ತಾಯಿ ಮಮತೆ ಮತ್ತು ಕೊಲೆಯ ತನಿಖೆ
ಚಿತ್ರ: ಉಸಿರು
ನಿರ್ದೇಶನ: ಪನೇಮ್ ಪ್ರಭಾಕರ್
ನಿರ್ಮಾಣ: ಲಕ್ಷ್ಮೀ ಹರೀಶ್
ತಾರಾಗಣ: ತಿಲಕ್, ಪ್ರಿಯಾ ಹೆಗ್ಡೆ, ಬಲ ರಾಜ್ವಾಡಿ ಮೊದಲಾದವರು.
ನಾಯಕನ ತಾಯಿ ಸೆಂಟಿಮೆಂಟ್ ನಿಂದ ಶುರುವಾಗಿ ತಾಯಿ ಸೆಂಟಿಮೆಂಟ್ ನಲ್ಲೇ ಕೊನೆಯಾಗುವ ಚಿತ್ರ ಉಸಿರು. ಇಲ್ಲಿ ಮಗನ ಪಾಲಿನ ಉಸಿರೇ ತಾಯಿ. ಆದರೆ ಆ ತಾಯಿಗಾದ ಅನ್ಯಾಯದ ಹೆಸರಲ್ಲಿ ಮಗನಲ್ಲಾದಂಥ ಬದಲಾವಣೆಯೇ ಚಿತ್ರದ ಪ್ರಮುಖ ಅಂಶ. ಬದಲಾದ ಮಗನ ಬದುಕಿನ ರೀತಿಯಲ್ಲಿನ ನಿಗೂಢತೆಯೇ ಕಥೆಯೊಳಗೆ ಕುತೂಹಲ ಸೃಷ್ಟಿಸಲು ಕಾರಣವಾಗಿದೆ.
ಒಂದು ಫ್ಲ್ಯಾಶ್ ಬ್ಯಾಕ್ ಮೂಲಕ ಆರಂಭವಾಗುವ ಕಥೆ. ತಾಯಿ ಮೇಲೆ ಹಲ್ಲೆ ನಡೆಯಿತೆಂದು ಹೇಳಿ ಹಲ್ಲೆಗೈದವನ ಕೊಲೆ ನಡೆಸಿದ ಬಾಲಾಪರಾಧಿ ಸೂರ್ಯ. ಆತನ ವಿರುದ್ಧ ಪ್ರಕರಣ ದಾಖಲಿಸುವವರೇ ಇಲ್ಲ. ಆದರೂ ಪೊಲೀಸ್ ಅಧಿಕಾರಿ ಆತನನ್ನು ಹತ್ತು ವರ್ಷಗಳ ಕಾಲ ಬಂಧನದಲ್ಲಿರಿಸುತ್ತಾನೆ. ಯುವಕನಾಗಿ ಬಂಧನದಿಂದ ಹೊರಗೆ ಬರುವ ಸೂರ್ಯ ಮತ್ತೆ ಬೇಟೆ ಶುರು ಮಾಡುತ್ತಾನೆ. ತಾಯಿಯ ಕೊಲೆಗೆ ಕಾರಣನಾದ ಮತ್ತೋರ್ವನ ಹುಡುಕಾಟ ಶುರುಮಾಡುತ್ತಾನೆ. ಇದೇ ಸಂದರ್ಭದಲ್ಲಿ ಅಲ್ಲಿಗೆ ಹೊಸದಾಗಿ ಚಾರ್ಜ್ ತೆಗೆದುಕೊಳ್ಳುವ ಪೊಲೀಸ್ ಅಧಿಕಾರಿಯಾಗಿ ರಾಜೀವ್ ಮುತ್ತಣ್ಣನ ಆಗಮನವಾಗುತ್ತದೆ. ಗರ್ಭಿಣಿ ಪತ್ನಿಯೊಂದಿಗೆ ಮಡಿಕೇರಿಗೆ ಬಂದು ಮನೆ ಮಾಡುವ ರಾಜೀವ್ ಮುತ್ತಣ್ಣ ಕೈಗೆತ್ತಿಕೊಳ್ಳುವ ಪ್ರಕರಣ ಯಾವುದು? ಆದರೆ
ಈತನ ಪತ್ನಿಯೇ ಅಪಾಯಕ್ಕೆ ಸಿಲುಕುವಂತೆ ಮಾಡಿದ್ದು ಯಾರು? ಇವೆಲ್ಲಕ್ಕೂ ಸಿನಿಮಾ ನೋಡಿ ಉತ್ತರ ಪಡೆಯಬಹುದು.
ಜೈಲಿನಿಂದ ಹೊರಬರುವ ಸೂರ್ಯನಾಗಿ ನವನಟ ಸಂತೋಷ್ ನಾದಿವಾಡ ನಟಿಸಿದ್ದಾರೆ. ಸೂರ್ಯನ ಹಿನ್ನೆಲೆ ಗಮನಿಸಿ ಆತನನ್ನು ಸಂದೇಹಿಸುವ ಪೊಲೀಸ್ ಅಧಿಕಾರಿಯಾಗಿ ತಿಲಕ್ ನಟಿಸಿದ್ದಾರೆ. ಕಡಕ್ ಪೊಲೀಸ್ ಅಧಿಕಾರಿ ರಾಜೀವ್ ಮುತ್ತಣ್ಣನಿಗೆ ಜೀವ ತುಂಬಿದ್ದಾರೆ. ಮತ್ತೊಂದೆಡೆ ಪತ್ನಿಯೊಂದಿಗಿನ ಪ್ರೇಮ ಸನ್ನಿವೇಶಗಳಲ್ಲೂ ಭಾವನಾತ್ಮಕವಾಗಿ ನಟಿಸಿ ಮನಸೆಳೆದಿದ್ದಾರೆ ತಿಲಕ್.
ತಿಲಕ್ ಪತ್ನಿಯಾಗಿ ನಟಿಸಿರುವ ಪ್ರಿಯಾಗೆ ಎರಡೆರಡು ಪಾತ್ರಗಳನ್ನು ನಿಭಾಯಿಸುವ ಅವಕಾಶ ದೊರಕಿದೆ. ಎರಡೂ ಪಾತ್ರಗಳ ಮೂಲಕ ಪ್ರಿಯಾ ಹೆಗ್ಡೆ ತಾವು ಎಂಥ ಅದ್ಭುತ ನಟಿ ಎನ್ನುವುದನ್ನು ಸಾಬೀತು ಮಾಡಿದ್ದಾರೆ.
ಉಸಿರು ಚಿತ್ರದಲ್ಲಿ ಸಾಕಷ್ಟು ಪಾತ್ರಗಳಿವೆ. ಅದರಲ್ಲೂ ಸೈಮನ್ , ರಾಕೆಟ್ ಮೊದಲಾದ ಹೆಸರಲ್ಲಿ ಕಾಣಿಸುವ ಖಳ ಪಾತ್ರಗಳು ಬೆಚ್ಚಿ ಬೀಳಿಸುವಂತಿವೆ. ಪಿ ಸಿಯಾಗಿ ರಘು ರಾಮನಕೊಪ್ಪ ನಟಿಸಿದ್ದಾರೆ. ಪಾತ್ರ ಮತ್ತು ಸನ್ನಿವೇಶಕ್ಕೆ ತಕ್ಕಂತೆ ನೀಡಿರುವ ಹಿನ್ನೆಲೆ ಸಂಗೀತ ಅದ್ಭುತ. ನನ್ನುಸಿರೇ ಎನ್ನುವ ಪ್ರೇಮಗೀತೆಯ ರಾಗ ಸಂಯೋಜನೆ, ದೃಶ್ಯ ಸಂಯೋಜನೆ ಎರಡೂ ಮನಮುಟ್ಟುವಂತಿದೆ. ಅದರಲ್ಲೂ ಆ್ಯಕ್ಷನ್ ದೃಶ್ಯಗಳು ಸೇರಿದಂತೆ ಒಟ್ಟು ಸಿನಿಮಾದ ಛಾಯಾಗ್ರಹಣ ಮೋಡಿ ಮಾಡುತ್ತದೆ.
ಸೆಂಟಿಮೆಂಟ್, ಸಸ್ಪೆನ್ಸ್, ಫೈಟ್ ತುಂಬಿದ ಆಕರ್ಷಕ ಸಿನಿಮಾ ಉಸಿರು ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ.