ಅಕ್ಕ ಪಕ್ಕದವರಿಗಾಗಿ ರಕ್ತ ಹರಿಸುವ ಎಕ್ಕ!
ಚಿತ್ರ: ಎಕ್ಕ
ನಿರ್ದೇಶಕ: ರೋಹಿತ್ ಪದಕಿ
ನಿರ್ಮಾಪಕ: ಪಿಆರ್ ಕೆ, ಕೆರ್ ಜಿ ಮತ್ತು ಜಯಣ್ಣ ಕಂಬೈನ್ಸ್
ತಾರಾಗಣ: ಯುವರಾಜ್ ಕುಮಾರ್, ಸಂಜನಾ ಆನಂದ್ ಮೊದಲಾದವರು
ಪುನೀತ್ ರಾಜ್ ಕುಮಾರ್ ಅವರನ್ನು ಮತ್ತೆ ಪರದೆಯ ಮೇಲೆ ಜೀವಂತವಾಗಿಸುತ್ತಾರೆ ಎನ್ನುವುದು ಯುವರಾಜ್ ಕುಮಾರ್ ಬಗ್ಗೆ ಅಭಿಮಾನಿಗಳಿಗೆ ಇರುವ ನಿರೀಕ್ಷೆ. ಅದಕ್ಕೆ ತಕ್ಕಂತೆ ಅಪ್ಪು ಅಭಿನಯದ ಜಾಕಿ ಮಾದರಿ ಚಿತ್ರವೊಂದನ್ನು ಮಾಡಿದ್ದಾರೆ ಯುವ.
ಎಕ್ಕ ಫುಲ್ ಲೆಕ್ಕಾಚಾರ ಹಾಕಿಯೇ ಮಾಡಿರುವಂಥ ಚಿತ್ರ. ಹಳ್ಳಿಯಿಂದ ನಗರ ಸೇರುವ ಮುಗ್ದ ಯುವಕ ಹೇಗೆ ರೌಡಿಯಾಗುತ್ತಾನೆ ಎನ್ನುವುದನ್ನು ನಾವು ಸಾಕಷ್ಟು ಚಿತ್ರಗಳಲ್ಲಿ ನೋಡಿದ್ದೇವೆ. ಇಲ್ಲಿಯೂ ಅಂಥದೇ ಒಂದು ಕಥೆ ಇದೆ. ಸ್ನೇಹಿತ ನಡೆಸಿದ ವಂಚನೆಯಿಂದ ಮನೆಯೇ ಸಾಲಗಾರರ ಬಳಿ ಸೇರುವ ಪರಿಸ್ಥಿತಿ ಸೃಷ್ಟಿಯಾಗುತ್ತದೆ. ಬೆಂಗಳೂರಿಗೆ ಬಂದು ಕ್ಯಾಬ್ ಡ್ರೈವರ್ ಆಗುವ ನಾಯಕನ ಕಾರಲ್ಲೇ ಹತ್ಯೆಯೊಂದು ನಡೆಯುತ್ತದೆ. ಅದರ ಬೆನ್ನು ಬಿದ್ದಾಗ ಬಾಳಲ್ಲಿ ನಡೆಯುವ ಅನಿರೀಕ್ಷಿತ ಘೋರ ಘಟನೆಗಳ ಸರಮಾಲೆಯೇ ಎಕ್ಕ.
ಹಳ್ಳಿ ಬಿಟ್ಟು ಬೆಂಗಳೂರು ಸೇರುವ ನಾಯಕನ ಪಾತ್ರ ಮುತ್ತುವಾಗಿ ಯುವ ನಟಿಸಿದ್ದಾರೆ. ಹಳ್ಳಿಯಲ್ಲಿ ಈತನ ಮುದ್ದಿನ ತಾಯಿ ರತ್ನಳಾಗಿ ಶ್ರುತಿ ನಟಿಸಿದ್ದಾರೆ. ಇಬ್ಬರ ಕಾಂಬಿನೇಶನ್ ದೃಶ್ಯಗಳು ಅಮೋಘ. ಮುತ್ತು ನಗರಕ್ಕೆ ಎಂಟ್ರಿಯಾಗುತ್ತಲೇ ನಾಯಕಿಯ ದರ್ಶನವಾಗುತ್ತದೆ. ರೌಡಿಯ ಒಂಟೆಯ ತಂಗಿ ನಂದಿನಿಯಾಗಿ ಸಂಜನಾ ಆನಂದ್ ನಟನೆ ಆಕರ್ಷಕ. ಬೆಂಗಳೂರಿನ ಹಿರಿಯ ರೌಡಿ ಮಸ್ತಾನ್ ಪಾತ್ರದ ಎಂಟ್ರಿಯಾಗುತ್ತಿದ್ದ ಹಾಗೆ ಚಿತ್ರ ಹೊಸ ಕಳೆ ಪಡೆದುಕೊಳ್ಳುತ್ತದೆ. ಅತುಲ್ ಕುಲಕರ್ಣಿಯ ನಟನೆ ಮತ್ತು ಪಾತ್ರಕ್ಕೆ ನೀಡಲಾದ ಕಂಠ ಅಂಥದೊಂದು ಗಾಂಭೀರ್ಯತೆ ಸೃಷ್ಟಿಸುತ್ತದೆ. ಮಸ್ತಾನ್ ಬಲಗೈ ಬಂಟನಾಗಿ ಪೂರ್ಣಚಂದ್ರ ನಟನೆ ಮತ್ತೊಂದು ಲೆವೆಲ್. ಉಳಿದಂತೆ ಸಾಕಷ್ಟು ಹೊಸ ಕಲಾವಿದರನ್ನು ಕೂಡ ಆಕರ್ಷಕವಾಗಿ ಬಳಸಿಕೊಳ್ಳಲಾಗಿದೆ.
ಬ್ಯಾಂಗಲ್ ಬಂಗಾರಿ ಹಾಡು ಚಿತ್ರದ ಹೈಲೈಟ್. ಪಮ್ಮಿ ಎನ್ನುವ ಮಗುವಿನ ಪಾತ್ರವನ್ನು ತೋರಿಸಿರುವ ರೀತಿ ಪ್ರೇಕ್ಷಕರ ಮನದಲ್ಲಿ ಸ್ಥಾನ ಪಡೆಯುತ್ತದೆ.
ರಕ್ತಪಾತದ ಮಧ್ಯೆಯೂ ಮಾನವೀಯ ಮೌಲ್ಯಗಳನ್ನು ಹೇಳಲು ಪ್ರಯತ್ನಿಸುವ ನಿರ್ದೇಶಕರ ಪ್ರಯತ್ನ ಪ್ರಶಂಸಾರ್ಹ.