ದುಶ್ಚಟಗಳಿಂದ ತಪ್ಪಿಸಿಕೊಳ್ಳುವ ಹೆಣ್ಣಿನ ಕಥೆಯೇ ತಪಸ್ಸಿ!
ಚಿತ್ರ: ತಪಸ್ಸಿ
ನಿರ್ದೇಶನ: ಮ್ಯಾಥ್ಯು
ನಿರ್ಮಾಣ: ಬೆಂಗಳೂರು ಸ್ಟುಡಿಯೋಸ್
ತಾರಾಗಣ: ವಿ ರವಿಚಂದ್ರನ್,
ಚಿತ್ರದ ಹೆಸರು ತಪಸ್ಸಿ ಎಂದು ಯಾಕೆ ಇಡಲಾಗಿದೆ ಅನ್ನೋ ಪ್ರಶ್ನೆಗೆ ಉತ್ತರವಾಗಿ ತಪಸ್ಸಿ ಅಗರ್ವಾಲ್ ಎನ್ನುವ ಹೆಣ್ಣು ಮಗಳ ಪಾತ್ರವಿದೆ. ಈ ನಾಯಕಿ ಪ್ರಧಾನ ಚಿತ್ರದಲ್ಲಿ ಒಂದು ಅಪರೂಪದ ಪಾತ್ರ ಮಾಡಿದ್ದಾರೆ ಕ್ರೇಜಿಸ್ಟಾರ್ ರವಿಚಂದ್ರನ್.
ಪ್ರೊಫೆಸರ್ ವೈದ್ಯನಾಥ್ ಮನೆಯಲ್ಲಿ ತಪಸ್ಸಿ ನಡೆಸುವ ವಾಗ್ವಾದದೊಂದಿಗೆ ಚಿತ್ರ ಶುರುವಾಗುತ್ತದೆ. ಒಂದು ಹಂತದಲ್ಲಿ ಪ್ರೊಫೆಸರ್ ಮೇಲೆ ಈಕೆ ನಡೆಸುವ ತಳ್ಳಾಟದಿಂದ ಅವರು ಕೆಳಗೆ ಬಿದ್ದು ತಲೆಗೆ ಏಟು ಮಾಡಿಕೊಳ್ಳುತ್ತಾರೆ. ಅಲ್ಲಿಂದ ತಪಸ್ಸಿಯ ಹಿನ್ನೆಲೆ ಏನು ಎನ್ನುವುದನ್ನು ಚಿತ್ರದಲ್ಲಿ ಅನಾವರಣಗೊಳ್ಳುತ್ತಾ ಹೋಗುತ್ತದೆ.
ತಪಸ್ಸಿ ಮಾಡೆಲಿಂಗ್ ಕ್ಷೇತ್ರಕ್ಕೆ ಬಂದಂಥ ಹೆಣ್ಣುಮಗಳು. ಬಾಲ್ಯದಲ್ಲೇ ತಂದೆ ತಾಯಿಯನ್ನು ಕಳೆದುಕೊಂಡ ಈ ಸುಂದರಿ ಮಾಡೆಲಿಂಗ್ ನಲ್ಲಿ ಹೆಸರು ಮಾಡುತ್ತಾಳೆ. ಜತೆಯಲ್ಲೇ ದುಶ್ಚಟಗಳಿಗೂ ದಾಸಿಯಾಗುತ್ತಾಳೆ. ದಿನೇ ದಿನೇ ಪಾಪದ ಕೂಪ ಸೇರುವ ಈಕೆಯನ್ನು ಇಬ್ಬರು ಸ್ನೇಹಿತರು ಹೇಗೆ ಅದರಿಂದ ಹೊರತರಲು ಪ್ರಯತ್ನಿಸುತ್ತಾರೆ ಮತ್ತು ಈ ಪ್ರಯತ್ನ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತೆ ಎನ್ನುವುದೇ ಚಿತ್ರದ ಕತೆ.
ತಪಸ್ಸಿ ಅಗರ್ವಾಲ್ ಆಗಿ ನಟಿ ಅಮಯ್ರಾ ಗೋಸ್ವಾಮಿ ಆಕರ್ಷಕ ನಟನೆ ನೀಡಿದ್ದಾರೆ. ನಿರ್ದೇಶಕ ಮ್ಯಾಥ್ಯು ಈಕೆಯಿಂದ ನೈಜ ನಟನೆ ಹೊರ ತರುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರೊಫೆಸರ್ ವೈದ್ಯನಾಥ್ ಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಹಿಂದೆಂದಿಗಿಂತ ವಿಭಿನ್ನವಾಗಿ ಕಾಣಿಸುತ್ತಾರೆ. ವೈದ್ಯೆಯಾಗಿ ವಿನಯಾ ಪ್ರಸಾದ್ ಅವರನ್ನು ಬಿಟ್ಟರೆ ಉಳಿದ ಪಾತ್ರಗಳಲ್ಲಿ ಹೊಸಬರೇ ಕಾಣಿಸಿದ್ದಾರೆ.
ಚಿತ್ರದಲ್ಲಿ ಫ್ಯಾಷನ್ ಶೋ, ಅವುಗಳ ಹಿಂದೆ ಕೆಲಸ ಮಾಡುವ ಕಾಮದ ದಂಧೆ ಇವೆಲ್ಲವನ್ನೂ ಸಹಜ ರೀತಿಯಲ್ಲಿ ಸೆರೆ ಹಿಡಿಯಲಾಗಿದೆ. ಹಾಡುಗಳೇ ಇರದ ಈ ಚಿತ್ರದಲ್ಲಿ ಸಂದೇಶವೇ ಪ್ರಧಾನ ಅಂಶವಾಗಿದೆ. ಮಾಡೆಲಿಂಗ್ ಕ್ಷೇತ್ರದ ಕರಾಳತೆಗೆ ಕನ್ನಡಿಯಾಗಬಲ್ಲ ತಪಸ್ಸಿ ಸಿನಿಮಾ ಇದೇ ಕಾರಣದಿಂದ ಪ್ರೇಕ್ಷಕರನ್ನು ಸೆಳೆಯುವುದರಲ್ಲಿ ಸಂದೇಹವಿಲ್ಲ.