ಒಂದು ಕೊಲೆಯ ಹಿಂದಿನ ರೋಚಕ ತನಿಖೆ
ಚಿತ್ರ: ಕಮಲ್ ಶ್ರೀದೇವಿ
ನಿರ್ದೇಶನ: ಸುನಿಲ್ ಕುಮಾರ್
ನಿರ್ಮಾಣ: ಧನಲಕ್ಷ್ಮಿ ಮತ್ತು ರಾಜವರ್ಧನ್
ತಾರಾಗಣ: ಸಚಿನ್ ಚೆಲುವರಾಯ ಸ್ವಾಮಿ, ಸಂಗೀತ ಭಟ್ ಮೊದಲಾದವರು.
ಕಮಲ್ ಮತ್ತು ಶ್ರೀದೇವಿ ಎನ್ನುವ ಹೆಸರೇ ಚಿತ್ರದ ಪ್ರಮುಖ ಆಕರ್ಷಣೆ. ಈ ಆಕರ್ಷಣೆಯನ್ನು ಸಿನಿಮಾ ತನ್ನದೇ ರೀತಿಯಲ್ಲಿ ಉಳಿಸಿಕೊಂಡಿದೆ ಎನ್ನುವುದು ಚಿತ್ರ ನೋಡಿದವರ ಅನಿಸಿಕೆ.
ಚಿತ್ರದ ಮೊದಲ ದೃಶ್ಯವೇ ಲಾಡ್ಜ್ ನಲ್ಲಿ ಕೊಲೆಯಾದ ವೇಶ್ಯೆಯ ಪ್ರಕರಣದೊಂದಿಗೆ ಶುರುವಾಗುತ್ತದೆ. ಹೀಗಾಗಿ ವೇಗದಲ್ಲೇ ಕಥೆ ಮುಂದುವರಿಯುತ್ತದೆ. ಒಂದು ಕೊಲೆಯ ಹಿಂದೆ 8 ಮಂದಿ ಶಂಕಿತರು. ಅವರ ವಿಚಾರಣೆಯೇ ಫ್ಲ್ಯಾಶ್ ಮೂಲಕ ಕಥೆಯಾಗಿ ಮೂಡಿದೆ.
ಕೊಲೆಯಾದ ವೇಶ್ಯೆಯ ಪಾತ್ರದಲ್ಲಿ ಸಂಗೀತಾ ಭಟ್ ಅದ್ಭುತವಾಗಿ ನಟಿಸಿದ್ದಾರೆ. ಅಪರೂಪದ ಸಿನಿಮಾಗಳನ್ನು ಮಾತ್ರ ಒಪ್ಪುವ ಸಂಗೀತಾ ಈ ಬಾರಿ ವೇಶ್ಯೆಯ ಪಾತ್ರಕ್ಕೆ ಜೀವ ನೀಡಿ ಅಚ್ಚರಿ ಮೂಡಿಸಿದ್ದಾರೆ. ಇದು ಒಬ್ಬ ವೇಶ್ಯೆಯ ಕಥೆಯಾದರೂ ಪೂರ್ತಿ ದಂಧೆಯ ಹಿಂದೆ ಮುಂದೆ ಅನಲೈಸ್ ಮಾಡಿದಂತೆ ಕಥೆ ಕಟ್ಟಿರುವ ನಿರ್ದೇಶಕರ ಪ್ರಯತ್ನ ಮೆಚ್ಚಲೇಬೇಕು.
ಈ ಚಿತ್ರದೊಳಗೂ ಒಬ್ಬ ನಿರ್ದೇಶಕನ ಪಾತ್ರವಿದೆ. ಆತನೇ ಚಿತ್ರದ ನಾಯಕ ಕಮಲ್. ಈ ಪಾತ್ರವನ್ನು ಕಮಲ್ ನಂತೆ ಸುರಸುಂದರನಾದ ಸಚಿನ್ ಚೆಲುವರಾಯಸ್ವಾಮಿ ನಿರ್ವಹಿಸಿದ್ದಾರೆ. ಹೆಸರು ಕಮಲ್ ಎಂದಾದರೂ ಇಲ್ಲಿ ರೊಮ್ಯಾನ್ಸ್ ಗೆ ಅವಕಾಶ ಕಡಿಮೆ. ಆದರೆ ಸಸ್ಪೆನ್ಸ್ ಥ್ರಿಲ್ಲರ್ ಜಾನರ್ ನ ಈ ಚಿತ್ರದಲ್ಲಿ ನಿರ್ದೇಶಕನ ಲೈಫ್ ಸ್ಟೋರಿ ಕೂಡ ಕುತೂಹಲಕಾರಿಯಾಗಿ ಮುಂದುವರಿಯುತ್ತದೆ.
ನಾಯಕ, ನಾಯಕಿ ಬಳಿಕ ಚಿತ್ರದಲ್ಲಿ ಪ್ರಾಧಾನ್ಯತೆ ಪಡೆದು ಕಾಣಿಸುವುದೇ ಮಾರೇನಹಳ್ಳಿ ಮುನಿಸ್ವಾಮಿಯ ಪಾತ್ರ. ಚಿಕ್ಕದಾಗಿ ಮಾಮು ಎಂದೇ ಕರೆಸಿಕೊಳ್ಳುವ ಈತ ಮಾರುಕಟ್ಟೆ ಏರಿಯಾದಲ್ಲಿ ಪಿಂಪ್ ವೃತ್ತಿ ನಡೆಸುತ್ತಿರುತ್ತಾನೆ. ಕೊಲೆಯಾದ ವೇಶ್ಯೆಯನ್ನು ಈತನೇ ಲಾಡ್ಜ್ ಗೆ ಕರೆ ತಂದಿರುತ್ತಾನೆ. ಹೀಗಾಗಿ ಈತನಿಂದಲೇ ಕಥೆ ಶುರುವಾಗುತ್ತದೆ. ಆದರೆ ನಿರ್ದೇಶಕನ ಕಡೆಗೆ ಬದಲಾಗುವ ಕಥೆ ಶ್ರೀದೇವಿ ವೇಶ್ಯೆಯಾಗಲು ಕಾರಣವಾದ ಅಂಶದೊಂದಿಗೆ ಕ್ಲೈಮ್ಯಾಕ್ಸ್ ತಲುಪುತ್ತದೆ.
ಚಿತ್ರದ ಕೊನೆಯವರೆಗೂ ಕೊಲೆಗಾರ ಯಾರು ಎನ್ನುವ ಬಗ್ಗೆ ಕುತೂಹಲ ಕಾಯ್ದುಕೊಂಡ ಕೀರ್ತಿ ಕಥೆಗಾರರಿಗೆ ಸಲ್ಲುತ್ತದೆ. ಪೊಲೀಸ್ ತನಿಖಾಧಿಕಾರಿಯಾಗಿ ಕಿಶೋರ್, ವೇಶ್ಯೆಯ ಇತರ ಗ್ರಾಹಕರಾಗಿ ಮಿತ್ರ, ಎಂ ಎಸ್ ಉಮೇಶ್ ಮೊದಲಾದವರು ನಟಿಸಿದ್ದಾರೆ. ಚಿತ್ರದಲ್ಲಿ ಎರಡು ಹಾಡುಗಳು ಆಕರ್ಷಕವಾಗಿ ಮೂಡಿವೆ. ಆಸಕ್ತಿಪೂರ್ಣ ಕಥೆಯ ಮೂಲಕ ಪ್ರೇಕ್ಷಕರನ್ನು ಸೀಟಿನ ತುದಿಯಲ್ಲಿ ಕುಳ್ಳಿರಿಸಿ ನೋಡುವಂತೆ ಮಾಡುವ ಈ ಚಿತ್ರ ಯಶಸ್ವಿಯಾಗುವುದರಲ್ಲಿ ಯಾವ ಸಂದೇಹವೂ ಇಲ್ಲ.