*ಆದಿತ್ಯ ಶಶಿಕುಮಾರ್ ಅಭಿನಯದ ‘ರಾಶಿ’ ಚಿತ್ರಕ್ಕೆ "ತಾರಾ" ಬಲ.*
*ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಶಿಕುಮಾರ್, ತಾರಾ ಅನುರಾಧಾ ಅವರಿಂದ ಚಿತ್ರದ ಟ್ರೇಲರ್ ಅನಾವರಣ; ಡಿ ಬೀಟ್ಸ್ನ ಶೈಲಜಾ ನಾಗ್ ಉಪಸ್ಥಿತಿ*
ಆದಿತ್ಯ ಶಶಿಕುಮಾರ್ ನಾಯಕನಾಗಿ ಅಭಿನಯಿಸಿರುವ ‘ರಾಶಿ’ ಚಿತ್ರದ ಟ್ರೇಲರ್ ಇತ್ತೀಚೆಗೆ ಅದ್ದೂರಿಯಾಗಿ ಬಿಡುಗಡೆಯಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಿರಿಯ ನಟ ಶಶಿಕುಮಾರ್ ಹಾಗೂ ಹಿರಿಯ ನಟಿ ತಾರಾ ಅನುರಾಧಾ ಅವರು ಚಿತ್ರದ ಟ್ರೇಲರ್ ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಡಿ ಬೀಟ್ಸ್ನ ಶೈಲಜಾ ನಾಗ್ ಉಪಸ್ಥಿತರಿದ್ದರು. ಟ್ರೇಲರ್ ಬಿಡುಗಡೆ ಮಾಡಿದ ಗಣ್ಯರು ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು.
ನಿರ್ಮಾಪಕ ಅಖಿಲೇಶ್ ನಿರ್ಮಾಣದ ಈ ಚಿತ್ರಕ್ಕೆ ವಿಜಯ್ ಪಾಳೇಗಾರ್ ಅವರು ನಿರ್ದೇಶನದ ಜೊತೆಗೆ ಸಂಗೀತ ನಿರ್ದೇಶನವನ್ನೂ ನಿರ್ವಹಿಸಿದ್ದಾರೆ. ಡಿ ಬೀಟ್ಸ್ ಸಂಸ್ಥೆ ಮೂಲಕ ಬಿಡುಗಡೆಯಾಗಿರುವ ಈ ಚಿತ್ರದ ಹಾಡುಗಳು ಈಗಾಗಲೇ ಬಿಡುಗಡೆಯಾಗಿ ಜನಮನ ಸೂರೆಗೊಂಡು ಸಂಗೀತಪ್ರಿಯರ ಮೆಚ್ಚುಗೆಗೆ ಪಾತ್ರವಾಗಿವೆ. ತಾಯಿ-ಮಗನ ನಡುವಿನ ಬಾಂಧವ್ಯ, ಪ್ರೀತಿ ಹಾಗೂ ಕೌಟುಂಬಿಕ ಸಂಬಂಧಗಳ ಸುತ್ತ ಕಥೆ ಸಾಗುತ್ತದೆ. ನಾಯಕ ಆದಿತ್ಯ ಶಶಿಕುಮಾರ್ ಶಿವು ಎಂಬ ಮುಗ್ಧ ಹಳ್ಳಿಯ ಯುವಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಾಯಕಿ ಸಮೀಕ್ಷಾ ರಾಧ್ಯಾ ಎಂಬ ಕಾಲೇಜು ಹುಡುಗಿಯ ಪಾತ್ರ ನಿರ್ವಹಿಸಿದ್ದಾರೆ.
ನಿರ್ಮಾಪಕ ಅಖಿಲೇಶ್ ಮಾತನಾಡಿ, ತಾವು ಸಿನಿಮಾ ಪ್ರೀತಿಯಿಂದ ಚಿತ್ರ ನಿರ್ಮಾಣಕ್ಕೆ ಬಂದಿದ್ದು, ಚಿತ್ರತಂಡದ ಪ್ರತಿಯೊಬ್ಬರೂ ಶ್ರದ್ಧೆಯಿಂದ ಕೆಲಸ ಮಾಡಿದ್ದಾರೆ. ಈ ಪ್ರಯಾಣದಲ್ಲಿ ನಟ ಶಶಿಕುಮಾರ್ ಅವರು ಬೆನ್ನೆಲುಬಾಗಿ ನಿಂತು, ಪ್ರತಿ ಹಂತದಲ್ಲೂ ಧೈರ್ಯ, ಪ್ರೋತ್ಸಾಹ ಹಾಗೂ ಮಾರ್ಗದರ್ಶನ ನೀಡಿದ್ದಾರೆ. ಅವರ ಬೆಂಬಲವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಜೊತೆಗೆ ಶೈಲಜಾ ನಾಗ್ ಅವರ ಸಲಹೆ ಮತ್ತು ಮಾರ್ಗದರ್ಶನವೂ ಬಹಳ ಸಹಕಾರಿಯಾಗಿದೆ. ಕಾರ್ಯಕ್ರಮಕ್ಕೆ ಆಗಮಿಸಿದ ತಾರಾ ಅನುರಾಧಾ ಅವರಿಗೆ ವಿಶೇಷ ಧನ್ಯವಾದಗಳನ್ನು ತಿಳಿಸಿದರು.
ನಿರ್ದೇಶಕ ಹಾಗೂ ಸಂಗೀತ ನಿರ್ದೇಶಕ ವಿಜಯ್ ಪಾಳೇಗಾರ್ ಮಾತನಾಡಿ, ಕಾಲೇಜು ದಿನಗಳಿಂದಲೂ ನಿರ್ದೇಶಕನಾಗಬೇಕೆಂಬ ಕನಸು ಹೊಂದಿದ್ದೆ. ತಾಯಿ ಮತ್ತು ಮಗನ ನಡುವಿನ ಭಾವನಾತ್ಮಕ ಸಂಬಂಧವನ್ನು ಆಧರಿಸಿ ಈ ಕಥೆಯನ್ನು ರೂಪಿಸಿದ್ದೇನೆ. ಟ್ರೇಲರ್ನಲ್ಲಿ ಚಿತ್ರದ ಕೆಲವು ಅಂಶಗಳನ್ನು ಮಾತ್ರ ತೋರಿಸಲಾಗಿದೆ. ಚಿತ್ರದಲ್ಲಿ ಇನ್ನೂ ಹಲವು ವಿಶೇಷತೆಗಳಿದ್ದು, ಪ್ರೇಕ್ಷಕರಿಗೆ ಖಂಡಿತ ಇಷ್ಟವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ನಾಯಕ ಆದಿತ್ಯ ಶಶಿಕುಮಾರ್ ಮಾತನಾಡಿ, ತಂದೆ ಶಶಿಕುಮಾರ್ ಅವರ ಸಾಧನೆಗಳು ಸದಾ ನನಗೆ ಪ್ರೇರಣೆ. ಚಿತ್ರರಂಗದಲ್ಲಿ ಅವರದೇ ಆದ ಗುರುತಿದೆ. ಅದೇ ರೀತಿ ನಾನು ಕೂಡ ನನ್ನದೇ ಆದ ಗುರುತನ್ನು ಮೂಡಿಸಿಕೊಳ್ಳಬೇಕು ಎಂಬ ಆಸೆ ಹೊಂದಿದ್ದೇನೆ. ಈ ಚಿತ್ರದಲ್ಲಿ ಶಿವು ಎಂಬ ಮುಗ್ಧ ಹಳ್ಳಿಯ ಯುವಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ತಾಯಿಯ ಮೇಲಿನ ಪ್ರೀತಿ ಹಾಗೂ ನಾಯಕಿಯ ಮೇಲಿನ ಪ್ರೀತಿಯ ನಡುವೆ ನಡೆಯುವ ಭಾವನಾತ್ಮಕ ಸಂಘರ್ಷವೇ ಚಿತ್ರದ ಪ್ರಮುಖ ಅಂಶವಾಗಿದೆ ಎಂದರು.
ನಾಯಕಿ ಸಮೀಕ್ಷಾ ಮಾತನಾಡಿ, ಕಿರುತೆರೆಯಿಂದ ಬೆಳ್ಳಿತೆರೆಗೆ ಬರುತ್ತಿರುವುದು ಸಂತಸ ತಂದಿದೆ. ಚಿತ್ರದಲ್ಲಿ ರಾಧ್ಯಾ ಎಂಬ ಕಾಲೇಜು ವಿದ್ಯಾರ್ಥಿನಿಯ ಪಾತ್ರ ನಿರ್ವಹಿಸಿದ್ದೇನೆ. ಹದಿಹರೆಯದ ವಯಸ್ಸಿನಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಜೀವನದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತವೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಹಿರಿಯ ನಟಿ ವೀಣಾ ಸುಂದರ್ ಅವರು ನೀಡಿದ ಮಾರ್ಗದರ್ಶನಕ್ಕೆ ಧನ್ಯವಾದಗಳನ್ನು ತಿಳಿಸಿದ ಅವರು, ತಾರಾ ಅವರೊಂದಿಗೆ ಒಂದೇ ವೇದಿಕೆ ಹಂಚಿಕೊಂಡಿರುವುದು ಸಂತಸ ತಂದಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಿರಿಯ ನಟ ಶಶಿಕುಮಾರ್ ಮಾತನಾಡಿ, ಚಿತ್ರದ ಟ್ರೇಲರ್ನಲ್ಲಿ ಗ್ರಾಮೀಣ ಸೊಗಡು, ಸಹಜವಾದ ವೇಷಭೂಷಣ, ಹಾಸ್ಯ ಹಾಗೂ ಕೌಟುಂಬಿಕ ಸನ್ನಿವೇಶಗಳು ಗಮನ ಸೆಳೆಯುತ್ತವೆ. ದ್ವಿತೀಯಾರ್ಧದ ಭಾವನಾತ್ಮಕ ಸನ್ನಿವೇಶಗಳು ಮತ್ತು ಕ್ಲೈಮ್ಯಾಕ್ಸ್ ಪ್ರೇಕ್ಷಕರ ಮನಸ್ಸಿಗೆ ತಟ್ಟಲಿವೆ ಎಂಬ ವಿಶ್ವಾಸವಿದೆ. ಕನ್ನಡ ಚಿತ್ರಗಳನ್ನು ಪ್ರೇಕ್ಷಕರು ಬೆಂಬಲಿಸಬೇಕು. ಆದಿತ್ಯನ ಪ್ರಯತ್ನಕ್ಕೆ ಎಲ್ಲರೂ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ನಟಿ ವೀಣಾ ಸುಂದರ್, ನಟರಾದ ತಬಲಾ ನಾಣಿ, ಮಂಜು ಪಾವಗಡ, ಹುಲಿ ಕಾರ್ತಿಕ್, ವಿನೋದ್ ಗೊಬ್ಬರಗಾಲ, ಉಗ್ರಂ ರವಿ, ಭಜರಂಗಿ ಪ್ರಸನ್ನ ಸೇರಿದಂತೆ ಚಿತ್ರದ ಕಲಾವಿದರು ಹಾಗೂ ತಂತ್ರಜ್ಞರು ಉಪಸ್ಥಿತರಿದ್ದು, ಚಿತ್ರದ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
‘ರಾಶಿ’ ಚಿತ್ರ ನವೆಂಬರ್ 13ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಪ್ರೇಕ್ಷಕರು ಚಿತ್ರಮಂದಿರಗಳಿಗೆ ಆಗಮಿಸಿ ಚಿತ್ರವನ್ನು ವೀಕ್ಷಿಸುವುದರೊಂದಿಗೆ ಪ್ರೀತಿ, ಪ್ರೋತ್ಸಾಹ ಹಾಗೂ ಬೆಂಬಲ ನೀಡುವಂತೆ ಇಡೀ ಚಿತ್ರತಂಡ ಮನವಿ ಮಾಡಿಕೊಂಡಿದೆ.