Arasayyana Prema Prasanga.Reviews

Friday, September 19, 2025

 

ಅರಸಯ್ಯನ ಪ್ರೇಮ ಕಲ್ಯಾಣ

 

ಚಿತ್ರ: ಅರಸಯ್ಯನ ಪ್ರೇಮ ಪ್ರಸಂಗ

ನಿರ್ದೇಶನ: ಜೆ.ವಿ.ಆರ್ ದೀಪು

ನಿರ್ಮಾಣ: ಮೇಘ ಶ್ರೀ ರಾಜೇಶ್

ತಾರಾಗಣ: ಮಹಾಂತೇಶ ಹಿರೇಮಠ, ರಶ್ಮಿತಾ ಆರ್ ಗೌಡ‌ ಮೊದಲಾದವರು.

 

ತಲೆ ತುಂಬ ಗುಂಗುರು‌ ಕೂದಲು. ಕರಿಕಪ್ಪು ಮೈ ಬಣ್ಣ. ಎತ್ತರ ಕೂಡ ಸಾಮಾನ್ಯಕ್ಕಿಂತ ಕಡಿಮೆಯೇ. ಆತನೇ ಅರಸಯ್ಯ. ಕಲಿತಿರುವುದು ಎರಡನೇ ತರಗತಿ ಮಾತ್ರ. ವೃತ್ತಿಯಲ್ಲಿ ಗುಡಿಯ ಪೂಜಾರಿ. ಆದರೆ ಈ ಗುಣ ಲಕ್ಷಣಗಳಿಂದಾಗಿಯೇ ಇನ್ನೂ ಮದುವೆಯಾಗಿಲ್ಲ.‌ ಹಾಗಂತ ಎಲ್ಲ ಹುಡುಗಿಯರಿಗೂ ಈತ ಒಪ್ಪಿಗೆಯಾಗಿಲ್ಲ ಎಂದೇನಲ್ಲ. ತನಗೂ ಆಯ್ಕೆಯ ಸ್ವಾತಂತ್ರ್ಯ ಇದೆ ಎಂದು ಬಲವಾಗಿ ನಂಬಿದ ವ್ಯಕ್ತಿ ಈತ. ಇಂಥ ಅರಸಯ್ಯನಿಗೆ ಒಂದು ಹುಡುಗಿಯಲ್ಲಿ ಪ್ರೇಮವಾಗುತ್ತದೆ. ಆ ಪ್ರೇಮದ ಕಥೆಯೇ ಅರಸಯ್ಯನ ಪ್ರೇಮ ಪ್ರಸಂಗ.

ಅರಸಯ್ಯನ ತಂದೆಗೆ  ಮದುವೆ ಶಾಮಿಯಾನ, ಪಾತ್ರೆ ಪಗಡೆ ಬಾಡಿಗೆ ನೀಡುವ ವೃತ್ತಿ. ಆದರೆ ಮಗನ ಮನೆಯ ಶಾಮಿಯಾನ ಹಾಕುವ ಸಮಯ ಬಂದಿಲ್ಲ ಎನ್ನುವ ನಿರಾಶೆ. ಇಂಥ ಸಮಯದಲ್ಲೇ ಆ ಊರಿನ‌ ಅಂಚೆ ಕಚೇರಿಗೆ ನಗುವಿನ ಹಳ್ಳಿಯ ಕುಮಾರಿ ಕೆಲಸಕ್ಕೆ ಬಂದು ಸೇರಿಕೊಳ್ಳುತ್ತಾಳೆ.‌ ಅರಸಯ್ಯನಿಗೆ ಮೊದಲ‌ ನೋಟದಲ್ಲೇ ಕುಮಾರಿಯಲ್ಲಿ ಪ್ರೇಮವಾಗುತ್ತದೆ. ಕುಮಾರಿ ಆತನ ಪ್ರೇಮವನ್ನು ಒಪ್ಪುವಾಗ ಚಿತ್ರ ಮಧ್ಯಂತರ ದಾಟಿರುತ್ತದೆ. ಆದರೆ ಇಬ್ಬರ ಮನೆಯವರು ಕೂಡ ಒಪ್ಪುವ ಹಂತದಲ್ಲಿ ಮತ್ತೊಂದು ಅನಿರೀಕ್ಷಿತ ಟ್ವಿಸ್ಟ್ ಫೋನ್ ಮೂಲಕ ಬರುತ್ತದೆ. ಅದೇನು? ಅದನ್ನು ಪರಿಹಾರ ಮಾಡಿಕೊಳ್ಳುತ್ತಾರ? ಹೇಗೆ? ಮೊದಲಾದ ಪ್ರಶ್ನೆಗಳಿಗೆ ಸರಿಯಾದ ಉತ್ತರ ಸಿಗಬೇಕಾದರೆ ನೀವು ಈ ಸಿನಿಮಾ ಥಿಯೇಟರ್ ನಲ್ಲಿಯೇ ನೋಡಬೇಕು.

 

ಅರಸಯ್ಯನಾಗಿ ಮಹಾಂತೇಶ್ ಹಿರೇಮಠ ಬಾಳಿದ್ದಾರೆ. ಒಬ್ಬ ಹಳ್ಳಿಯ ಮುಗ್ದ ಪೂಜಾರಿ ಮನೆಯಲ್ಲಿ ಹೇಗಿರುತ್ತಾನೆ? ಪ್ರೀತಿಯಲ್ಲಿ ಬಿದ್ದಾಗ ಹೇಗಿರುತ್ತಾನೆ ಎನ್ನುವುದನ್ನು ಸಹಜವಾಗಿ ಎನ್ನುವಂತೆ ತೋರಿಸಲಾಗಿದೆ.

 

ಕುಮಾರಿಯಾಗಿ ನವ ನಟಿ ರಶ್ಮಿತಾ ಗೌಡ ಕೂಡ ಆಕರ್ಷಕ ನಟನೆ ನೀಡಿದ್ದಾರೆ. ನಾಯಕ ನಾಯಕಿ ಎಂದಷ್ಟೇ ಅಲ್ಲದೆ ಚಿತ್ರದ ಪ್ರತಿಯೊಂದು ಪಾತ್ರವೂ ಅದ್ಭುತವಾಗಿದೆ.

 

ಸುಬ್ಬಯ್ಯ ಶಾಸ್ತ್ರಿಯಾಗಿ ರಘು ರಾಮನ‌ಕೊಪ್ಪ, ಬಸವನಾಗಿ ಪಿಡಿ ಸತೀಶ್ಚಂದ್ರ, ಟೈಲರ್ ಆಗಿ ಚಂದನ್ ಶಂಕರ್, ನಾಟಿ ವೈದ್ಯ ನಂಜಪ್ಪನ ಪಾತ್ರಧಾರಿ ಸೇರಿದಂತೆ ಪ್ರತಿಯೊಂದು ಪಾತ್ರಗಳು ಕೂಡ ಒಂದಲ್ಲ ಒಂದು ದೃಶ್ಯದಲ್ಲಿ ಪ್ರಾಶಸ್ತ್ಯ ಪಡೆಯುತ್ತದೆ. ಇದು ಕುಟುಂಬ ಸಮೇತವಾಗಿ ನೋಡಿ ಸಂಭ್ರಮಿಸಬಹುದಾದ ಚಿತ್ರ.

 

Copyright@2018 Chitralahari | All Rights Reserved. Photo Journalist K.S. Mokshendra,