ದುಃಖಿಗಳಿಗೆ ಸುಖದ ಸೂತ್ರ ಸಾರುವ ಸಿನಿಮಾ
ಚಿತ್ರ: ಸಪ್ಟೆಂಬರ್ 10
ನಿರ್ದೇಶಕರು: ಓಂ ಸಾಯಿ ಪ್ರಕಾಶ್
ನಿರ್ಮಾಪಕಿ: ರಾಜಮ್ಮ ಸಾಯಿ ಪ್ರಕಾಶ್
ತಾರಾಗಣ: ಶಶಿಕುಮಾರ್, ಶ್ರೀನಿವಾಸ ಮೂರ್ತಿ, ಪದ್ಮಾವಾಸಂತಿ ಮೊದಲಾದವರು.
ಸಪ್ಟೆಂಬರ್ 10ರ ದಿನಾಂಕವನ್ನು ವಿಶ್ವ ಆತ್ಮಹತ್ಯಾ ನಿರೋಧನ ದಿನವಾಗಿ ಆಚರಿಸಲಾಗುತ್ತದೆ. ಹೆಚ್ಚುತ್ತಿರುವ ಆತ್ಮಹತ್ಯೆಯನ್ನು ಹೇಗೆ ತಡೆಯಬಹುದು ಎನ್ನುವ ವಿಚಾರದಲ್ಲಿ ಮಾಡಿರುವಂಥ ಚಿತ್ರವೇ ಸಪ್ಟೆಂಬರ್ 10.
ಆತ್ಮಹತ್ಯೆಗೆ ಮೊರೆ ಹೋಗುವವರನ್ನು ಹೇಗೆ ಅದರಿಂದ ತಪ್ಪಿಸಬಹುದು ಎನ್ನುವ ವಿಚಾರದಲ್ಲಿ ನಡೆಯುವ ಸಭಾ ಕಾರ್ಯಕ್ರಮದ ಮೂಲಕ ಚಿತ್ರ ಆರಂಭಗೊಳ್ಳುತ್ತದೆ. ಈ ಸಭೆಯಲ್ಲಿ ಆರು ವಿಭಿನ್ನ ಆತ್ಮಹತ್ಯೆಗಳನ್ನು ತಡೆದ ಬಗ್ಗೆ ವ್ಯಕ್ತಿಯೊಬ್ಬರು ವಿವರಿಸುತ್ತಾರೆ. ಆ ಆರು ಘಟನೆಗಳೇ ಈ ಸಿನಿಮಾದ ಕಥೆ.
ಮಗಳನ್ನು ಪ್ರೀತಿಯಿಂದ ಸಲಹಿ ನಗರದ ಕಾಲೇಜ್ ಗೆ ಕಳಿಸುವ ಜಮೀನ್ದಾರನಿಗೆ ವೈರಿಯಾಗಿ ಕಾಣಿಸುವುದು ತನ್ನದೇ ಊರಿನ ಬಡ ರೈತ. ಯಾಕೆಂದರೆ ತನ್ನ ಮಗಳನ್ನು ಆ ಬಡ ರೈತನ ಮಗ ಪ್ರೀತಿಸಿರುವುದೇ ಇದಕ್ಕೆ ಕಾರಣ. ಮತ್ತೊಂದೆಡೆ ಮಗಳ ಪತಿಗೆ ವರದಕ್ಷಿಣೆ ನೀಡಲಾಗದೆ ಕಂಗಾಲಾದ ರೈತ ದಂಪತಿ. ಇನ್ನೊಂದೆಡೆ ಪತ್ನಿಯ ದುಂದುವೆಚ್ಚ ಭರಿಸಲಾಗದೆ ಹೈರಾಣಾದ ಪತಿ. ಮಕ್ಕಳನ್ನು ಹೆಚ್ಚು ಮಾರ್ಕ್ ಗಳಿಸಲು ಕಾಡುವ ತಂದೆ,
ತಾಯಿಗಳು..
ಹೀಗೆ ಆತ್ಮಹತ್ಯೆಗೆ ಕಾರಣವಾಗು ವ ಐದಾರು ಸನ್ನಿವೇಶಗಳನ್ನು ಬಿಡಿಸಿಡಲಾಗುತ್ತದೆ. ಜತೆಯಲ್ಲೇ ಸಾಕಷ್ಟು ಕುಂದು ಕೊರತೆಗಳಿರುವ ಕುಟುಂಬವೊಂದು ಹೇಗೆ ಸಮಾಧಾನದ ಜೀವನ ನಡೆಸುತ್ತಿದೆ ಎನ್ನುವುದನ್ನು ಕೂಡ ತೋರಿಸಲಾಗಿದೆ.
ಜಾತಿ ಅಂತಸ್ತಿನ ಮೋಹಕ್ಕೆ ಬಿದ್ದ ಜಮೀನ್ದಾರನಾಗಿ ಗಣೇಶ್ ರಾವ್ ಕೇಸರ್ಕರ್ ನಟಿಸಿದ್ದಾರೆ. ಬಡ ರೈತನಾಗಿ ಮೀಸೆ ಶ್ರೀನಿವಾಸ್ ಅಭಿನಯಿಸಿದ್ದಾರೆ. ವರದಕ್ಷಿಣೆ ಪೀಡನೆಗೊಳಗಾದ ಮಗಳ ಸಂಕಷ್ಟಕ್ಕೆ ಆಸ್ತಿ ಮಾರುವ ದಂಪತಿಯಾಗಿ ಶ್ರೀನಿವಾಸ ಮೂರ್ತಿ ಮತ್ತು ಪದ್ಮಾವಾಸಂತಿ ನಟಿಸಿದ್ದಾರೆ. ಮಗಳು ಅತಿ ಹೆಚ್ಚು ಮಾರ್ಕ್ಸ್ ಗಳಿಸಬೇಕೆಂದು ಬಯಸುವ ತಾಯಿಯಾಗಿ ತನುಜಾ ಮತ್ತು ಮಗಳ ಪರಿಸ್ಥಿತಿ ಕಂಡು ಕೊರಗುವ ತಂದೆಯಾಗಿ ಕಲಾದೇಗುಲ ಶ್ರೀನಿವಾಸ್ ಕಾಣಿಸಿದ್ದಾರೆ. ಇಂಥ ಹಲವು ಪಾತ್ರಗಳ ಮಧ್ಯೆ ಅಂಗವೈಕಲ್ಯ, ಬಡತನ ಯಾವುದೂ ಸಮಸ್ಯೆ ಅಲ್ಲ ಎನ್ನುವಂತೆ ಸಾಧಿಸುವ ಕುಟುಂಬದ ಒಡೆಯನಾಗಿ ಮಂಜು ನಟಿಸಿದ್ದಾರೆ.
ಆತ್ಮಹತ್ಯೆಯನ್ನು ತಡೆಯುವ ಈ ಕಥೆಯನ್ನು ನಿರೂಪಿಸುವ ಪಾತ್ರವಾಗಿ ಶಶಿಕುಮಾರ್ ಕಾಣಿಸಿದ್ದಾರೆ.
ಸಮಾಜಕ್ಕೆ ಒಂದೊಳ್ಳೆಯ ಸಂದೇಶ ಸಾರುವ ಈ ಚಿತ್ರ ನಮ್ಮ ಪರಿಮಿತಿಯಲ್ಲಿದ್ದರೆ ಹೇಗೆ ಚೆನ್ನಾಗಿ ಜೀವನ ನಡೆಸಬಹುದು ಎನ್ನುವ ಸತ್ಯವನ್ನು ಸಾರುವ ಕೆಲಸ ಮಾಡಿದೆ.