'ಸ್ವಾಮಿ’ ಎನ್ನುವ ಹಂತಕನ ಸಂಚು..!
ಚಿತ್ರ: ರಿಪ್ಪನ್ ಸ್ವಾಮಿ****
ನಿರ್ದೇಶನ: ಕಿಶೋರ್ ಮೂಡುಬಿದಿರೆ
ನಿರ್ಮಾಣ: ಪಂಚಾನನ ಫಿಲ್ಮ್ಸ್
ತಾರಾಗಣ: ವಿಜಯ ರಾಘವೇಂದ್ರ, ಅಶ್ವಿನಿ ಚಂದ್ರಶೇಖರ್ ಮೊದಲಾದವರು.
ಸ್ವಾಮಿ ಎನ್ನುವ ಹೆಸರಿಗೂ ಈತನ ವರ್ತನೆಗೂ ಸಂಬಂಧವೇ ಇಲ್ಲ. ಯಾಕೆಂದರೆ ಅಷ್ಟೊಂದು ಕ್ರೌರ್ಯ ತುಂಬಿದ ಬದುಕು ರಿಪ್ಪನ್ ಸ್ವಾಮಿಯದು. ತನ್ನ ಸಾಕು ಹಂದಿಯನ್ನೇ ಮಾಂಸಕ್ಕಾಗಿ ಬಲಿಕೊಡುವ ಸಂದರ್ಭದಲ್ಲಿ ಗುಂಡು ಹೊಡೆದು ಕೊಲ್ಲುವಂಥ ವಿಚಿತ್ರ ಮನುಷ್ಯ. ಈತ ಉರಿಗಣ್ಣು ಬಿಟ್ಟು ಯಾರ ವಿರುದ್ಧ ಯಾವಾಗ ಸಿಡಿದು ನಿಲ್ಲುತ್ತಾನೆಂದೇ ಹೇಳಲಾಗದು. ಇಂಥ ರಿಪ್ಪನ್ ಸ್ವಾಮಿಗೆ ಒಬ್ಬಳು ಅಂದದ ಮಡದಿ ಇರುತ್ತಾಳೆ. ವೃತ್ತಿಯಲ್ಲಿ ಆಯುರ್ವೇದಿಕ್ ವೈದ್ಯೆ.
ಈ ವೈದ್ಯೆ ಹಂದಿ ಅಡುಗೆ ಮಾಡುವಲ್ಲಿಯೂ ನಿಸ್ಸೀಮಳು. ಹೆಸರು ಮಂಗಳಾ. ಈ ಪಾತ್ರವನ್ನು ನಟಿ ಅಶ್ವಿನಿ ಚಂದ್ರಶೇಖರ್ ನಿಭಾಯಿಸಿದ್ದಾರೆ. ಈ ಎರಡು ವಿಭಿನ್ನ ಸ್ವಭಾವದ ಮಂದಿಯದ್ದು ಪ್ರೇಮ ವಿವಾಹ. ಹಾಗಂತ ಖುದ್ದು ರಿಪ್ಪನ್ ಸ್ವಾಮಿಯೇ ಹೇಳುತ್ತಿರುತ್ತಾನೆ. ಆದರೆ ಈ ಪ್ರೀತಿಯ ಉತ್ತುಂಗ ಏನು ಎನ್ನುವುದನ್ನೇ ಕ್ಲ್ಯೈಮ್ಯಾಕ್ಸ್ ನಲ್ಲಿ ತೆರೆದಿಡಲಾಗಿದೆ.
ಪೂರ್ತಿಯಾಗಿ ಮಲೆನಾಡಿನಲ್ಲಿ ನಡೆಯುವಂಥ ಕಥೆ ಇದು. ಪ್ರಕಾಶ್ ತೂಮಿನಾಡು ಸೇರಿದಂತೆ ನಾಯಕನ ಸ್ನೇಹಿತರಾಗಿ ನಟಿಸಿದವರು ಹಾಸ್ಯದ ಜತೆಗೆ ಕಥೆಯೊಂದಿಗೂ ಪ್ರಮುಖ ಪಾತ್ರವಹಿಸಿದ್ದಾರೆ. ತಂದೆಯ ಕಾಲದಿಂದಲೂ ಜತೆಯಲ್ಲೇ ಇರುವವರಿಗೂ ಅರ್ಥವಾಗದಂಥ ವ್ಯಕ್ತಿತ್ವ ಸ್ವಾಮಿಯದು. ಈತನ ಒಳಗೆ ಒಬ್ಬ ತಣ್ಣನೆಯ ಕ್ರೌರ್ಯ ತುಂಬಿದ ಹಂತಕನಿರುವ ಸತ್ಯ ಚಿತ್ರ ಹೊರಗಿಡುತ್ತಾ ಹೋಗುತ್ತದೆ. ಸ್ವಾಮಿಮಾಡಿದ ಕೊಲೆಗಳೆಷ್ಟು ಎನ್ನುವುದೇ ಚರ್ಚೆಯ ವಿಷಯವಾಗುತ್ತದೆ.
ರಿಪ್ಪನ್ ಸ್ವಾಮಿಯಿಂದ ಮಾತ್ರವಲ್ಲ, ಚಿತ್ರದ ಉಳಿದ ಪಾತ್ರಗಳಿಂದ ಕೂಡ ಅಭಿನಯ ತೆಗೆಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಚಿತ್ರದಲ್ಲಿ ಪ್ರಮುಖ ಲೇಡಿ ಪೊಲೀಸ್ ಅಧಿಕಾರಿ ಆಗಿ ಕಾಣಿಸಿರುವ ಅಂಜುಮಾಲ ಪಾತ್ರ ಇದಕ್ಕೊಂದು ಉದಾಹರಣೆ. ಮೊದಲ ಚಿತ್ರದಲ್ಲೇ ಅದ್ಭುತ ಪಾತ್ರವನ್ನು ನಿಭಾಯಿಸಿರುವ ಅನುಷ್ಕಾ ಪ್ರಶಂಸೆಗೆ ಅರ್ಹರಾಗುತ್ತಾರೆ.
ಪಿ.ಸಿ ದೇಜಣ್ಣನಾಗಿ ಮತ್ತೋರ್ವ ರಂಗನಟ ಕೃಷ್ಣಮೂರ್ತಿ ಕವತ್ತಾರು ಕೂಡ ನಗಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚಿತ್ರದ ಹಾಡುಗಳು ಮನಮೋಹಕವಾಗಿವೆ. ಸ್ಯಾಮುಯೆಲ್ ನೀಡಿರುವ ಬಿಜಿಎಮ್ ಪಾತ್ರ ಪೋಷಣೆಗೆ ತಕ್ಕಂತಿದೆ. ಮಾಸ್ ಮಾದ ಸಾಹಸ ನಿರ್ದೇಶನದಲ್ಲಿ ವಿಜಯರಾಘವೇಂದ್ರ ಅದ್ಭುತ ಸ್ಟಂಟ್ ಮಾಡಿದ್ದಾರೆ. ವಿಜಯರಾಘವೇಂದ್ರರನನ್ನು ಹೊಸ ಅವತಾರದಲ ನೋಡಲು ಬಯಸುವವರಿಗೆ ಹಾಗೂ ಆ್ಯಕ್ಷನ್ ಪ್ರಿಯರಿಗೆ ಇದೊಂದು ಹಬ್ಬ ಆಗುವುದರಲ್ಲಿ ಸಂದೇಹವಿಲ್ಲ.