*ಡಿಸೆಂಬರ್ 11ಕ್ಕೆ ‘ಹುಬ್ಬಳ್ಳಿ ಹಂಟರ್ಸ್’ ರಿಲೀಸ್: ರಾಜ್ಯಾದ್ಯಂತ ಚಿತ್ರ ವಿತರಣೆಗೆ ಕೈಜೋಡಿಸಿದ ಖ್ಯಾತ ವಿತರಕ ಜಯಣ್ಣ!*
ಬೆಂಗಳೂರು: ಉತ್ತರ ಕರ್ನಾಟಕದ ವಿಶಿಷ್ಟ ಭಾಷಾ ಸೊಗಡು ಮತ್ತು ಹಾಸ್ಯದ ಹಿನ್ನೆಲೆಯನ್ನಿಟ್ಟುಕೊಂಡು ತಯಾರಾಗಿರುವ ಬಹುನಿರೀಕ್ಷಿತ ‘ಹುಬ್ಬಳ್ಳಿ ಹಂಟರ್ಸ್’ ಸಿನಿಮಾದ ಬಿಡುಗಡೆ ದಿನಾಂಕ ಅಧಿಕೃತವಾಗಿ ಘೋಷಣೆಯಾಗಿದೆ. ಬರುವ ಡಿಸೆಂಬರ್ 11ರಂದು ಈ ಚಿತ್ರ ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಗೆ ಬರಲಿದೆ. ಇತ್ತೀಚೆಗಷ್ಟೇ ‘ರಿಷಬ್ ಶೆಟ್ಟಿ ಮ್ಯೂಸಿಕ್’ ಆಡಿಯೋ ಸಂಸ್ಥೆಯ ಮೂಲಕ ಬಿಡುಗಡೆಯಾಗಿದ್ದ ಚಿತ್ರದ ಮೊದಲ ಹಾಡು ದೊಡ್ಡ ಮಟ್ಟದಲ್ಲಿ ಹಿಟ್ ಆಗಿ ಪ್ರೇಕ್ಷಕರ ಗಮನ ಸೆಳೆದಿದೆ. ಇದರ ಬೆನ್ನಲ್ಲೇ ಚಿತ್ರತಂಡದಿಂದ ಮತ್ತೊಂದು ಮಹತ್ವದ ಅಪ್‌ಡೇಟ್ ಹೊರಬಿದ್ದಿದ್ದು, ಸ್ಯಾಂಡಲ್‌ವುಡ್‌ನ ಪ್ರತಿಷ್ಠಿತ ವಿತರಕ ಜಯಣ್ಣ ಅವರು ಈ ಚಿತ್ರವನ್ನು ರಾಜ್ಯಾದ್ಯಂತ ವಿತರಣೆ ಮಾಡುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ಬ್ಲಾಕ್‌ಬಸ್ಟರ್ ‘ಪ್ರೇಮದ ಊರಲಿ’ ಸಿನಿಮಾವನ್ನು ವಿತರಣೆ ಮಾಡಿ ಭರ್ಜರಿ ಯಶಸ್ಸು ಕಂಡಿರುವ ಜಯಣ್ಣ ಅವರು, ಇದೀಗ ‘ಹುಬ್ಬಳ್ಳಿ ಹಂಟರ್ಸ್’ ತಂಡದೊಂದಿಗೆ ಕೈಜೋಡಿಸಿರುವುದು ಚಿತ್ರಕ್ಕೆ ದೊಡ್ಡ ಬಲ ತಂದಂತಾಗಿದೆ. ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರಾಗಿ ಹಾಗೂ ವಿತರಕರಾಗಿ ದಶಕಗಳಿಂದ ದೊಡ್ಡ ಹೆಸರು ಮಾಡಿರುವ ಜಯಣ್ಣ ಫಿಲ್ಮ್ಸ್ ಸಂಸ್ಥೆಯ ಮೂಲಕ ಈ ಸಿನಿಮಾ ಬಿಡುಗಡೆಯಾಗುತ್ತಿರುವುದರಿಂದ, ರಾಜ್ಯದ ಮೂಲೆಮೂಲೆಗೂ ಚಿತ್ರವನ್ನು ಅತ್ಯುತ್ತಮವಾಗಿ ತಲುಪಿಸುವಲ್ಲಿ ಯಾವುದೇ ಅನುಮಾನವಿಲ್ಲ ಎಂಬ ವಿಶ್ವಾಸ ಚಿತ್ರತಂಡದಲ್ಲಿದೆ.
ಗೋಲ್ಡನ್ ಹಾರ್ಸ್ ಸಿನಿಮಾ ಬ್ಯಾನರ್ ಅಡಿಯಲ್ಲಿ ಸಂತೋಷ್ ಕುಮಾರ್ ಕೆ.ಸಿ. ನಿರ್ಮಿಸಿರುವ ಈ ಚಿತ್ರಕ್ಕೆ ಸಮರ್ಥ್ ಬಿ. ಕಡಕೋಳ್ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್-ಕಟ್ ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿಭಿನ್ನ ಶೈಲಿಯ ಮೂಲಕ ಜನಪ್ರಿಯತೆ ಗಳಿಸಿರುವ ಪ್ರತಿಭಾವಂತ ಕಂಟೆಂಟ್ ಕ್ರಿಯೇಟರ್ಸ್ ತಂಡವೊಂದು ಈ ಸಿನಿಮಾದ ಮೂಲಕ ಬೆಳ್ಳಿತೆರೆಯಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿದೆ.
‘ಹುಬ್ಬಳ್ಳಿ ಹಂಟರ್ಸ್’ ಚಿತ್ರದಲ್ಲಿ ಖ್ಯಾತ ನಟ ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್, ಕೃಷ್ಣ ಹೆಬ್ಬಾಳೆ, ರಮೇಶ್ ಭಟ್ ಅವರಂತಹ ಅನುಭವಿ ಕಲಾವಿದರ ಜೊತೆಗೆ ನಮನ್ ಅರೋರ, ಚೇತನ್ ಮಾರಂಬೀಡ್, ಪವನ್ ಕೃಷ್ಣರಾವ್ ಕುಲಕರ್ಣಿ, ಸುಮಿತ್ ಸಂಕೋಜಿ, ಧನ್ಯಶ್ರೀ ಸುಜಿತ್, ದೀಪಕ್ ರಾವ್, ಶಿವು ಎನ್.ಜಿ., ವನು ಪಾಟೀಲ್, ಪವನ್ ಆನೆಗೇರಿ, ವಿನಯ್ ದೊಡ್ಡಮನಿ ಸೇರಿದಂತೆ ದೊಡ್ಡ ತಾರಾಗಣವೇ ಬಣ್ಣ ಹಚ್ಚಿದೆ.
ಧಾರವಾಡ ಮತ್ತು ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ ಈ ಚಿತ್ರದ ಬಹುತೇಕ ಚಿತ್ರೀಕರಣ ನಡೆಸಲಾಗಿದ್ದು, ಉತ್ತರ ಕರ್ನಾಟಕದ ನೈಜ ಸೊಗಡನ್ನು ತೆರೆಯ ಮೇಲೆ ತರಲಾಗಿದೆ. ಚಿತ್ರಕ್ಕೆ ಪ್ರಸನ್ನ ಕೇಶವ ಕೆ.ಎಸ್. ಅವರ ಇಂಪಾದ ಸಂಗೀತ ಸಂಯೋಜನೆಯಿದ್ದು, ಅಭಿಮನ್ಯು ಸದಾನಂದನ್ ಛಾಯಾಗ್ರಹಣ ನಿರ್ವಹಿಸಿದ್ದಾರೆ. ರಾಹುಲ್ ವಿ. ಪಾರ್ವತಿಕರ್, ಅಮಿತ್ ಕಾರ್ವರ್ ಹಾಗೂ ಚೇತನ್ ಮರಂಬೀದ್ ಚಿತ್ರಕ್ಕೆ ಸಂಭಾಷಣೆ ಹೆಣೆದಿದ್ದಾರೆ. ಬಿಡುಗಡೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಪ್ರಚಾರ ಕಾರ್ಯಕ್ಕೆ ವೇಗ ನೀಡಿರುವ ಚಿತ್ರತಂಡ, ಶೀಘ್ರದಲ್ಲೇ ಚಿತ್ರದ ಟೀಸರ್ ಹಾಗೂ ಉಳಿದ ಹಾಡುಗಳನ್ನು ಬಿಡುಗಡೆ ಮಾಡಲು ಸಕಲ ಸಿದ್ಧತೆ ನಡೆಸುತ್ತಿದೆ.