ಹಳ್ಳಿ ಸೊಗಡಲ್ಲಿ ಅಮಾಯಕರು ಮತ್ತು ಅಪರಾಧಿಗಳ ಕಥೆ
ಚಿತ್ರ: ಎಲ್ಟು ಮುತ್ತ
ನಿರ್ದೇಶನ: ರಾ ಸೂರ್ಯ
ನಿರ್ಮಾಣ: ಸತ್ಯ ಶ್ರೀನಿವಾಸನ್
ಕಲಾವಿದರು: ಶೌರ್ಯ ಪ್ರತಾಪ್, ರಾ ಸೂರ್ಯ, ಪ್ರಿಯಾಂಕಾ ಮಳಲಿ ಮೊದಲಾದವರು.
ನವಿಲಿನಲ್ಲಿ ಮುಗ್ದತೆಯೂ ಇದೆ. ಮುಗ್ದತೆಯನ್ನು ಮೀರಿದ ಕ್ರೂರತೆಯೂ ಇದೆ. ಬಿಡುಗಡೆಗೂ ಮೊದಲೇ ಇಂಥದೊಂದು ಡೈಲಾಗ್ ಮೂಲಕ ಸದ್ದು ಮಾಡಿದ್ದ ’ಎಲ್ಟು ಮುತ್ತ’ ನಿಜಕ್ಕೂ ತನ್ನ ಕ್ರೂರತೆ ಮತ್ತು ಮುಗ್ದತೆಯ ಅನಾವರಣದ ಮೂಲಕ ಬೆಚ್ಚಿ ಬೀಳಿಸಿದೆ.
ಈ ಚಿತ್ರದ ಕಥೆ ಸಂಪೂರ್ಣವಾಗಿ ಕೊಡಗಿನಲ್ಲಿ ನಡೆಯುತ್ತದೆ. ಕೊಡಗಿನಲ್ಲಿ ಮಳೆಗೆ ಹೆಸರಾದ ನೆಲಜಿ ಗ್ರಾಮದಲ್ಲಿ ನಡೆಯುವ ನೈಜ ಘಟನೆ ಎನ್ನುವಂತೆ ನಿರೂಪಣೆ ಮಾಡುತ್ತಾ ಹೋಗಿದ್ದಾರೆ. ಹಳ್ಳಿ ಬದುಕಿನಲ್ಲಿ ಕೆಳಮಟ್ಟದ ಜೀವನ ನಡೆಸುವ ಎಲ್ಟು ಮತ್ತು ಮುತ್ತ ಎನ್ನುವ ಇಬ್ಬರ ಸುತ್ತ ನಡೆಯುವ ಕ್ರೌರ್ಯಕ್ಕೆ ಕನ್ನಡಿ ಹಿಡಿಯಲಾಗಿದೆ.
ಚೆಂಡು ಹೂವು ಮಾರಾಟ ನಡೆಸುವ ಎಲ್ಟುವಿನ ಹೂವುಗಳು ಮಹಿಳೆಯ ಮುಡಿ ಸೇರುವುದಕ್ಕಿಂತ ಮೃತರ ಎದೆ ಸೇರುವುದೇ ಹೆಚ್ಚು. ಆದರೂ ಎಲ್ಟುಗೆ ಮಹಿಳೆಯರೆಂದರೆ ವಿಪರೀತ ಹುಚ್ಚು. ತಕ್ಕ ಮಟ್ಟಿಗೆ ಸುಂದರನೂ ಆಗಿರುವ ಎಲ್ಟುವಿನ ಜೊತೆ ಸಲುಗೆ ಬೆಳೆಸಲು ಆ ಊರಲ್ಲಿ ಆಂಟಿಯರದೂ ಸರತಿ ಸಾಲು! ಆದರೆ ಮುತ್ತ ಹಾಗಲ್ಲ. ಮರಣದ ಮನೆಯಲ್ಲಿ ಚಂಬುಳ ಬಾರಿಸುವ ತಂಡದ ಸದಸ್ಯ. ಐದು ಮಂದಿಯ ತಂಡಕ್ಕೆ ಬಾಬನಿ ವ್ಯವಸ್ಥಾಪಕ. ಆದರೂ ಹಣ ವಸೂಲು ಮಾಡಬೇಕಾದರೆ ಮುತ್ತನೇ ಬೇಕು! ಮುತ್ತ ಬಾಯಿ ಬಿಡುವುದು ಎರಡೇ ಬಾರಿ. ಒಂದು ಹಸಿವಾದಾಗ ಅನ್ನಕ್ಕಾಗಿ. ಮತ್ತೊಂದು
ಮನೆಯಲ್ಲಿರುವ ಪುಟ್ಟ ಹೆಣ್ಣು ಮಗಳೊಂದಿಗಿನ ಮಾತುಕತೆಗಾಗಿ. ಸಾವಿನ ಮನೆಯಲ್ಲೇ ಸದಾ ಎದುರಾಗುವ ಎಲ್ಟು ಮತ್ತು ಮುತ್ತ ಬಾಲ್ಯದಲ್ಲಿ ಎಷ್ಟು ಆತ್ಮೀಯರಾಗಿದ್ದರು ಮತ್ತು ಕೊನೆಯಲ್ಲಿ ಹೇಗೆ ಪರಸ್ಪರ ವಿರೋಧಿಗಳಾದರು ಎನ್ನುವುದನ್ನು ಚಿತ್ರದ ಮೂಲಕ ಕಟ್ಟಿಕೊಡಲಾಗಿದೆ. ಅಂತ್ಯದಲ್ಲಿನ ತಿರುವು ಅಷ್ಟೇ ರೋಚಕವಾಗಿದೆ.
ಚೆಂಡು ಹೂವು ಮಾರುವ ಎಲ್ಟುವಾಗಿ ಖುದ್ದು ನಿರ್ದೇಶಕ ರಾ ಸೂರ್ಯ ನಟಿಸಿದ್ದಾರೆ. ಇವರ ಪಾತ್ರ ಒಂದಷ್ಟು ಸಂದರ್ಭದಲ್ಲಿ ಉಪೇಂದ್ರ ಚಿತ್ರದ ಉಪ್ಪಿಯನ್ನು ನೆನಪಿಸುತ್ತದೆ. ಚಿತ್ರದ ಕೇಂದ್ರ ಪಾತ್ರವಾದ ಮುತ್ತನಾಗಿ ಶೌರ್ಯ ಪ್ರತಾಪ್ ತಮ್ಮ ಶೌರ್ಯ ಪ್ರದರ್ಶಿಸಿದ್ದಾರೆ. ಈತನ ಡೊಳ್ಳು ಬಡಿಯುವ ತಂಡದ ವ್ಯವಸ್ಥಾಪಕನಾಗಿ ಮಂಗಳೂರು ಕರಾವಳಿಯ ರಂಗದಿಗ್ಗಜ ನವೀನ್ ಡಿ ಪಡೀಲ್ ನಟಿಸಿದ್ದಾರೆ. ನಾಯಕಿಯಾಗಿ ಪ್ರಿಯಾಂಕಾ ಮಳಲಿ ನಟನಾ ಪ್ರಧಾನ ಪಾತ್ರದಿಂದ ಗಮನ ಸೆಳೆದಿದ್ದಾರೆ. ಎರಡೇ ದೃಶ್ಯಗಳಲ್ಲಿ ಕಾಣಿಸಿಕೊಂಡರೂ ಯಮುನಾ ಶ್ರೀನಿಧಿಯ ಪಾತ್ರ ಗಮನ ಸೆಳೆಯುತ್ತದೆ. ಕಾಕ್ರೋಚ್ ಸುಧಿ ಕೂಡ ಪ್ರಧಾನ ಪಾತ್ರವೊಂದನ್ನು ನಿಭಾಯಿಸಿದ್ದಾರೆ.
ಚಿತ್ರಕ್ಕೆ ಪ್ರಸನ್ನ ಕೇಶವ ಸಂಗೀತ ನೀಡಿದ್ದಾರೆ. ಹಿನ್ನೆಲೆ ಸಂಗೀತದ ಅಬ್ಬರದಲ್ಲಿ ತನ್ನ ಗುರು ರವಿಬಸ್ರೂರು ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಭಾಸ್ಕರ್ ಛಾಯಾಗ್ರಹಣವೂ ಆಕರ್ಷಕ. ಹಳ್ಳಿ ಸೊಗಡಿನಲ್ಲಿ ಅಪರಾಧ ಲೋಕವನ್ನು ಈ ಚಿತ್ರದಲ್ಲಿ ಕಾಣಬಹುದಾಗಿದೆ.