ಒಬ್ಬ ನಿರ್ದೇಶಕನ ಪಯಣದ ಮಧುರ ಫ್ಲ್ಯಾಶ್ ಬ್ಯಾಕ್
ಚಿತ್ರ: ಅಂದೊಂದಿತ್ತು ಕಾಲ****
ನಿರ್ದೇಶಕ: ಕೀರ್ತಿ ಕೃಷ್ಣಪ್ಪ
ನಿರ್ಮಾಪಕ: ಭುವನ್ ಸುರೇಶ್
ತಾರಾಗಣ: ವಿನಯ್ ರಾಜ್ ಕುಮಾರ್, ಅದಿತಿ ಪ್ರಭುದೇವ, ನಿಶಾ ರವಿಕೃಷ್ಣನ್ ಮೊದಲಾದವರು
ಪ್ರಾಥಮಿಕ ಶಾಲೆಯಿಂದ ಟೆಂಟ್ ಗೆ ಹೋಗಿ ವಿಷ್ಣುವರ್ಧನ್ ರ ’ನಾಗರ ಹಾವು’ ಸಿನಿಮಾ ನೋಡಿದಾಗ ಸೃಷ್ಟಿಯಾದ ಸಿನಿಮಾ ಹುಚ್ಚು. ಚಿತ್ರದ ಬಗ್ಗೆ ತರಗತಿಯಲ್ಲಿ ಮಾತನಾಡಿದ ಶಿಕ್ಷಕರು ನಿರ್ದೇಶಕರೇ ಎಲ್ಲಕ್ಕೂ ಮುಖ್ಯ ಅಂತಾರೆ. ಇದನ್ನೆಲ್ಲ ಆಸಕ್ತಿಯಿಂದ ಆಲಿಸಿದ ಕುಮಾರ ಎನ್ನುವ ವಿದ್ಯಾರ್ಥಿ ತಾನೇ ನಿರ್ದೇಶಕ ಆಗಬೇಕು ಎಂದು ಕನಸು ಕಾಣುತ್ತಾನೆ. ಈ ಕನಸಿನೊಂದಿಗೆ ಗಾಂಧಿನಗರ ಸೇರಿ ನಡೆಸುವ ಪ್ರಯತ್ನ ಮತ್ತು ಪ್ರಯತ್ನದ ಮಧ್ಯೆ ನೆನಪಿಸುವ ಫ್ಲ್ಯಾಶ್ ಬ್ಯಾಕ್ ಸ್ಟೋರಿಯೇ ’ಅಂದೊಂದಿತ್ತು ಕಾಲ’.
ಗಾಂಧಿನಗರ ಸೇರುವ ಕುಮಾರ ನಿರ್ದೇಶಕನಾಗಲು ಅವಕಾಶಕ್ಕಾಗಿ ಹುಡುಕಾಡುತ್ತಾನೆ. ಆದರೆ ಬಹಳಷ್ಟು ಕಾಲ ಉತ್ತಮ ಅವಕಾಶಗಳೇ ಸಿಗದೆ ಕಷ್ಟಪಡಬೇಕಾಗುತ್ತದೆ. ಮತ್ತೊಂದೆಡೆ ಹಳ್ಳಿಯ ಮನೆಯಲ್ಲಿ ಬಡತನ ತುಂಬಿರುತ್ತದೆ. ಮಗ ದೊಡ್ಡ ಸಂಪಾದನೆ ಮಾಡಿ ಕಾರು ಕೊಳ್ಳಬೇಕೆನ್ನುವ ಕನಸು ತಾಯಿಯದ್ದಾಗಿರುತ್ತದೆ. ಆದರೆ ಕೊನೆಗೂ ಕುಮಾರ ನಿರ್ದೇಶಕನಾಗುತ್ತಾನ? ತಾಯಿಯ ಆಸೆ ಈಡೇರಿಸುತ್ತಾನ? ಎನ್ನುವುದೇ ಚಿತ್ರದ ಕಥೆ.
ಒಬ್ಬ ಸಿನಿಮಾ ಪ್ರೇಮಿಯ ಬದುಕಿನಿಂದ ಹಿಡಿದು, ಯುವ ನಿರ್ದೇಶಕ, ಸಹಾಯಕ ನಿರ್ದೇಶಕನ ಕಷ್ಟ ಕಾರ್ಪಣ್ಯಗಳ ತನಕ ಬದುಕಿನ ಎಲ್ಲ ಬೀಳುಗಳನ್ನು ನಿರ್ದೇಶಕರು ಪರದೆ ಮೇಲೆ ಕಟ್ಟಿಕೊಟ್ಟಿದ್ದಾರೆ. ಪಾತ್ರಕ್ಕೆ ಬೇಕಾದ ಮಾದರಿಯ ನಟನೆಯನ್ನು ವಿನಯ್ ಯಾವುದೇ ಎಗ್ಗಿಲ್ಲದೆ ನೀಡಿದ್ದಾರೆ.
ಚಿತ್ರದ ನಾಯಕಿ ವಸುಂಧರಾ ಪಾತ್ರ ಮಧ್ಯಂತರದ ಬಳಿಕ ಎಂಟ್ರಿಯಾಗುತ್ತದೆ. ಕುಮಾರನ ಪ್ರೀತಿಯ ವಸುವಾಗಿ ಅದಿತಿ ಪ್ರಭುದೇವ ತಮ್ಮ ಎಂದಿನ ಲವಲವಿಕೆಯ ಅಭಿನಯ ನೀಡಿದ್ದಾರೆ. ಅದಿತಿಯ ಪ್ರವೇಶವಾಗುತ್ತಿದ್ದ ಹಾಗೆಯೇ ಬರುವ ಪ್ರೇಮಗೀತೆಯನ್ನು ಆಕರ್ಷಕವಾಗಿಯೇ ಚಿತ್ರೀಕರಿಸಲಾಗಿದೆ.
ರವಿಚಂದ್ರನ್ ಆಗಿಯೇ ಕಾಣಿಸಿಕೊಳ್ಳುವ ರವಿಚಂದ್ರನ್, ಪ್ರೊಡಕ್ಷನ್ ಮ್ಯಾನೇಜರ್ ಪಾತ್ರ ನಿರ್ವಹಿಸಿರುವ ಕಡ್ಡಿಪುಡಿ ಚಂದ್ರು, ಕುಮಾರನ ತಾಯಿಯಾಗಿ ನಟಿಸಿರುವ ಅರುಣಾ ಬಾಲರಾಜ್ ಅಭಿನಯ ಮನೋಜ್ಞವಾಗಿವೆ. ಚಿತ್ರದ ನಿರ್ಮಾಪಕ ಭುವನ್ ಸುರೇಶ್ ಸ್ವತಃ ನಿರ್ಮಾಪಕರಾಗಿ ನಟಿಸಿ ಮನಗೆಲ್ಲುತ್ತಾರೆ. ಪ್ರತಿ ಸಿನಿಮಾ ಪ್ರೇಮಿ ಕೂಡ ಒಂದಲ್ಲ ಒಂದು ಕಡೆ ಇಲ್ಲಿ ತನ್ನ ಕಥೆಯೂ ಇದೆ ಎಂದು ನೆನಪಿಸಿಕೊಳ್ಳುವಂಥ ಚಿತ್ರ ಇದು.