ಲಿದ್ದಾಳೆ. ಆದರೆ ಇದ್ಯಾವುದಕ್ಕೂ ಶುಕ್ಲ ತಲೆಕೆಡಿಸಿಕೊಳ್ಳುವುದೇ ಇಲ್ಲ. ಶುಕ್ಲ ಹೀಗೆ ಹುಚ್ಚನಂತೆ ಪ್ರೇಮಿಸಲು ಕಾರಣವೇನು? ಇದರ ಹಿಂದಿನ ಸತ್ಯ ಅಕ್ಷತಾಗೂ ಗೊತ್ತಿಲ್ಲ! ಇಂಥದೊಂದು ಪರಮ ರಹಸ್ಯ ಏನಿರಬಹುದು ಎಂದು ಅರ್ಥ ಮಾಡಿಕೊಳ್ಳಬೇಕಾದರೆ ಚಿತ್ರದ ಕ್ಲೈಮ್ಯಾಕ್ಸ್ ತನಕ ಕಾಯಬೇಕು.
ನಾಯಕನಾಗಿ ರಾಮ್ ಗೆ ಇದು ಪ್ರಥಮ ಚಿತ್ರ ಎಂದು ಅನಿಸುವುದೇ ಇಲ್ಲ. ಮೊದಲಾರ್ಧದಲ್ಲಿ ಪಾಗಲ್ ಪ್ರೇಮಿಯಂತೆ ಕಾಣಿಸಿದರೆ, ದ್ವಿತೀಯಾರ್ಧದ ಫ್ಲ್ಯಾಶ್ ಬ್ಯಾಕ್ ನಲ್ಲಿ ನಿಜಕ್ಕೂ ಪಾಗಲ್ ಆಗಿಯೇ ಅಭಿನಯಿಸಿದ್ದಾರೆ. ಆರಂಭ ಮತ್ತು ಮಧ್ಯಂತರದ ಮಧ್ಯದ ಈ ಬದಲಾವಣೆಗೆ ಕಾರಣವಾದ ಅಂಶಗಳು, ಅದನ್ನು ನಾಯಕ ತನ್ನ ನಟನೆಯಲ್ಲಿ ತೋರಿಸಿರುವ ರೀತಿ ನಿಜಕ್ಕೂ ರೋಚಕವಾಗಿ ಮೂಡಿ ಬಂದಿದೆ. ಅದಿತಿ ಪ್ರಭುದೇವ ಎಂದಿನಂತೆ ಅದ್ಭುತ ನಟನೆ ನೀಡಿದ್ದಾರೆ. ಅಕ್ಷತಾ ಎನ್ನುವ ನಾಯಕಿ ಪಾತ್ರದಲ್ಲಿ ಮುಗ್ದ ಹುಡುಗಿಯಾಗಿ ಕಾಣಿಸಿದ್ದಾರೆ.
ಅಕ್ಷತಾ ತಂದೆಯಾಗಿ ಶರತ್ ಲೋಹಿತಾಶ್ವ ತಮ್ಮ ಲುಕ್ ನಲ್ಲೇ ಇನ್ನೇನೋ ಮಾಡುತ್ತಾರೆ ಎನ್ನುವ ಆತಂಕ ಮೂಡಿಸುತ್ತಾರೆ. ಇದ್ದರೆ ಇಂಥ ತಂದೆ ಇರಬೇಕು ಎಂದು ಎಲ್ಲ ಹೆಣ್ಣು ಮಕ್ಕಳು ಬಯಸುವಂಥ ಪಾತ್ರ ಇವರದು. ಮತ್ತೊಂದೆಡೆ ಮಂಗಳೂರಿನ ಡಾನ್ ಭಾರ್ಗವ್ ಎನ್ನುವಂತೆ ಸಾಯಿಕುಮಾರ್ ಅವರನ್ನು ತೋರಿಸಲಾಗಿದೆ. ಡೈಲಾಗ್ ಕಿಂಗ್ ಗೆ ಖಳ ಪಾತ್ರದಲ್ಲಿಯೂ ಅದ್ಭುತ ಸಂಭಾಷಣೆಗಳನ್ನು ಹೇಳುವ ಅವಕಾಶ ಲಭ್ಯವಾಗಿದೆ.
ಫ್ಲ್ಯಾಶ್ ಬ್ಯಾಕ್ ಕಥೆಯಲ್ಲಿ ಬರುವ ಮತ್ತೋರ್ವ ನಾಯಕಿಯ ಪಾತ್ರವನ್ನು ಡಿಂಪಲ್ ಹಯಾತಿ ನಿರ್ವಹಿಸಿದ್ದಾರೆ. ಮಾಯಾ ಎನ್ನುವ ಹುಡುಗಿಯಾಗಿ ಬಂದು ನಾಯಕನನ್ನು ಮಾಯೆಯಂತೆ ಕಾಡುವ ಸುಂದರಿಯಾಗಿ ಡಿಂಪಲ್ ಹಯಾತಿ ನಿಜಕ್ಕೂ ಮನಸೂರೆ ಮಾಡುತ್ತಾರೆ. ರಿಯಾಲಿಟಿ ಶೋ ಖ್ಯಾತಿಯ ಗೋವಿಂದೇ ಗೌಡ ಹಾಸ್ಯದ ಸನ್ನಿವೇಶಗಳು ಹೊಟ್ಟೆ ಹುಣ್ಣಾಗುವಂತೆ ಮಾಡುತ್ತದೆ. ಆ್ಯಕ್ಷನ್, ರೊಮಾನ್ಸ್, ಕಾಮಿಡಿ ಹೀಗೆ ಎಲ್ಲ ವಿಭಾಗದಲ್ಲಿಯೂ ಸ್ಕೋರ್ ಮಾಡಿರುವಂಥ ಸಿನಿಮಾ ಇದು. ಕೆಜಿಎಪ್ ಸಂಭಾಷಣೆಕಾರ ಚಂದ್ರಮೌಳಿ ಬರೆದ ಡೈಲಾಗ್ ಪ್ರೇಕ್ಷರಿಂದ ಶಹಬ್ಬಾಸ್ ಗಿಟ್ಟಿಸುತ್ತದೆ. ಮ್ಯೂಸಿಕ್ ಡೈರೆಕ್ಟರ್ ರಾಧನ್ ಸಂಗೀತದ ಹಾಡುಗಳು ರೋಮಾಂಚನಗೊಳಿಸುತ್ತದೆ.
ರಾಮ್ ಎನ್ನುವ ಹೊಸ ನಾಯಕನ ಅಭಿನಯ, ಅದಿತಿ ಪ್ರಭುದೇವ ಸೌಂದರ್ಯ ಸೇರಿದಂತೆ ಚಿತ್ರದ ಹಲವಾರು ಅಂಶಗಳು ಪ್ರೇಕ್ಷಕರ ಮನದಲ್ಲಿ ಬಹುಕಾಲ ಉಳಿಯುವಂತೆ ಮಾಡುವ ಸಿನಿಮಾ ದಿಲ್ ಮಾರ್.