ಮರಳು ರಾಜಕೀಯದ ಕರಾಳ ನೆರಳು
ಚಿತ್ರ: ಕೊತ್ತಲವಾಡಿ
ನಿರ್ದೇಶನ: ಶ್ರೀರಾಜ್
ನಿರ್ಮಾಣ: ಪುಷ್ಪ ಅರುಣ್ ಕುಮಾರ್
ತಾರಾಗಣ: ಪೃಥ್ವಿ ಅಂಬರ್, ಕಾವ್ಯಾ ಶೈವ, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು
ಬಂಗಾರದ ಮನುಷ್ಯ ಸಿನಿಮಾ ನೋಡಿ ನಗರದಿಂದ ಹಳ್ಳಿಗೆ ಮರಳಿದಂತೆ ಸಂದೇಶದಿಂದ ಜನೋದ್ಧಾರ ಮಾಡುವ ಚಿತ್ರ ತೆಗೆಯಬೇಕು ಎಂದಿದ್ದರು ನಿರ್ಮಾಪಕಿ ಪುಷ್ಪಾ ಅರುಣ್ ಕುಮಾರ್. ಇದೀಗ ತಮ್ಮ ಚಿತ್ರ ಕೊತ್ತಲವಾಡಿಯಲ್ಲಿ ಹಳ್ಳಿಗಳ ನದಿಯಲ್ಲಿ ಮರಳುಗಾರಿಕೆ ನಡೆಸಬಾರದು ಎನ್ನುವ ಸಂದೇಶ ನೀಡಿದ್ದಾರೆ.
ಕೊತ್ತಲವಾಡಿ ಒಂದು ಸುಂದರವಾದ ಊರು. ಊರಿನ ಆಕರ್ಷಣೆ ನದಿಯ ನೀರು. ಆದರೆ ನೀರಿನಾಳದ ಮರಳಿಗೆ ಮರುಳಾದವನು ಬಾಬಣ್ಣ. ಮರಳು ದಂಧೆಯ ತನ್ನ ಯೋಜನೆಯನ್ನು ಹಳ್ಳಿಗರ ತಲೆಯಲ್ಲಿ ತುಂಬುತ್ತಾನೆ. ಬಾಬಣ್ಣನ ಆತ್ಮೀಯ ಮೋನ ಮೇಸ್ತ್ರಿಯೂ ಇದನ್ನೇ ನಂಬುತ್ತಾನೆ. ಮರಳಿನ ಲಾರಿಗೆ ಖುದ್ದು ಚಾಲಕನಾಗುತ್ತಾನೆ. ಇದೇ ದಂಧೆಯ ಬಲದಿಂದಲೇ ಬಾಬಣ್ಣ ಶಾಸಕನೂ ಆಗುತ್ತಾನೆ. ಆದರೆ ಮುಂದೆ ಇವೆಲ್ಲವೂ ದೊಡ್ಡದೊಂದು ಅನಾಹುತಕ್ಕೆ ದಾರಿ ಮಾಡಿಕೊಡುತ್ತದೆ.
ಪೃಥ್ವಿ ಅಂಬರ್ ಮೋನ ಮೇಸ್ತ್ರಿಯಾಗಿ ಪಾತ್ರಕ್ಕೆ ಒಪ್ಪುವಂಥ ವ್ಯಕ್ತಿಯಾಗುವ ಪ್ರಯತ್ನದಲ್ಲಿ ಗೆದ್ದಿದ್ದಾರೆ. ಆ್ಯಕ್ಷನ್ ದೃಶ್ಯ ಸೇರಿದಂತೆ ಹಾಡಿನಲ್ಲೂ ಅದ್ಭುತ ನಟನೆ ನೀಡಿದ್ದಾರೆ. ಮತ್ತೊಂದೆಡೆ
ಬಾಬಣ್ಣನಾಗಿ ಗೋಪಾಲಕೃಷ್ಣ ದೇಶಪಾಂಡೆ ಪರಕಾಯ ಪ್ರವೇಶ ಮಾಡಿದ್ದಾರೆ.
ಪೃಥ್ವಿಗೆ ಜೋಡಿಯಾಗಿ ನಟಿಸಿರುವ ಕಾವ್ಯ ಶೈವ ಕಣ್ಣಲ್ಲೇ ನಟಿಸಿದ್ದಾರೆ.
ಶಾಸಕಿ ಮಾಲಿನಿಯಾಗಿ ಮಾನಸಿ ಸುಧೀರ್ ಗಮನ ಸೆಳೆಯುತ್ತಾರೆ. ನಟರಂಗ ರಾಜೇಶ್ ಕಟ್ಟುನಿಟ್ಟಿನ ಪೊಲೀಸ್ ಅಧಿಕಾರಿಯಾಗಿ ಮನಮುಟ್ಟುವ ಅಭಿನಯ ನೀಡಿದ್ದಾರೆ. ಅವಿನಾಶ್ ಕೂಡ ಹಿರಿಯ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ.
ಹಳ್ಳಿ ಸೊಗಡಿನ ಸಂಭಾಷಣೆಗೆ ರಘು ನಿಡುವಳ್ಳಿ ಜೀವಂತಿಕೆ ನೀಡಿದ್ದಾರೆ. ವಿಕಾಸ್ ವಸಿಷ್ಠ ಸಂಗೀತದ ಪ್ರೇಮಗೀತೆ ಎಲ್ಲರ ಮನಸೆಳೆದಿವೆ. ಛಾಯಾಗ್ರಹಣ ಮತ್ತೊಂದು ಹೈಲೈಟ್ ಆಗಿದೆ. ಈ ಎಲ್ಲ ಕಾರಣಗಳಿಂದಾಗಿ ಚಿತ್ರ ಪ್ರೇಕ್ಷಕ ವರ್ಗವನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.