ಪ್ರೀತಿ, ಜಗಳ ಮತ್ತು ಒಂದು ಕೊಲೆ..!
ಚಿತ್ರ: ಜಂಗಲ್ ಮಂಗಲ್
ನಿರ್ದೇಶನ: ರಕ್ಷಿತ್ ಕುಮಾರ್ ರೈ
ನಿರ್ಮಾಣ: ಸಹ್ಯಾದ್ರಿ ಸ್ಟುಡಿಯೋಸ್
ತಾರಾಗಣ: ಯಶ್ ಶೆಟ್ಟಿ, ಹರ್ಷಿತಾ ರಾಮಚಂದ್ರ, ಉಗ್ರಂ ಮಂಜು
ಟ್ರೈಲರ್ ನೋಡಿ ಸಿನಿಮಾ ನೋಡಲು ಬಂದವರನ್ನು ಹೊಸ ಲೋಕಕ್ಕೆ ಕರೆದೊಯ್ಯುವ ಸಿನಿಮಾ ಜಂಗಲ್ ಮಂಗಲ್.
ಇದು ಕೋವಿಡ್ ಕಾಲದ ಕಥೆ. ಚಿತ್ರದ ದೃಶ್ಯ, ಸನ್ನಿವೇಶಗಳು ಪ್ರೇಕ್ಷಕರನ್ನು ಅದೇ ಕಾಲಘಟ್ಟಕ್ಕೆ ಕೊಂಡೊಯ್ಯುವಲ್ಲಿ ಯಶಸ್ಸಾಗುತ್ತದೆ.
ಪ್ರವೀಣ ಮತ್ತು ದಿವ್ಯಾ ಪ್ರೇಮಿಗಳು. ಪ್ರವೀಣನ ಆಸೆಗೆ ಮಣಿದ ದಿವ್ಯಾ ಆತನಿಗೆ ಕಾಡಿನಲ್ಲಿ ಸಿಗಲು ಒಪ್ಪುತ್ತಾಳೆ. ಆದರೆ ಇವರಿಬ್ಬರನ್ನು ದೂರದಿಂದ ಕಂಡು ಊರಿನ ಒಂದಷ್ಟು ಕಾಡಿನ ಹೊರಭಾಗದಲ್ಲಿ ಕಾದು ನಿಲ್ಲುತ್ತಾರೆ. ಆದರೆ ಅವರಿಂದ ತಪ್ಪಿಸಿಕೊಳ್ಳಲು ಈ ಜೋಡಿ ಮಾಡುವ ಉಪಾಯವೇನು? ಆ ಉಪಾಯ ಇವರಿಗೆ ತರುವ ಅಪಾಯವೇನು? ಕಾಡಲ್ಲಿ ಬೀಳುವ ಶವ ಯಾರದು? ಮೊದಲಾದ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ನೀವು ಜಂಗಲ್ ಮಂಗಲ್ ಚಿತ್ರವನ್ನು ನೋಡಲೇಬೇಕು.
ವಿಲನ್ ಆಗಿ ಕಾಣಿಸುತ್ತಿದ್ದ ಯಶ್ ಶೆಟ್ಟಿ ಇಲ್ಲಿ ಹೀರೋ ಆಗಿದ್ದಾರೆ. ಯಶ್ ಶೆಟ್ಟಿಗೆ ಜೋಡಿಯಾಗಿ ಹರ್ಷಿತಾ ರಾಮಚಂದ್ರ ಅಭಿನಯಿಸಿದ್ದಾರೆ. ಬಾಬು ಎನ್ನುವ ಖಳನಾಯಕನ ಪಾತ್ರವನ್ನು ಉಗ್ರಂ ಮಂಜು ಉಗ್ರವಾಗಿಯೇ ನಿಭಾಯಿಸಿದ್ದಾರೆ. ಬಲ ರಾಜವಾಡಿ ಜಗ್ಗು ಮಾವನ ಪಾತ್ರಕ್ಕೆ ಜೀವ ನೀಡಿದ್ದಾರೆ. ಮಂಗಳೂರು ರಂಗಭೂಮಿಯ ಸಾಕಷ್ಟು ಹೊಸಮುಖಗಳು ಚಿತ್ರದಲ್ಲಿವೆ. ಪ್ರತಿಯೊಬ್ಬರು ಹೊಸ ಭರವಸೆಯನ್ನು ಸೃಷ್ಟಿಸುವಂತೆ ನಟಿಸಿದ್ದಾರೆ.
ನಿರ್ದೇಶಕ ರಕ್ಷಿತ್ ಕುಮಾರ್ ತಮ್ಮ ಮೊದಲ ಪ್ರಯತ್ನದಲ್ಲೇ ಪ್ರೇಕ್ಷಕರನ್ನು ಒಂದೂವರೆ ಗಂಟೆ ಕೂರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಾಮಾನ್ಯವಾಗಿ ಮೊದಲ ಅವಕಾಶ ಸಿಕ್ಕೊಡನೆ ಮೂರು ಗಂಟೆ ಸಿನಿಮಾ ಮಾಡಿ ಪ್ರೇಕ್ಷಕರಿಗೆ ಬೋರು ಹೊಡೆಸುವವರೇ ಅಧಿಕ. ಆದರೆ ಅಂಥ ಯಾವುದೇ ಮೋಹಗಳಿಲ್ಲದೆ ಹಾಡಿರದ, ಅನಗತ್ಯ ಹೊಡೆದಾಟಗಳಿರದ
ಕಥೆಯಲ್ಲೇ ಹಿಡಿದು ಕೂರಿಸುವಂಥ ಚಿತ್ರ ನೀಡಿದ್ದಾರೆ. ಪರದೆಯಲ್ಲಿ ಕೆಳಮಧ್ಯಮ ವರ್ಗದ ಮನೆಗಳ ವಾತಾವರಣವನ್ನು ನೈಜವಾಗಿ ಕಟ್ಟಿಕೊಟ್ಟಿದ್ದಾರೆ.
ಒಂದೇ ಘಟನೆ ವಿವಿಧ ಪಾತ್ರಗಳ ಕಣ್ಣಿನಲ್ಲಿ ಹೇಗೆ ಬದಲಾಗುತ್ತಾ ಹೋಗುತ್ತದೆ ಎನ್ನುವುದನ್ನು ಕುತೂಹಲಕಾರಿಯಾಗಿ ತೋರಿಸಿದ್ದಾರೆ.