ತಲ್ವಾರ್ ನಲಿವು ನೋವು****
ಅರಿವಿಲ್ಲದೆ ರೌಡಿಸಂ ಇಳಿದರೆ ಏನೇನು ಆಗುತ್ತದೆ ಎಂಬುದನ್ನು ‘ತಲ್ವಾರ್’ ಚಿತ್ರದಲ್ಲಿ ಹೇಳಲಾಗಿದೆ. ಸತ್ಯ (ಧರ್ಮಕೀರ್ತಿರಾಜ್)ನಿಗೆ ತಲ್ವಾರ್ ಎಂಬ ಅಡ್ಡ ಹೆಸರು ಇರುತ್ತದೆ. ಚಿಕ್ಕವನಾಗಿದ್ದಾಗಲೇ ಅಮ್ಮನನ್ನು ಕಳೆದುಕೊಂಡು ರೌಡಿ ಲೋಕದ ಭಾಯ್ ಜತೆ ಸೇರಿಕೊಳ್ಳುತ್ತಾನೆ. ಒಂದು ಕಾರಣಕ್ಕೆ ತಲ್ವಾರ್ ಹಿಡಿದು, ಮುಂದೆ ಅದೇ ಕಾಯಕವಾಗುತ್ತದೆ. ಇದರ ಮಧ್ಯೆ ಪ್ರೀತಿಯಲ್ಲಿ ಬೀಳುತ್ತಾನೆ. ಇಲ್ಲಿಂದ ಅನೇಕ ತೊಂದರೆಗಳು ಎದುರಾಗುತ್ತವೆ. ನೀ ಬಿಟ್ಟರೂ ನಾ ಬಿಡೆ ಎನ್ನುವ ಹಳೇ ಗ್ಯಾಂಗ್‌ಸ್ಟರ್‌ಗಳು. ಅಷ್ಟಕ್ಕೂ ಈತನ ಹಿಂದೆ ಬೀಳಲು ಕಾರಣವೇನು? ಪ್ರಿಯತಮೆ ಕೊನೆಗೂ ದಕ್ಕುತ್ತಾಳಾ? ಇವೆಲ್ಲಾವನ್ನು ಮಾಸ್ ಮನರಂಜನೆಯಲ್ಲಿ ತೋರಿಸಿರುವುದು ಪ್ಲಸ್ ಪಾಯಿಂಟ್ ಆಗಿದೆ. ಪ್ರಾರಂಭದಲ್ಲಿ ಆಮೆಯಂತೆ ಇದ್ದು, ವಿರಾಮದ ನಂತರ ಸನ್ನಿವೇಶಗಳು ವೇಗ ಪಡೆದುಕೊಂಡು ನೋಡುಗರಿಗೆ ಮಜಾ ಕೊಡುತ್ತದೆ.
ನಿರ್ದೇಶಕ ಮುಮ್ತಾಜ್ ಮುರಳಿ ಈಗಿನ ಯೂತ್ಸ್‌ಗಳು ಇಷ್ಟಪಡುವಂತ ದೃಶ್ಯಗಳನ್ನು ಪೋಣಿಸಿ ಸೈ ಅನಿಸಿಕೊಂಡಿದ್ದಾರೆ. ಚಾಕಲೋಟ್ ಬಾಯ್ ಅಂತ ಕರೆಸಿಕೊಂಡಿದ್ದ ಧರ್ಮಕೀರ್ತಿರಾಜ್ ಇದರಲ್ಲಿ ರಗಡ್ ಲುಕ್‌ದಲ್ಲಿ ಅಬ್ಬರಿಸಿದ್ದಾರೆ. ನಾಯಕಿ ಅದಿತಿಗೆ ಹೆಚ್ಚು ಸ್ಕೋಪ್ ಸಿಕ್ಕಿಲ್ಲ. ಶರತ್‌ಲೋಹಿತಾಶ್ವ ಅಭಿನಯ ನೋಡುವುದೇ ಚೆಂದ. ಪ್ರವೀಣ್.ಕೆ.ಬಿ ಸಂಗೀತ ಅಲ್ಲಲ್ಲಿ ಕೆಲಸ ಮಾಡಿದೆ. ಡಿಫರೆಂಡ್ ಡ್ಯಾನಿ-ವಿನೋಧ್-ಕುಂಗುಫು ಚಂದ್ರು ಸಾಹಸ ಖುಷಿ ನೀಡುತ್ತದೆ. ಸುರೇಶ್ ಬೈರಸಂದ್ರ ನಿರ್ಮಾಣ ಮಾಡಿದ್ದಾರೆ.
****