ಚಿತ್ರ: ಕ್ಯಾಪಿಟಲಸ ಸಿಟಿ****
ನಿರ್ದೇಶನ: ಆರ್.ಅನಂತರಾಜು
ನಿರ್ಮಾಣ: ಇನ್ಪಿನಿಟಿ ಕ್ರಿಯೇಶನ್ಸ್
ತಾರಾಗಣ: ರಾಜೀವ್ರೆಡ್ಡಿ, ಪ್ರೇರಣಾ, ಸುಮನ್, ರವಿಶಂಕರ್, ಶರತ್ಲೋಹಿತಾಶ್ವ,
ಸಂಗೀತ: ವೀರಸಮರ್ಥ್
ಭೂಗತ ಲೋಕದ ಸಿಟಿ ಕಥನ
ಸುಮಾರು ದಶಕಗಳಿಂದ ಭೂಗತ ಲೋಕದ ಚಿತ್ರಗಳು ತೆರೆ ಕಂಡಿದೆ. ಆ ಸಾಲಿಗೆ ‘ಕ್ಯಾಪಿಟಲ್ ಸಿಟಿ’ ಸೇರ್ಪಡೆಯಾಗುತ್ತದೆ. ಮುಗ್ದ ಪೃಥ್ವಿ (ರಾಜೀವ್‌ರೆಡ್ಡಿ) ಅನಾಥಾಶ್ರಮದಲ್ಲಿ ಬೆಳೆದವನು. ಆತನ ಎದುರೇ ಅಪ್ಪನನ್ನು ಧನ್‌ಪಾಲ್ (ರವಿಶಂಕರ್) ಕೊಂದು ಅಕ್ಕನನ್ನು ಅಪಹರಿಸಿಕೊಂಡು ಹೋಗುತ್ತಾನೆ. ಇದಕ್ಕೆ ಕೆರಳಿ, ದೊಡ್ಡವನಾದ ಮೇಲೆ ಡಾನ್ ಆಗಿ ರೂಪುಗೊಳ್ಳುತ್ತಾನೆ. ತೊಂದರೆಗೀಡಾದ ತನ್ನ ಕಷ್ಟವನ್ನು ಹೇಗೆ ಬಗೆಹರಿಸಿಕೊಳ್ಳುತ್ತಾನೆ. ಧನ್‌ಪಾಲ್ ವಿರುದ್ದ ಯಾವ ರೀತಿ ಸೆಟೆದು ನಿಂತು ಸೇಡು ತೀರಿಸಿಕೊಳ್ಳುತ್ತಾನೆ ಎಂಬುದನ್ನು ಆಕ್ಷ್ಯನ್, ರೌಡಿಸಂ, ಮಚ್ಚು ಲಾಂಗ್‌ಗಳೊಂದಿಗೆ ತೋರಿಸಲಾಗಿದೆ. ನಿರ್ದೇಶಕ ಅನಂತರಾಜು ಸಾಹಸ ಪ್ರಿಯರಿಗಂತಲೇ ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳನ್ನು ಸೇರಿಸಿ ರುಚಿಯಾದ ಬಾಡೂಟವನ್ನು ಉಣಬಡಿಸಿದ್ದಾರೆ. ಸಮಾಜದ ಪ್ರಸ್ತುತ ಘಟನೆಗಳನ್ನು ಚಿತ್ರರೂಪಕ್ಕೆ ತಂದಿದ್ದಾರೆ.
ನಾಯಕ ರಾಜೀವ್‌ರೆಡ್ಡಿ ಆಕ್ಷನ್ ದೃಶ್ಯಗಳಲ್ಲಿ ಗಮನ ಸೆಳೆಯುತ್ತಾರೆ. ನಾಯಕಿ ಪ್ರೇರಣಾ ಪರದೆ ಮೇಲೆ ಚೆಂದ ಕಾಣಿಸುತ್ತಾರೆ. ರವಿಶಂಕರ್ ಖಡಕ್ ಡೈಲಾಗ್ ಹೇಳಿ ಇಡೀ ಸಿನಿಮಾವನ್ನು ಆವರಿಸಿಕೊಂಡಿದ್ದಾರೆ. ಉಳಿದಂತೆ ಸುಮನ್, ಶರತ್‌ಲೋಹಿತಾಶ್ವ ತಮಗೆ ನೀಡಿದ ಕೆಲಸಕ್ಕೆ ನ್ಯಾಯ ಒದಗಿಸಿದ್ದಾರೆ. ವೀರಸಮರ್ಥ್ ಸಂಗೀತ ಸನ್ನಿವೇಶಗಳಿಗೆ ಪೂರಕವಾಗಿದೆ. ಒಟ್ಟಾರೆ ಚಿತ್ರವು ಪೈಸಾ ವಸೂಲ್ ಎನ್ನಬಹುದು.
****