ಮನದ ಕಾಡೊಳಗಿನ ನಿಗೂಢ ತಾಣ
ಚಿತ್ರ: ಗ್ರೀನ್
ನಿರ್ದೇಶನ: ರಾಜ್ ವಿಜಯ್
ನಿರ್ಮಾಣ: ರಾಜ್ ವಿಜಯ್, ಬಿ ಎನ್ ಸ್ವಾಮಿ
ತಾರಾಗಣ: ಗೋಪಾಲಕೃಷ್ಣ ದೇಶಪಾಂಡೆ, ಬಾಲಾಜಿ ಮನೋಹರ್ ಮೊದಲಾದವರು.
ಗ್ರೀನ್ ಅಂದರೆ ಹಸಿರು. ಹಸಿರು ಅಂದರೆ ಕಾಡು. ಹಸಿರು ಕಾಡೊಳಗೆ ಸದಾ ಹಸಿರಾಗಿ ಉಳಿಯುವಂಥ ಕಥೆಯೇ ಗ್ರೀನ್. ಇದೊಂದು ಮನೋವೈಜ್ಞಾನಿಕ ಥ್ರಿಲ್ಲರ್.
ಇದು ಸಂಪೂರ್ಣವಾಗಿ ಕಾಡೊಳಗಿನ ಕಥೆ.
ಇಲ್ಲಿರುವ ಬೃಹತ್ ಕಾಡೊಳಗಿನ ಹೂವು ಸಾವನ್ನೇ ಗೆಲ್ಲುವಂತೆ ಮಾಡುವ ಶಕ್ತಿ ಹೊಂದಿದೆ ಎನ್ನುವುದು ನಂಬಿಕೆ. ಚಿರಂಜೀವಿಯಾಗಲು ಈ ಹೂವನ್ನು ಸೇವಿಸುವ ಮೊದಲು ಅದಕ್ಕೆ ವೈಜ್ಞಾನಿಕ ರಾಸಾಯನಿಕವನ್ನು ಮಿಶ್ರಣವಾಗಿ ಬಳಸಬೇಕಾಗಿರುತ್ತದೆ. ಆ ಮಿಶ್ರಣಕ್ಕಾಗಿ ಏನನ್ನು ಬಳಸುತ್ತಾರೆ? ಅಕ್ಕಾಗಿ ಕಾಡೊಳಗೆ ಮಾಡಿರುವ ತಯಾರಿ ಏನು? ಅಲ್ಲಿರುವ ನರ್ಸರಿಯಲ್ಲಿ ಏನೆಲ್ಲ ಬೆಳೆಸಿದ್ದಾರೆ ಎನ್ನುವುದನ್ನು ಪರದೆಯಲ್ಲಿ ತೋರಿಸಲಾಗಿದೆ.
ಕಾಡೊಳಗೆ ಒಂದು ನಿಗೂಢ ನಾಡು. ಆದರೆ ಒಳಗೆ ಕಾಲಿಟ್ಟರೆ ಗೊಂದಲದ ಗೂಡು.
ಒಂದು ಸಲ ಈ ಕಾಡೊಳಗೆ ಹೋದವನು ಮತ್ತೆ ವಾಪಾಸು ಬರಲು ಸಾಧ್ಯವೇ ಇಲ್ಲ. ಹಾಗಾದರೆ ಒಳಗಡೆ ನಡೆಯುತ್ತಿರುವುದು ಏನು? ಬಲಿಯಾಗುತ್ತಿರುವುದು ಯಾರು? ಪೊಲೀಸ್ ಮತ್ತು ಮಿಲಿಟರಿಗಳಿಗೆ ಇಲ್ಲೇನು ಕೆಲಸ? ಮೊದಲಾದ ಕುತೂಹಲಕಾರಿ ಪ್ರಶ್ನೆಗಳಿಗೆ ಗ್ರೀನ್ ಸಿನಿಮಾ ಉತ್ತರ ನೀಡುತ್ತದೆ.
ಗೋಪಾಲಕೃಷ್ಣ ದೇಶಪಾಂಡೆ ಈ ಚಿತ್ರದ ಪ್ರಧಾನ ಪಾತ್ರ ನಿರ್ವಹಿಸಿದ್ದಾರೆ. ಕಾಡೊಳಗೆ ಅವರ ಎರಡು ಮುಖಗಳನ್ನು ಕಾಣಬಹುದಾದರೆ ಕ್ಲೈಮ್ಯಾಕ್ಸ್ ನಲ್ಲಿ ಇವೆಲ್ಲಕ್ಕಿಂತ ವಿಭಿನ್ನವಾದ ಮತ್ತೊಂದು ಮುಖವನ್ನೂ ತೋರಿಸಲಾಗಿದೆ.
ಪೂರ್ತಿ ಚಿತ್ರದಲ್ಲಿ ಬಳಸಲಾಗಿರುವ ಕಲರ್ ಟೋನ್ ಅದ್ಭುತವಾಗಿದೆ. ವಿಶುಯಲ್ ಎಫೆಕ್ಟ್ ನಲ್ಲಿಯೇ ಕಥೆ ಹೇಳುವ ಪ್ರಯತ್ನ ಮಾಡಲಾಗಿದೆ. ತಾಯಿ ಮಗನ ಸಂಬಂಧ ಮತ್ತು ಮಗನ ಮನೋವೈಜ್ಞಾನಿಕ ಹಿನ್ನೆಲೆಯನ್ನು ಕಥೆ ತಿಳಿಸುತ್ತದೆ. ಬಾಲಾಜಿ ಮನೋಹರ್ ಸೇರಿದಂತೆ ಚಿತ್ರದಲ್ಲಿನ ಪ್ರತಿಯೊಬ್ಬ ಕಲಾವಿದರು ಕೂಡ ಚಿತ್ರಕ್ಕಾಗಿ ಪರಿಶ್ರಮ ಪಟ್ಟಿರುವುದು ಎದ್ದು ಕಾಣುವಂತಿದೆ.