ನಿದ್ದೆಗೆಡಿಸಿ ಚಿಂತನೆಗೆ ಹಚ್ಚುವ ಸುಂದರಿ ಈ ನಿದ್ರಾದೇವಿ!
ಚಿತ್ರ: ನಿದ್ರಾದೇವಿ Next door
ನಿರ್ದೇಶನ: ಸುರಾಗ್ ಸಾಗರ್
ನಿರ್ಮಾಣ: ಸುರಾಮ್ ಮೂವೀಸ್
ತಾರಾಗಣ: ಪ್ರವೀರ್ ಶೆಟ್ಟಿ, ಶ್ರುತಿ ಹರಿಹರನ್, ರಿಷಿಕಾ ನಾಯಕ್ ಮೊದಲಾದವರು.
ಆತನ ಹೆಸರು ಧ್ರುವ. ಆದರೆ ಆತನಿಗೆ ಯಾವ ಧ್ರುವಕ್ಕೆ ತಲೆ ಹಾಕಿ ಮಲಗಿದರೂ ನಿದ್ದೆಯೇ ಇಲ್ಲ. ಆದರೆ ಕಣ್ತುಂಬ ನಿದ್ದೆ ನೀಡಬಲ್ಲ ಯುವತಿಯೋರ್ವಳು ಪಕ್ಕದ ಮನೆಯಲ್ಲೇ ಇರುವ ಸತ್ಯ ಅರಿವಾಗುತ್ತದೆ. ಆದರೆ ಆಕೆಯನ್ನು ಪರ್ಮನೆಂಟಾಗಿ ತನ್ನ ನೆಮ್ಮದಿಯ ನಿದ್ದೆಯೊಳಗೆ ಸೆಳೆಯುವ ಧ್ರುವನ ಪ್ರಯತ್ನ ಎಷ್ಟರ ಮಟ್ಟಿಗೆ ಸಕ್ಸಸ್ ಆಯಿತು ಎಂದು ತೋರಿಸಿಕೊಟ್ಟಿರುವ ಚಿತ್ರವೇ ನಿದ್ರಾದೇವಿ ನೆಕ್ಸ್ಟ್ ಡೋರ್.
ಧ್ರುವನಿಂದ ಹೀಗೆ ನಿದ್ದೆ ದೂರಾಗಲು ಒಂದು ಪ್ರಮುಖ ಕಾರಣ ಇದೆ. ಅದೇ ಆತನ ಕಿವಿಯನ್ನು ಕೊರೆಯುವ ಮನಸನ್ನು ಕದಡುವ ಗಂಭೀರ ಆಪಾದನೆ. "ನೀನು ಪ್ರೀತಿಸಿದವರೆಲ್ಲ ನಿನ್ನಿಂದ ದೂರಾಗ್ತಾರೆ" ಎನ್ನುವ ಆರೋಪ. ಆ ಆರೋಪ ಬಾಲ್ಯದಿಂದಲೇ ಬೆನ್ನುಬಿದ್ದಿರುತ್ತದೆ. ಇಂಥದೊಂದು ಗಂಭೀರವಾದ ಆರೋಪವನ್ನು ಸಹಪಾಠಿ ವಿಶ್ವಾಸ್ ಮಾಡಿರುತ್ತಾನೆ. ತನ್ನನ್ನು ಕಂಡರಾಗದ ಸ್ಪರ್ಧಿ ಮಾಡಿದ ಈ ಆರೋಪವನ್ನು ಸಂದರ್ಭವೇ ಸತ್ಯಗೊಳಿಸಿದ್ದು ವಿಪರ್ಯಾಸ. ಕಾರಣ ಸ್ನೇಹಿತೆಯ ಪ್ರೀತಿಯ ನಾಯಿ, ಈತನ ಕೈಗಳಿಂದಲೇ ಸಾವಿಗೀಡಾಗುತ್ತದೆ. ಆಪ್ತ ಸ್ಬೇಹಿತೆ ಆದ್ಯ ಅಪಘಾತದಲ್ಲಿ ಸಾವನ್ನಪ್ಪುತ್ತಾಳೆ. ಯೌವನಕ್ಕೆ ಕಾಲಿಡುವ ಮುನ್ನವೇ ತಾಯಿಯನ್ನೂ ಕಳೆದುಕೊಳ್ಳುತ್ತಾನೆ. ಹೀಗಾಗಿ ನಿದ್ದೆ ಕಳೆದು ಕೊರಗುವ ನಾಯಕನಿಗೇ ನಿದ್ರಾದೇವಿಯಂಥ ನಾಯಕಿಯ ಭೇಟಿಯಾಗುತ್ತದೆ. ಈ ನಿದ್ರಾದೇವಿಯಾದರೂ ಈತನ ಬಾಳಲ್ಲಿ ನಿರಂತರವಾಗಿ ಇರುತ್ತಾಳ? ಬಾಲ್ಯದ ವೈರಿ ವಿಶ್ವಾಸ್ ಈಗ ಮತ್ತೆ ಭೇಟಿಯಾಗುತ್ತಾನ? ಒಂದಕ್ಕೊಂದು ಬೆರೆತುಕೊಂಡು ಕಾಡುವ ನಿದ್ದೆ ಮತ್ತು ಪ್ರೀತಿಯ ಸಮಸ್ಯೆಗೆ ನಾಯಕ ಕಂಡುಕೊಳ್ಳುವ ಉತ್ತರವೇನು? ಇವೆಲ್ಲವನ್ನೂ ಚಿತ್ರ ಸ್ವಾರಸ್ಯಕರವಾಗಿ ಹೇಳಿದೆ.
ಧ್ರುವನಾಗಿ ಪ್ರವೀರ್ ಶೆಟ್ಟಿ ನುರಿತ ಕಲಾವಿದನಂತೆ ನಟನೆ ನೀಡಿದ್ದಾರೆ. ಕಾಡುವ ನಿದ್ದೆ, ಗೊಂದಲದ ಗೂಡಾಗುವ ಬದುಕು, ಮೊಳಕೆಯೊಡೆಯುವ ಪ್ರೀತಿ.. ಎಲ್ಲ ಭಾವಗಳಿಗೂ ಕನ್ನಡಿಯಾಗುವ ಪ್ರಯತ್ನ ಮಾಡಿದ್ದಾರೆ. ನಿದ್ರಾ ದೇವಿಯಾಗಿ ರಿಷಿಕಾ ನಾಯಕ್ ನಟನೆ ಗಮನಾರ್ಹ. ಸೌಮ್ಯವಾದ ಪಾತ್ರವಾದರೂ ಕಣ್ಣುಗಳಲ್ಲೇ ಭಾವ ಚಿಮ್ಮಿಸುವ, ನಗುವಿನಲ್ಲೇ ಮನಸು ಸೇರುವ ರಿಷಿಕಾ ಪ್ರಯತ್ನ ಗೆದ್ದಿದೆ.
ನಾಯಕ ನಾಯಕಿ ಮಾತ್ರವಲ್ಲದೆ ಚಿತ್ರದ ಒಂದಷ್ಟು ಪಾತ್ರಗಳು ಪ್ರೇಕ್ಷಕರನ್ನು ಕಾಡುತ್ತವೆ. ಅವುಗಳಲ್ಲಿ ಶೈನ್ ಶೆಟ್ಟಿ ನಟನೆಯ ವಿಕ್ರಮ್ ಪಾತ್ರವೂ ಪ್ರಮುಖವಾಗಿದೆ. ಉಳಿದಂತೆ ಮಾನಸಿಕ ವೈದ್ಯೆಯಾಗಿ ಶ್ರುತಿ ಹರಿಹರನ್ ಗಮನ ಸೆಳೆಯುತ್ತಾರೆ. ನಾಯಕನ ತಾಯಿಯಾಗಿ ಸುಧಾರಾಣಿ ನಟಿಸಿದ್ದಾರೆ. ಚಿತ್ರದ ಹಾಡುಗಳು ಇಂಪಾಗಿವೆ. ಸೈಂಟಿಫಿಕ್ ಥ್ರಿಲ್ಲರ್ ಆಗಿ ಮೂಡಿ ಬಂದಿರುವ ಈ ಚಿತ್ರ ಒಂದು ವಿಭಿನ್ನ ಪ್ರಯತ್ನ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಕಥೆ ನಿದ್ರಾದೇವಿಯದ್ದೇ ಆದರೂ ಪ್ರೇಕ್ಷಕರ ನಿದ್ದೆ ಕದಿಯುವಷ್ಟು ಚಿಂತಿಸುವಂಥ ದೃಶ್ಯಗಳು ಈ ಚಿತ್ರದಲ್ಲಿವೆ.