ದೆವ್ವದ ಹೆಸರಲ್ಲಿ ಪ್ರೇಕ್ಷಕರ ಮೈ ಸೇರುವ ನಗೆ ಬುಗ್ಗೆ
ಚಿತ್ರ: ಸು ಫ್ರಮ್ ಸೋ
ನಿರ್ದೇಶನ: ಜೆ.ಪಿ ತೂಮಿನಾಡ್
ನಿರ್ಮಾಣ: ಲೈಟರ್ ಬುದ್ಧ ಫಿಲ್ಮ್ಸ್
ತಾರಾಗಣ: ಶಾನಿಲ್ ಗುರು, ರಾಜ್ ಬಿ ಶೆಟ್ಟಿ ಮತ್ತು ಜೆ.ಪಿ ತೂಮಿನಾಡ್ ಮತ್ತು ಇತರರು
ಮನೆ ಮಂದಿ ಸೇರಿ ನಗುವಂಥ ಹಾಸ್ಯ. ತಪ್ಪು ದಾರಿ ತುಳಿಯುವ ಯುವ ಜನತೆಗೆ ಸಂದೇಶ. ಮಂಗಳೂರು ಕರಾವಳಿಯ ಕಣ್ಮನ ಸೆಳೆಯುವ ಸನ್ನಿವೇಶ.. ಇವೆಲ್ಲವೂ ಸೇರಿದಂಥ ಚಿತ್ರವೇ ’ಸು ಫ್ರಮ್ ಸೋ’.
ಮರ್ಲೂರಿಗೆ ಯಾರೆಂದು ಬಲ್ಲಿರಿ ಎಂದು ಕೇಳಿದರೆ ರವಿಯಣ್ಣನದೇ ಮೊದಲ ಹೆಸರು. ವೃತ್ತಿಯಲ್ಲಿ ಓರ್ವ ಸಾಧಾರಣ ಮೇಸ್ತ್ರಿ ಕೆಲಸಗಾರ. ಆದರೆ ಎಲ್ಲ ವಿಚಾರಗಳಲ್ಲೂ ಊರಿಗೆ ಈತನೇ ಮುಖ್ಯಸ್ಥ. ಇಷ್ಟೊಂದು ಹೆಸರಿರುವ ರವಿಯಣ್ಣನಿಗೆ ಸಮಸ್ಯೆ ಒಂದು ಎದುರಾಗುತ್ತದೆ. ವಾಸ್ತವದಲ್ಲಿ ಈ ಸಮಸ್ಯೆ ಕೂಡ ರವಿಯಣ್ಣನ ವೈಯಕ್ತಿಕ ಸಮಸ್ಯೆ ಏನಲ್ಲ. ಊರಿನ ಯುವಕನೋರ್ವನ ಮೈಯಿಂದ ಪ್ರೇತೋಚ್ಛಾಟನೆ ಮಾಡಬೇಕಿರುತ್ತದೆ. ಅಸಲು ಪ್ರೇತ ಯುವಕನ ಮೈ ಸೇರಿದ್ದು ಹೇಗೆ? ತನ್ನದಲ್ಲದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನದಲ್ಲಿ ರವಿಯಣ್ಣನ ಸಮಸ್ಯೆಯೂ ಪರಿಹಾರವಾಗಿದ್ದು ಹೇಗೆ? ಮೊದಲಾದ ಕುತೂಹಲಕಾರಿ ಅಂಶಗಳಿಗೆ ಚಿತ್ರದಲ್ಲಿ ರಸಮಯ ಅನಿಸುವಂಥ ಉತ್ತರಗಳಿವೆ.
ಚಿತ್ರದಲ್ಲಿ ರವಿಯಣ್ಣನಾಗಿ ಶನೀಲ್ ಗೌತಮ್ ನಟನೆ ಮನಸೆಳೆಯುವಂತಿದೆ. ದೆವ್ವಕ್ಕೆ ದೇಹವಾಗುವ ಪಾತ್ರವಾಗುವ ನಟನೆಯನ್ನು ಸ್ವತಃ ನಿರ್ದೇಶಕ ಜೆ.ಪಿ ತೂಮಿನಾಡು ಮಾಡಿದ್ದಾರೆ. ಮೊದಲ ನಿರ್ದೇಶನದಲ್ಲೇ ಅದ್ಭುತವಾದ ಚಿತ್ರ ನೀಡಿದ್ದಾರೆ. ರವಿಯಣ್ಣನ ಬಲಗೈ ಬಂಟ ಸತೀಶನಾಗಿ ದೀಪಕ್ ಪಾಣಾಜೆ, ರಿಕ್ಷಾ ಚಂದ್ರಣ್ಣನಾಗಿ ಪ್ರಕಾಶ್ ತೂಮಿನಾಡ್ ನಟಿಸಿದ್ದಾರೆ. ಭಾವನಾಗಿ ಪುಷ್ಪರಾಜ್ ಬೋಳಾರ್ ನಟನೆ ನಗೆಯುಕ್ಕಿಸುತ್ತದೆ. ಮಧ್ಯಂತರದ ಬಳಿಕ ನಟಿ ಸಂಧ್ಯಾ ಅರಕೆರೆ ಪ್ರೇಕ್ಷಕರನ್ನು ಭಾವುಕಗೊಳಿಸುತ್ತಾರೆ.
ಚಿತ್ರದ ಪ್ರತಿಯೊಂದು ಪಾತ್ರಗಳಿಗೂ ಪ್ರಾಧಾನ್ಯತೆ ನೀಡಲಾಗಿದೆ. ಸಣ್ಣಪುಟ್ಟ ಪಾತ್ರಗಳಿಗೂ ಅವರದ್ದೇ ಆದ ಗುಣ ಕಟ್ಟಿಕೊಟ್ಟಿದ್ದಾರೆ. ಇದಕ್ಕೆ ಇಸ್ತ್ರಿ ಬಟ್ಟೆ ಹುಡಿಯಾಗದಂತೆ ಕಾಳಜಿ ವಹಿಸುವ ದಾಮು, ಕಣ್ಣು ಕಾಣದಿದ್ದರೂ ಇತರರ ಬಗ್ಗೆ ಕಮೆಂಟ್ ಮಾಡುವ ತಾತನ ಪಾತ್ರವೂ ಉದಾಹರಣೆ. ಈ ಚಿತ್ರದ ನಿರ್ಮಾಣದಲ್ಲಿ ಸಹಭಾಗಿಯಾಗಿದ್ದ ರಾಜ್ ಬಿ ಶೆಟ್ಟಿ ಒಂದು ಪಾತ್ರದಲ್ಲೂ ಕಾಣಿಸಿಕೊಂಡು ಸರ್ಪ್ರೈಸ್ ನೀಡಿದ್ದಾರೆ. ಪ್ರೇತಾತ್ಮಗಳ ಬಗೆಗಿನ ನಂಬಿಕೆ ಹೆಸರಲ್ಲಿ ಹೇಗೆ ನಾವೇ ನಮಗೆ ಮೋಸ ಮಾಡಿಕೊಳ್ಳುತ್ತೇವೆ ಎನ್ನುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ.
ಸು ಫ್ರಮ್ ಸೋ ಅಂದರೆ ಸುಲೋಚನಾ ಫ್ರಮ್ ಸೋಮೇಶ್ವರ ಎಂದು ಟ್ರೈಲರ್ ನಲ್ಲೇ ತೋರಿಸಲಾಗಿತ್ತು. ಆದರೆ ಹಾಸ್ಯ, ಹಾರರ್ ಮಾತ್ರವಲ್ಲದೆ ಮಂಗಳೂರು ಕರಾವಳಿಯ ಜನ ಜೀವನವನ್ನು ಕಟ್ಟಿಕೊಡುವಲ್ಲಿ ಚಿತ್ರ ಯಶಸ್ವಿಯಾಗಿದೆ. ಛಾಯಾಗ್ರಹಣ, ಕಲರ್ ಟೋನ್, ಕಲಾ ನಿರ್ದೇಶನ, ಸಂಗೀತ, ಮಂಗಳೂರಿನ ತುಳು ಮಿಶ್ರಿತ ಸಂಭಾಷಣೆ ಎಲ್ಲವೂ ಚಿತ್ರಕ್ಕೆ ಪೂರಕವಾಗಿವೆ. ಮಲಯಾಳಂ ಸಿನಿಮಾಗಳನ್ನು ಕಂಡು ಮೆಚ್ಚುವ ಮಂದಿಗೆ ಈ ಚಿತ್ರದ ಮೂಲಕ ಅದೇ ಶೈಲಿಯ ಕನ್ನಡ ಸಿನಿಮಾ ಲಭಿಸಿದಂತಾಗಿದೆ.