ಕುಟುಂಬ ಮೆಚ್ಚುವ ಯೂತ್ ಫುಲ್ ಸಿನಿಮಾ
ಚಿತ್ರ: ಜ್ಯೂನಿಯರ್
ನಿರ್ದೇಶಕ: ರಾಧಾಕೃಷ್ಣ ರೆಡ್ಡಿ
ನಿರ್ಮಾಪಕ: ಸಾಯಿ ಕೊರಪಟಿ
ತಾರಾಗಣ: ಕಿರೀಟಿ, ಜೆನಿಲಿಯಾ, ವಿ ರವಿಚಂದ್ರನ್
ಸಾಮಾನ್ಯವಾಗಿ ಯುವ ಹೀರೋ ಎಂಟ್ರಿಯಾಗುವಾಗ ಲವ್ ಸ್ಟೋರಿಗಳಲ್ಲೇ ಕಾಣಿಸುತ್ತಾರೆ. ಆದರೆ ಆರಂಭದಲ್ಲೇ ಒಂದು ಕೌಟುಂಬಿಕ ಹಿನ್ನೆಲೆಯ ಭದ್ರ ಅಡಿಪಾಯದ ಕಥೆಯೊಂದಿಗೆ ಎಂಟ್ರಿ ಕೊಟ್ಟಿದ್ದಾರೆ ನವನಟ ಕಿರೀಟಿ.
ಪುನೀತ್ ರಾಜ್ ಕುಮಾರ್ ಗೆ ಹೇಗೆ ಒಬ್ಬ ತೆಲುಗು ನಿರ್ದೇಶಕ ಅದ್ಭುತವಾದಂಥ ಅಪ್ಪು ಚಿತ್ರ ಕಟ್ಟಿಕೊಟ್ಟರೋ ಅದೇ ರೀತಿ ಕಿರೀಟಿಗೆ ರಾಧಾಕೃಷ್ಣ ರೆಡ್ಡಿ ಒಂದು ಲವಲವಿಕೆಯೊಂದಿಗೆ ಫ್ಯಾಮಿಲಿ ಸೆಂಟಿಮೆಂಟ್ ತುಂಬಿದ ಕೌಟುಂಬಿಕ ಚಿತ್ರವನ್ನು ನೀಡಿದ್ದಾರೆ.
ಅಭಿನವ್ ಕಾಲೇಜ್ ಬದುಕಿನಿಂದ ವೃತ್ತಿ ಬದುಕಿಗೆ ಸೇರಿಕೊಳ್ಳುವ ಕಥೆಯೊಂದಿಗೆ ಇಡೀ ಚಿತ್ರ ಸಂಪೂರ್ಣಗೊಳ್ಳುತ್ತದೆ. ಅಪ್ಪನ ಅತಿಯಾದ ಪ್ರೀತಿಯನ್ನು ಅಪಾರ್ಥ ಮಾಡಿಕೊಂಡ ಪುತ್ರ ಮಧ್ಯಂತರದ ಹೊತ್ತಿಗೆ ಆ ಪ್ರೀತಿಯ ಹಿಂದಿನ ಅಂತರಾರ್ಥವನ್ನು ಅರಿತಿರುತ್ತಾನೆ. ಹಾಗೆ ಅಪ್ಪನನ್ನು ಅರ್ಥಮಾಡಿಕೊಳ್ಳಲು ಕಾರಣವಾದ ಫ್ಲ್ಯಾಶ್ ಬ್ಯಾಕ್ ಸ್ಟೋರಿ ಏನು ಎನ್ನುವುದನ್ನು ಚಿತ್ರಮಂದಿರದಲ್ಲಿ ನೋಡುವುದೇ ಸೊಗಸು.
ತಂದೆಯಾಗಿ ರವಿಚಂದ್ರನ್ ನಟಿಸಿದ್ದರೆ ತಂದೆಗೆ ತಕ್ಕ ಪುತ್ರನಾಗಿ ನಾಯಕ ನಟ ಕಿರೀಟಿ ಪ್ರೇಕ್ಷಕರ ಮನಗೆಲ್ಲುತ್ತಾರೆ. ಆಕರ್ಷಕ ಡಾನ್ಸ್ ಸ್ಟೆಪ್ಸ್, ಚಾಕಚಕ್ಯತೆಯ ಹೊಡೆದಾಟದ ದೃಶ್ಯಗಳು ಹೈಲೈಟ್ಸ್ ಅನಿಸಿವೆ. ಪ್ರಥಮ ಚಿತ್ರದಲ್ಲೇ ಕಿರೀಟಿ ಇಷ್ಟೊಂದು ವೈವಿಧ್ಯತೆ ತೋರಿಸಿರುವುದು ನಿಜಕ್ಕೂ ಅಭಿನಂದನಾರ್ಹ.
ತಂದೆ ಕೋದಂಡಪಾಣಿ ಪಾತ್ರದಲ್ಲಿ ರವಿಚಂದ್ರನ್ ನಟನೆಗೆ ಒತ್ತು ನೀಡುವ ಪಾತ್ರದಲ್ಲಿ ಕಾಣಿಸಿದ್ದಾರೆ. ಮನೆದೇವ್ರು ಜೋಡಿ ಇಲ್ಲಿ ಮತ್ತೆ ಒಂದಾಗಿದ್ದಾರೆ. ಆದರೆ ಕಥೆ ಪಿತೃದೇವೋಭವ ಎನ್ನುವಂತೆ ಸಾಗುತ್ತದೆ. ಪುತ್ರನ ಮೇಲಿನ ಅಕ್ಕರೆ, ಕರುಳ ಕುಡಿಯ ಮೇಲಿನ ವ್ಯಾಮೋಹ ಮೊದಲಾದ ಭಾವನಾತ್ಮಕ ದೃಶ್ಯಗಳಲ್ಲಿ ಕ್ರೇಜಿಸ್ಟಾರ್ ಸ್ಕೋರ್ ಮಾಡಿದ್ದಾರೆ.
ಚಿತ್ರದಲ್ಲಿ ನಾಯಕ, ನಾಯಕನ ತಂದೆ ಮತ್ತು ಜೆನಿಲಿಯಾ ಪಾತ್ರಕ್ಕೆ ವಿಪರೀತ ಒತ್ತು ನೀಡಲಾಗಿದೆ. ಜೆನಿಲಿಯಾ ಕೂಡ ಇತರ ಸಿನಿಮಾಗಳಿಗಿಂತ ವಿಭಿನ್ನವಾದ ಪಾತ್ರವನ್ನೇ ಆಯ್ದುಕೊಂಡಿದ್ದು, ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಶ್ರೀಲೀಲಾ ಸ್ಫೂರ್ತಿ ಎನ್ನುವ ಯುವತಿಯಾಗಿ ನಟಿಸಿದ್ದಾರೆ. ಈಕೆ ಅಭಿನವ್ ಗೆ ಸ್ಫೂರ್ತಿಯಾಗಿರುತ್ತಾರೆ. ಶ್ರೀಲೀಲಾ ವೈರಲ್ ಹಾಡಿಗೆ ದೇವಿಶ್ರೀ ಪ್ರಸಾದ್ ನೀಡಿರುವ ಸಂಗೀತ ವೈರಲಾಗಿದೆ. ಬಾಹುಬಲಿ ಖ್ಯಾತಿಯ ಸೆಂದಿಲ್ ಛಾಯಾಗ್ರಹಣ ಚಿತ್ರದ ಮತ್ತೊಂದು ಪ್ರಮುಖ ಅಂಶ.
ಅಚ್ಯುತ್ ಕುಮಾರ್, ಬಿರಾದಾರ್, ಮೊದಲಾದವರು ಮರೆಯಲಾಗದ ಪಾತ್ರಗಳನ್ನು ನಿಭಾಯಿಸಿದ್ದಾರೆ. ಹಳ್ಳಿಯ ಮಂದಿಗೆ ಆಧುನಿಕವಾಗಿ ಅಪ್ಡೇಟ್ ಆಗಬೇಕು ಎನ್ನುವ ಸಂದೇಶವೂ ಈ ಚಿತ್ರದಲ್ಲಿದೆ. ಈ ಎಲ್ಲಾ ಕಾರಣಗಳಿಂದಾಗಿಯೇ ಸಿನಿಮಾ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.