ಸ್ನೇಹ , ದ್ವೇಷದ ಮಧ್ಯೆ ಪ್ರೇಮಿಗಳ ಸರ್ಕಸ್!
ಚಿತ್ರ: ಜಂಬೂ ಸರ್ಕಸ್
ನಿರ್ದೇಶಕರು: ಎಂ ಡಿ ಶ್ರೀಧರ್
ನಿರ್ಮಾಪಕರು: ಎಚ್ ಸಿ ಸುರೇಶ್
ತಾರಾಗಣ: ಪ್ರವೀಣ್ ತೇಜ್, ಅಂಜಲಿ ಅನೀಶ್, ಅಚ್ಯುತ್ ಕುಮಾರ್
ಇಬ್ಬರು ಸ್ನೇಹಿತರ ಮಕ್ಕಳು ಪ್ರೇಮದಲ್ಲಿ ಬಿದ್ದರೆ ಏನಾಗಬಹುದು? ಖಂಡಿತವಾಗಿ ಮದುವೆಯಾಗಬಹುದು. ಆದರೆ ಸ್ನೇಹಿತರ ಪತ್ನಿಯರೇ ಜಗಳಗಂಟಿಯರಾದರೆ? ಇಂಥದೊಂದು ಕತೆಯ ಜತೆಯಲ್ಲೇ ಭರ್ಜರಿ ಟ್ವಿಸ್ಟ್ ಕೂಡ ಸೇರಿಸಿ ಸಂಸಾರದಲ್ಲೇ ಸರ್ಕಸ್ ತಂದಿಟ್ಟ ಚಿತ್ರವೇ ಜಂಬೂ ಸರ್ಕಸ್.
ಆ ಹುಡುಗರಿಬ್ಬರದು ಶಾಲಾ ದಿನಗಳಿಂದ ಸ್ನೇಹಿತರಾಗಿ ಬೆಳೆದ ನಂಟು. ಆದರೆ ಒಂದೇ ಮಂಟಪದಲ್ಲಿ ಮದುವೆ ತನಕ ಮುಂದುವರಿಯುತ್ತದೆ. ಕಾಕಾತಾಳೀಯ ಎನ್ನುವಂತೆ ಇಬ್ಬರ ಪತ್ನಿಯರು ಕೂಡ ಒಂದೇ ದಿನ ಮಗುವಿಗೆ ತಾಯಾಗುತ್ತಾರೆ. ಅಲ್ಲಿಯವರೆಗೆ ಅಮರ ಮಧುರ ಪ್ರೇಮದಂತೆ ಸಾಗುವ ಈ ಜೋಡಿ ಸ್ನೇಹಿತರ ಬದುಕಲ್ಲಿ ಒಂದು ಪ್ರಮುಖ ತಿರುವು ಉಂಟಾಗುತ್ತದೆ. ಇಬ್ಬರು ಸ್ನೇಹಿತರು ಕೂಡ ಸೇರಿಕೊಂಡು ತಮ್ಮ ಮಕ್ಕಳನ್ನು ಯಾರಿಗೂ ತಿಳಿಯದಂತೆ ಬದಲಾಯಿಸಿಕೊಳ್ಳುತ್ತಾರೆ. ಆದರೆ ಈ ಸತ್ಯ ಕೊನೆಗೂ ಬಯಲಾಗುವುದು ಹೇಗೆ? ಆಗ ಮನೆಯವರು ಮತ್ತು ಮಕ್ಕಳು ಪ್ರತಿಕ್ರಿಯಿಸುವ ರೀತಿ ಹೇಗಿರುತ್ತದೆ ಎನ್ನುವುದೇ ಪ್ರಮುಖ ಅಂಶ.
ಇಬ್ಬರು ಪ್ರಾಣ ಸ್ನೇಹಿತರಾಗಿ ಅಚ್ಯುತ್ ಕುಮಾರ್ ಮತ್ತು ರವಿಶಂಕರ್ ನಟಿಸಿದ್ದಾರೆ. ಇವರಿಬ್ಬರ ಮಕ್ಕಳಾಗಿ ಪ್ರವೀಣ್ ತೇಜ್ ಮತ್ತು ಅಂಜಲಿ ಅನೀಶ್ ನಟಿಸಿದ್ದಾರೆ. ಪ್ರವೀಣ್ ತೇಜ್ ತುಂಟ ಯುವ ನಾಯಕನಿಗೆ ಬೇಕಾದ ಎಲ್ಲ ಅಂಶಗಳಿಂದ ಸೆಳೆಯುತ್ತಾರೆ. ಅದರಲ್ಲೂ ಕಾಲೇಜ್ ನಾಟಕದಲ್ಲಿ ದುಷ್ಯಂತನ ಪಾತ್ರ ನಿರ್ವಹಿಸುವ ದೃಶ್ಯದಲ್ಲಿ ಪೌರಾಣಿಕ ಲುಕ್ ಆಕರ್ಷಕವಾಗಿ ಕಾಣಿಸುತ್ತಾರೆ. ಈಗಾಗಲೇ ’ಮನದ ಕಡಲು’ ಮೂಲಕ ಮನಸೆಳೆದ ನಟಿ ಅಂಜಲಿ ಅನೀಶ್ ಇಲ್ಲಿ ತನ್ನ ಪ್ರತಿಭೆ ಏನೆಂದು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.
ನಾಯಕನ ತಾಯಿಯಾಗಿ ಕಿರುತೆರೆ ತಾರೆ ಸ್ವಾತಿ ಅದ್ಭುತ ಅಭಿನಯ ನೀಡಿದ್ದಾರೆ. ನಿವೃತ್ತ ಮಿಲಿಟರಿ ಅಧಿಕಾರಿಯಾಗಿ ಮೀಸೆಯಲ್ಲೇ ಮಾತನಾಡುವ ಅವಿನಾಶ್ ಕ್ಲೈಮ್ಯಾಕ್ಸ್ ನಲ್ಲಿ ಅದ್ಭುತವಾದ ಸಂಭಾಷಣೆಗಳ ಮಳೆಯನ್ನೇ ಸುರಿಸಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಆಕರ್ಷಕವಾಗಿದೆ. ಛಾಯಾಗ್ರಹಣ, ನಿರ್ದೇಶನ ಎಲ್ಲವೂ ಸೇರಿ ಜಂಬೂ ಸರ್ಕಸ್ ಪ್ರೇಕ್ಷಕರ ಮನಸೂರೆಗೈಯ್ಯುತ್ತಿದೆ.