ಮುತ್ತಿನಂಥ ಮಗನ ಸುತ್ತ ಹೆಣೆದಂಥ ಕಥೆ
ಚಿತ್ರ: s/o ಮುತ್ತಣ್ಣ
ನಿರ್ದೇಶಕ: ಶ್ರೀಕಾಂತ್ ಹುಣಸೂರು
ನಿರ್ಮಾಪಕಿ: ಬಿ.ಎಂ ಮಂಜುಳ
ತಾರಾಗಣ: ಪ್ರಣಾಮ್ ದೇವರಾಜ್, ಖುಷಿ ರವಿ, ರಂಗಾಯಣ ರಘು ಮೊದಲಾದವರು.
ತಾಯಿ ಸೆಂಟಿಮೆಂಟ್ ಎನ್ನುವುದನ್ನು ನಾವು ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ನೋಡಿದ್ದೇವೆ. ಆದರೆ ಈ ಚಿತ್ರದ ವಿಶೇಷತೆ ಎನ್ನುವುದೇ ತಂದೆ ಸೆಂಟಿಮೆಂಟ್. ಇಂಥದೊಂದು ಕಂಟೆಂಟ್ ಕನೆಕ್ಟಾಗುವಂತೆ ಪರದೆಯ ಮೇಲೆ ತಂದ ಕೀರ್ತಿ ಸಂಪೂರ್ಣವಾಗಿ ಸನ್ ಆಫ್ ಮುತ್ತಣ್ಣ ನಿರ್ದೇಶಕರಿಗೆ ಸಲ್ಲುತ್ತದೆ.
ಸಿನಿಮಾ ಶುರುವಾಗುವುದೇ ತಂದೆ ಮತ್ತು ಮಗನ ಆತ್ಮೀಯತೆಗೆ ಕನ್ನಡಿಯಾಗುವಂಥ ದೃಶ್ಯಗಳೊಂದಿಗೆ. ಆದರೆ ಈ ಆತ್ಮೀಯತೆಯಲ್ಲಿಯೂ ಏರುಪೇರುಗಳಾಗುತ್ತವೆ. ಅದಕ್ಕೇನು ಕಾರಣ ಎಂದು ನಿಮಗೆ ಅರ್ಥವಾಗಬೇಕಾದರೆ ಸಿನಿಮಾ ನೋಡಲೇಬೇಕು.
ಮಧ್ಯಂತರದ ಹೊತ್ತಿಗೆ ತಂದೆ ಮತ್ತು ಮಗನ ಅನುಬಂಧದ ಮಧ್ಯೆ ಸಣ್ಣದೊಂದು ಅಂತರ ಬಂದಿರುತ್ತದೆ. ಮುಂದೇನಾಗುತ್ತದೆ ಎನ್ನುವ ಕುತೂಹಲಕ್ಕೆ ಪೂರಕವಾದ ತಿರುವುಗಳೊಂದಿಗೆ ಚಿತ್ರ ಆಸಕ್ತಿಕರವಾಗಿ ಮುಂದುವರಿಯುತ್ತದೆ.
ತಂದೆ ಮಗನ ಅನುಬಂಧದ ಕಥೆ ಹೇಳುವ ಈ ಚಿತ್ರದಲ್ಲಿ ಒಂದು ಅಮರ ಮಧುರ ಪ್ರೇಮಕಥೆಯೂ ಸೇರಿಕೊಂಡಿದೆ. ಈ ಪ್ರೇಮವೇ ಕಥೆಯೊಳಗಿನ ಭಾವನೆಗಳ ಏರಿಳಿತಕ್ಕೆ ಕಾರಣವಾಗಿದೆ. ಹೀಗೆ ವಾತ್ಸಲ್ಯ ಮತ್ತು ಪ್ರೀತಿ ಎರಡನ್ನೂ ಸೇರಿಸಿರುವ ನಿರ್ದೇಶಕರ ಜಾಣ್ಮೆ ಅಭಿನಂದನಾರ್ಹ.
ಮುತ್ತಣ್ಣನ ಪುತ್ರನಾಗಿ ಪ್ರಣಾಮ್ ದೇವರಾಜ್ ಮನಮೋಹಕ ನಟನೆ ನೀಡಿದ್ದಾರೆ. ತಂದೆಯೊಂದಿಗಿನ ಆತ್ಮೀಯತೆ, ಪ್ರೇಯಸಿಯೊಂದಿಗಿನ ಭಾವ ತೀವ್ರತೆ ಹೀಗೆ ಪ್ರತಿಯೊಂದು ಸಂದರ್ಭದಲ್ಲಿಯೂ ಪ್ರಣಾಮ್ ನಟನೆ ಆಕರ್ಷಕವಾಗಿದೆ. ಮುತ್ತಣ್ಣನಾಗಿ ರಂಗಾಯಣ ರಘು ಎಂದಿನಂತೆ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿದ್ದಾರೆ. ತಮಾಷೆ, ನೋವು ಎಲ್ಲವನ್ನೂ ತಕ್ಕಡಿಯಲ್ಲಿಟ್ಟು ತೂಗಿದಂತೆ ನಿಭಾಯಿಸಿದ್ದಾರೆ. ಪುತ್ರ ಶಿವು ಬಾಳಿನಲ್ಲಿ ಎಂಟ್ರಿಕೊಡುವ ಪ್ರೇಯಸಿಯಾಗಿ ಖುಷಿ ರವಿ ಕಾಣಿಸಿದ್ದಾರೆ. ಖುಷಿ ವೈದ್ಯೆಯಾಗಿ ನಟಿಸಿದ್ದು ಅಭಿನಯ ಮನ ಸೆಳೆಯುವಂತಿದೆ.
ಈ ಸಿನಿಮಾದಲ್ಲಿ ಕೆಲವೇ ಕಲಾವಿದರು ಮಾತ್ರ ಇದ್ದಾರೆ. ಆದರೆ ಪ್ರತಿಯೊಬ್ಬರು ಕೂಡ ಪ್ರೇಕ್ಷಕರು ಮರೆಯದಂಥ ಪಾತ್ರಗಳಲ್ಲೇ ಕಾಣಿಸಿದ್ದಾರೆ. ಚಿತ್ರಕ್ಕೆ ಎಷ್ಟು ಪಾತ್ರಗಳು ಬೇಕೋ ಅಷ್ಟನ್ನೇ ಇರಿಸಿಕೊಂಡು ಚಿಕ್ಕ ಚೊಕ್ಕದಾಗಿ ಸಿನಿಮಾ ಮಾಡಿದ ನಿರ್ದೇಶಕರನ್ನು ಅಭಿನಂದಿಸಲೇಬೇಕು. ಹಿರಿಯ ವೈದ್ಯರಾಗಿ ಬರುವ ಶ್ರೀನಿವಾಸ ಪ್ರಭು ಅವರಿಂದ ಹಿಡಿದು ಖುಷಿ ತಂದೆಯ ಪಾತ್ರ ನಿಭಾಯಿಸಿರುವ ಸುಚೇಂದ್ರ ಪ್ರಸಾದಗ ತನಕ ಪ್ರತಿ ಪಾತ್ರಗಳಿಗೂ ತಮ್ಮನ್ನು ಪಾತ್ರವಾಗಿ ಪ್ರದರ್ಶಿಸಲು ಉತ್ತಮ ಅವಕಾಶ ನೀಡಲಾಗಿದೆ.
ಚಿತ್ರೀಕರಣ ಶುರುವಾದಾಗಿನಿಂದಲೇ ಆಕರ್ಷಣೆ ಮೂಡಿಸಿದ್ದ ಶೀರ್ಷಿಕೆಗೆ ಚಿತ್ರ ನ್ಯಾಯ ಒದಗಿಸಿದೆ. ಈಗಾಗಲೇ ಪ್ರೇಕ್ಷಕರ ಗಮನ ಸೆಳೆದ ಹಾಡುಗಳು ಸರಿಯಾದ ಜಾಗದಲ್ಲೇ ಸ್ಥಾನ ಪಡೆದಿವೆ. ಈ ಎಲ್ಲ ಕಾರಣಗಳಿಂದಾಗಿ ಚಿತ್ರದ ಬಗ್ಗೆ ನಿರೀಕ್ಷೆ ಮೂಡಿಸಿಕೊಂಡ ಪ್ರೇಕ್ಷಕನಿಗೆ ಯಾವ ನಿರಾಸೆಯೂ ಇರದಂತೆ ಮೋಡಿ ಮಾಡುವಲ್ಲಿ ಯಶಸ್ವಿಯಾಗಿದೆ.