'ಉಘೇ ಉಘೇ..’ ಎನ್ನುವಂಥ ಚಿತ್ರ ಏಳುಮಲೆ
ಚಿತ್ರ: ಏಳುಮಲೆ
ನಿರ್ದೇಶನ: ಪುನೀತ್ ರಂಗಸ್ವಾಮಿ
ನಿರ್ಮಾಣ: ತರುಣ್ ಸುಧೀರ್, ಅಟ್ಲಾಂಟ ನಾಗೇಂದ್ರ
ತಾರಾಗಣ: ರಾಣಾ, ಪ್ರಿಯಾಂಕಾ ಆಚಾರ್, ಕಿಶೋರ್ ಮೊದಲಾದವರು.
ಮನೆ ಬಿಟ್ಟು ಓಡಿಹೋಗುವ ಪ್ರೇಮಿಗಳ ಕುರಿತಾದ ಎಷ್ಟೋ ಸಿನಿಮಾಗಳು ಬಂದು ಹೋಗಿವೆ. ಆದರೆ ಅವೆಲ್ಲಕ್ಕಿಂತ ವಿಭಿನ್ನವಾದ ಚಿತ್ರ ಏಳುಮಲೆ.
ಸಿನಿಮಾ ಶುರುವಾಗುವುದು ಟಿ.ಟಿ ಚಾಲಕನ ಪ್ರಯಾಣದ ಮೂಲಕ. ಈ ಪ್ರಯಾಣದಲ್ಲಿ ಚಾಲಕ ಹರೀಶನ ಪ್ರೇಮ ಪುರಾಣ ಹೊರಬರುತ್ತಾ ಹೋಗುತ್ತದೆ. ಹರೀಶನ ಪ್ರೇಯಸಿ ತಮಿಳುನಾಡಿನ ಹುಡುಗಿ. ಮೈಸೂರು ಮಹಾರಾಣಿ ಕಾಲೇಜ್ ನಲ್ಲಿ ವಿದ್ಯಾರ್ಥಿನಿಯಾಗಿದ್ದಾಗ ಹರೀಶನೊಂದಿಗೆ ಪ್ರೀತಿ ಪ್ರೇಮ ಶುರುವಾಗಿರುತ್ತದೆ. ಆದರೆ ರೇವತಿ ಮನೆಯವರು ಬೇರೆ ಮದುವೆಗೆ ಸಿದ್ಧತೆ ನಡೆಸಿರುತ್ತಾರೆ. ಮದುವೆ ಹಿಂದಿನ ದಿನ ರಾತ್ರಿ ರೇವತಿ ಹರೀಶನನ್ನು ಭೆಟಿಯಾಗಲು ಓಡಿ ಬರುತ್ತಾಳೆ. ಆದರೆ ಮುಂದೇನಾಗುತ್ತದೆ ಎನ್ನುವುದೇ ಚಿತ್ರದ ಪ್ರಮುಖ ಅಂಶ.
ಆರಂಭದಿಂದಲೇ ಕಥೆಯೊಂದಿಗೆ ಸಾಗಿ ಮುನ್ನುಗ್ಗುವ ಚಿತ್ರ ಇದು. ಎರಡು ರಾಜ್ಯಗಳ ನಡುವಿನ ಪ್ರೇಮಿಗಳ ಕಥೆಯ ಹಾಗೆಯೇ, ಎರಡು ರಾಜ್ಯಗಳ ನಡುವೆ ದ್ವೇಷ ಹರಡಿದ ಕಾಡುಗಳ್ಳನ ಕತೆಯೂ ಸೇರಿಕೊಂಡಿದೆ. ಯಾವುದು ಎಷ್ಟು ಬೇಕು ಎನ್ನುವುದನ್ನು ಚಿತ್ರಕಥೆಯಲ್ಲಿ ಹದವಾಗಿ ಪಾಕ ಮಾಡಲಾಗಿದೆ.
ಹರೀಶನಾಗಿ ರಾಣಾ ಬಾಳಿದ್ದಾರೆ. ಮೊಬೈಲ್ ಹವಾ ಶುರುವಾದ ಕಾಲದ ಪ್ರೇಮಿಯಾಗಿದ್ದಾರೆ. ಪ್ರೀತಿ, ಮುಗ್ದತೆ, ಅಮಾಯಕತೆ ಎಲ್ಲವೂ ಮನೆ ಮಾಡಿರುವಂಥ ಅಭಿನಯ ನೀಡಿದ್ದಾರೆ. ಹರೀಶನ ಪ್ರೇಯಸಿ ರೇವತಿಯಾಗಿ ಪ್ರಿಯಾಂಕಾ ಆಚಾರ್ ಕೂಡ ಆಕರ್ಷಕ ನಟನೆ ನೀಡಿದ್ದಾರೆ. ಇನ್ನು ತಮಿಳುನಾಡು ಪೊಲೀಸ್ ಅಧಿಕಾರಿಯಾಗಿ ಜಗಪತಿ ಬಾಬು ಎಂಟ್ರಿ ಪ್ರೇಕ್ಷಕರಿಗೆ ಅಚ್ಚರಿ ನೀಡುತ್ತದೆ. ಕನ್ನಡದ ಶಿಶೋರ್ ಅಂತೂ ಪೊಲೀಸ್ ಅಧಿಕಾರಿಯಾಗಿ ದೃಶ್ಯಗಳಿಗೆ ತೀವ್ರತೆ ಒದಗಿಸಿದ್ದಾರೆ. ಉಳಿದಂತೆ ನಾಗಾಭರಣ, ಸರ್ದಾರ್ ಸತ್ಯ ಮೊದಲಾದ ಪ್ರತಿಭಾವಂತರೇ ತುಂಬಿದ್ದಾರೆ. ಡಿ ಇಮಾನ್ ಸಂಗೀತದಲ್ಲಿ ಮೂಡಿ ಬಂದಿರುವ ಹಾಡುಗಳು ಸಂದರ್ಭಕ್ಕೆ ಪೂರಕವಾಗಿವೆ. ಅದ್ವೈತ ಗುರುಮೂರ್ತಿ ಛಾಯಾಗ್ರಹಣ, ಎಂ ಪಿ ಪ್ರಕಾಶ್ ಸಂಕಲನ ಎಲ್ಲವೂ ಸೇರಿ ಏಳುಮಲೆ ಸಿನಿಮಾ ಪ್ರೇಕ್ಷಕರ ಮನಸೂರೆ ಮಾಡುವುದರಲ್ಲಿ ಸಂದೇಹವೇ ಇಲ್ಲ.