ನವ ವಿವಾಹಿತರ ನೋವು ನಲಿವಿನ ರಹಸ್ಯ!
ಚಿತ್ರ: ಜಸ್ಟ್ ಮ್ಯಾರೀಡ್
ನಿರ್ದೇಶನ: ಸಿ ಆರ್ ಬಾಬಿ
ನಿರ್ಮಾ: ಅಜನೀಶ್ ಲೋಕನಾಥ್ ಮತ್ತು ಸಿ ಆರ್ ಬಾಬಿ
ತಾರಾಗಣ: ಶೈನ್ ಶೆಟ್ಟಿ, ಅಂಕಿತಾ ಅಮರ್, ಶ್ರುತಿ ಕೃಷ್ಣ ಮೊದಲಾದವರು.
ನಿವೃತ್ತ ನ್ಯಾಯಾಧೀಶನ ಶ್ರೀಮಂತ ಕುಟುಂಬ. ಈ ’ವಂಶವೃಕ್ಷ’ ಕುಟುಂಬದ ಏಕೈಕ ವಾರಸುದಾರ ಸೂರ್ಯ. ಈತ ವೃತ್ತಿಯಲ್ಲಿ ಜಾಹೀರಾತು ಸಿನಿಮಾ ನಿರ್ದೇಶಕ. ಆದರೆ ವಿಪರೀತ ಗೆಳತಿಯರ ಸಹವಾಸ. ಜತೆಯಲ್ಲೇ ಭ್ರಮೆಯಲ್ಲಿ ಮುಳುಗುವ ಕಾಯಿಲೆ. ಇಂಥ ಸೂರ್ಯನ ವಿವಾಹ ಸಹನಾ ಎಂಬಾಕೆಯೊಡನೆ ನೆರವೇರುತ್ತದೆ. ಆದರೆ ವಿವಾಹಕ್ಕೂ ಮೊದಲೇ ಸಹನಾ ಹುಡುಗನೊಡನೆ ಎರಡು ಒಪ್ಪಂದಗಳನ್ನು ಮಾಡಿಕೊಳ್ಳುತ್ತಾಳೆ. ಯಾರೂ ಒಪ್ಪಲಾಗದಂಥ ಆ ಒಪ್ಪಂದವನ್ನು ನಾಯಕ ಒಪ್ಪುವುದೇಕೆ? ಇದರ ಪರಿಣಾಮ ಈ ತುಂಬು ಕುಟುಂಬದ ಮೇಲೆ ಹೇಗೆಲ್ಲ ಆಗುತ್ತದೆ ಎನ್ನುವುದೇ ಚಿತ್ರದ ಕತೆ.
ಇಡೀ ಚಿತ್ರದ ಪ್ರಮುಖ ತಿರುವ ನಾಯಕ ಮತ್ತು ನಾಯಕಿಯ ಮದುವೆಯಿಂದಲೇ ಶುರುವಾಗುತ್ತದೆ. ಹೊಸ ಹೊಸ ಪಾತ್ರಗಳ ಪ್ರವೇಶದೊಂದಿಗೆ ಕಥೆ ಹೊಸ ಹೊಸ ತಿರುವುಗಳನ್ನು ಪಡೆಯುತ್ತಲೇ ಹೋಗುತ್ತದೆ. ನಾಯಕನಾಗಿ ಶೈನ್ ಶೆಟ್ಟಿ ಅದ್ಭುತವಾಗಿ ನಟಿಸಿದ್ದಾರೆ. ಚಾಕಲೇಟ್ ಲವ್ ಜತೆ ಆ್ಯಕ್ಷನ್, ಸೆಂಟಿಮೆಂಟ್ ಭಾವಗಳನ್ನು ತುಂಬಬಲ್ಲ ಸಮರ್ಥ ನಟ ತಾವೆಂದು ಮತ್ತೊಮ ಸಾಬೀತು ಮಾಡಿದ್ದಾರೆ.
ವಂಶವೃಕ್ಷದವಂಶವೃಕ್ಷದ ತರಹ ತುಂಬಿದಮನೆಗೆ ಎಂಟ್ರಿಕೊಡುವ ನವಜಾತ ಶಿಶುವಿನೊಂದಿಗೆ ಅನೂಪ್ ಭಂಡಾರಿ, ಶ್ರುತಿ ಹರಿಹರನ್ ಪಾತ್ರಗಳ ಗಟ್ಟಿತನ ಅನಾವರಣಗೊಳ್ಳುತ್ತದೆ.
ತಮಿಳು ನಟ ಶ್ರೀಮನ್ ತಮ್ಮ ಹಾವಭಾವ ಮತ್ತು ಮಾತಿನಲ್ಲೇ ನಗಿಸಿದ್ದಾರೆ. ರವಿಶಂಕರ್ ಗೌಡ ಸೇರಿದಂತೆ ಚಿತ್ರದ ತುಂಬ ಉತ್ಸಾಹಿ ಕಲಾವಿಸರ ದಂಡು ಲವಲವಿಕೆ ಮೂಡಿಸುತ್ತದೆ.
ತುಂಬಿದಮನೆಯ ಯಜಮಾನನಾಗಿ, ಮಾಜಿ ನ್ಯಾಯಾಧೀಶರ ಪಾತ್ರದಲ್ಲಿ ದೇವರಾಜ್ ಮೆರುಗು ನೀಡಿದ್ದಾರೆ. ಈ ಪಾತ್ರದ ಹಿನ್ನೆಲೆಗೆ ಸಂಬಂಧಿಸಿದಂತೆ ಎಂಟ್ರಿ ಕೊಡುವ ಶ್ರುತಿಯ ಪಾತ್ರ ನಿಗೂಢತೆಗೆ ಬೆಳಕು ಚೆಲ್ಲುತ್ತಾ ಹೋಗುತ್ತದೆ.
ಚಿತ್ರದಲ್ಲಿ ಕಲಾವಿದರ ದಂಡೇ ಇದೆ. ಶೈನ್ ಶೆಟ್ಟಿಗೆ ಜೋಡಿಯಾಗಿರುವ ಅಂಕಿತಾ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ನಾಯಕಿಯ ತಂದೆಯಾಗಿ ಜಿಯೋಲಾಜಿಸ್ಟ್ ಪಾತ್ರದಲ್ಲಿ ರವಿಭಟ್ ನಟಿಸಿದ್ದಾರೆ. ಅನೂಪ್ ಭಂಡಾರಿ ಕೂಡ ಶ್ರುತಿ ಹರಿಹರನ್ ಜತೆ ನಟಿಸಿ ಸೈ ಎನಿಸಿದ್ದಾರೆ. ರಾಜಕಾರಣಿಯಾಗಿ ನಟಿಸಿದ ಅಚ್ಯುತ್ ಕುಮಾರ್, ಫ್ಲ್ಯಾಶ್ ಬ್ಯಾಕ್ ದೃಶ್ಯಗಳಲ್ಲಿ ಕಾಣಿಸುವ ಮಾಳವಿಕಾ ಅವಿನಾಶ್, ಮೊದಲ ಬಾರಿ ಸಿನಿಮಾಕ್ಕಾಗಿ ಬಣ್ಣ ಹಚ್ಚಿರುವ ಗಾಯಕಿ ವಾಣಿ ಹರಿಕೃಷ್ಣ..ಹೀಗೆ ವಿಭಿನ್ನ ಕಲಾವಿದರ ಪಟ್ಟಿಯೇ ಇಲ್ಲಿದೆ.
ಜನಪ್ರಿಯ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಚಿತ್ರಕ್ಕೆ ಸಂಗೀತ ನೀಡುವುದರ ಜತೆಗೆ ನಿರ್ಮಾಣವನ್ನೂ ಮಾಡಿದ್ದಾರೆ. ತುಂಬು ಕುಟುಂಬದ ಈ ಚಿತ್ರವನ್ನು ಕುಟುಂಬ ಸಮೇತವಾಗಿಯೇ ನೋಡಬಹುದು.