Patredari.Film News

Friday, November 06, 2026

 

*ಶ್ರೀನಿವಾಸ್ ಜಯರಾಮ್ ನಿರ್ದೇಶನದ ‘ಪತ್ತೇದಾರಿ’ಗೆ ನವೀನ್ ಶಂಕರ್ ಚಾಲನೆ*

 

 *ಮೊಹಮ್ಮದ್ ಕಿಜಾರ್ ನಾಯಕನಾಗಿ ನಟಿಸಿ, ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿರುವ ಕ್ರೈಂ ಥ್ರಿಲ್ಲರ್ ಚಿತ್ರಕ್ಕೆ ಮುಹೂರ್ತ*

 

ಕ್ರೈಂ ಥ್ರಿಲ್ಲರ್ ಕಥಾಹಂದರ ಹೊಂದಿರುವ ‘ಪತ್ತೇದಾರಿ’ ಚಿತ್ರದ ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. ನಟ ನವೀನ್ ಶಂಕರ್ ಅವರು ಚಿತ್ರದ ಪ್ರಥಮ ಸನ್ನಿವೇಶಕ್ಕೆ ಆರಂಭ ಫಲಕ ತೋರುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು. ನಂತರ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.

 

ನಿರ್ದೇಶಕ ಶ್ರೀನಿವಾಸ್ ಜಯರಾಮ್ ಮಾತನಾಡಿ, ಈಗಾಗಲೇ ಸಾಕಷ್ಟು ಕ್ರೈಂ ಥ್ರಿಲ್ಲರ್ ಸಿನಿಮಾಗಳು ಬಂದಿರುವುದರಿಂದ ನಮ್ಮ ಚಿತ್ರದಲ್ಲಿ ವಿಭಿನ್ನವಾದ ನಿರೂಪಣೆ ಇರಬೇಕೆಂಬ ಉದ್ದೇಶದಿಂದ ಸುಮಾರು ಆರು ವರ್ಷಗಳ ಕಾಲ ಸಂಶೋಧನೆ ನಡೆಸಿ ಕಥೆ ಹಾಗೂ ಚಿತ್ರಕಥೆಯನ್ನು ಸಿದ್ಧಪಡಿಸಿದ್ದೇವೆ. ಹೊಸ ರೀತಿಯ ಪ್ರಯೋಗದೊಂದಿಗೆ ಪ್ರೇಕ್ಷಕರಿಗೆ ಕುತೂಹಲ ಮೂಡಿಸುವ ಪ್ರಯತ್ನ ಮಾಡಿದ್ದೇವೆ. ಅನುಭವಿ ತಂತ್ರಜ್ಞರು ಹಾಗೂ ಕಲಾವಿದರ ಸಹಕಾರದೊಂದಿಗೆ ಚಿತ್ರದ ಪ್ರತಿಯೊಂದು ವಿಭಾಗದಲ್ಲೂ ಗುಣಮಟ್ಟಕ್ಕೆ ಆದ್ಯತೆ ನೀಡಿ ಕೆಲಸ ಮಾಡಿದ್ದೇವೆ. ಉತ್ತಮ ಸಿನಿಮಾ ನೀಡುವ ವಿಶ್ವಾಸವಿದೆ ಎಂದರು.

ಚಿತ್ರದ ನಾಯಕ ಮೊಹಮ್ಮದ್ ಕಿಜಾರ್ ಮಾತನಾಡಿ, ನಿರ್ದೇಶಕರು ಹೇಳಿದ ಕಥೆ ತುಂಬಾ ಚೆನ್ನಾಗಿದೆ. ನನ್ನ ಪಾತ್ರವೂ ವಿಭಿನ್ನವಾಗಿದ್ದು, ಚಿತ್ರತಂಡದ ಎಲ್ಲಾ ಸದಸ್ಯರ ಸಹಕಾರದಿಂದ ಒಳ್ಳೆಯ ಸಿನಿಮಾ ಮೂಡಿಬರುವ ನಿರೀಕ್ಷೆಯಿದೆ. ನಾಯಕನಾಗಿ ಅಭಿನಯಿಸುವುದರ ಜೊತೆಗೆ ನಿರ್ಮಾಪಕನಾಗಿಯೂ ಕಾರ್ಯನಿರ್ವಹಿಸುತ್ತಿದ್ದೇನೆ. ನಿಮ್ಮೆಲ್ಲರ ಪ್ರೋತ್ಸಾಹ ಮತ್ತು ಬೆಂಬಲ ಇರಲಿ ಎಂದು ಮನವಿ ಮಾಡಿದರು.

 

ನಟ ತುಕಾಲಿ ಸಂತೋಷ್ ಮಾತನಾಡಿ, ಮಲಯಾಳಂ, ತೆಲುಗು, ಕನ್ನಡ ಹಾಗೂ ಹಿಂದಿ ಸಿನಿಮಾಗಳು ಮತ್ತು ವೆಬ್‌ಸೀರಿಸ್‌ಗಳನ್ನು ನೋಡುತ್ತಿರುತ್ತೇನೆ. ಕ್ರೈಂ ಥ್ರಿಲ್ಲರ್‌ನಲ್ಲಿ ಸಸ್ಪೆನ್ಸ್ ಹಾಗೂ ಹಾಸ್ಯ ಮಿಶ್ರಿತ ಪೊಲೀಸ್ ಪಾತ್ರ ಮಾಡಬೇಕೆಂಬ ಆಸೆಯಿತ್ತು. ನಿರ್ದೇಶಕರು ಹೇಳಿದ ಕಥೆ ಹಾಗೂ ಸ್ಕ್ರೀನ್‌ಪ್ಲೇ ಅದ್ಭುತವಾಗಿದ್ದು, ಚಿತ್ರದಲ್ಲಿ ಒಂದರ ಹಿಂದೆ ಮತ್ತೊಂದು ತಿರುವುಗಳಿವೆ. ಇಂತಹ ಪಾತ್ರ ನೀಡಿದ್ದಕ್ಕೆ ಚಿತ್ರತಂಡಕ್ಕೆ ಧನ್ಯವಾದಗಳನ್ನು ಸಲ್ಲಿಸಿದರು.

 

ಸಹ ನಿರ್ಮಾಪಕರಾದ ಕೃಷ್ಣಪ್ಪ(ಕೆ.ಕೆ) ಹಾಗೂ ಮಧುಸೂದನ್ ಮಾತನಾಡಿ ಚಿತ್ರದ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡರು. ನಟರಾದ ಸಿದ್ದೇಶ್ ಹಾಗೂ ಸೂರಜ್ ಕೂಡ ಚಿತ್ರದ ಬಗ್ಗೆ ಮಾತನಾಡಿದರು.

 

ಚಿತ್ರಕ್ಕೆ ಮೊಹಮ್ಮದ್ ಅತೀಕ್ ನಿರ್ಮಾಪಕರಾಗಿದ್ದು, ಮಧುಸೂದನ್ ಟಿ.ವಿ. ಹಾಗೂ ಟಿ. ಕೃಷ್ಣಪ್ಪ (ಕೆ.ಕೆ.) ಸಹ ನಿರ್ಮಾಪಕರಾಗಿದ್ದಾರೆ. ಹಾಲೇಶ್ ಛಾಯಾಗ್ರಹಣ, ರಾಘವೇಂದ್ರ ಸಂಗೀತ, ಕೆ. ರವಿವರ್ಮ ಮತ್ತು ನರಸಿಂಹ ಸಾಹಸ ನಿರ್ದೇಶನ, ರಘು ನಿಡವಳ್ಳಿ  ಸಂಭಾಷಣೆ ಹಾಗೂ ಕೆ.ಎಂ. ಪ್ರಕಾಶ್ ಸಂಕಲನದ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಪ್ರಶಾಂತ್ ಕಲಾ ನಿರ್ದೇಶನ ಹಾಗೂ ದಯಾನಂದ್ ವಸ್ತ್ರಾಲಂಕಾರ ಮಾಡುತ್ತಿದ್ದಾರೆ.

 

ಮೊಹಮ್ಮದ್ ಕಿಜಾರ್, ರೂಪಾ, ಸಿದ್ದೇಶ್, ಕಾಕರೋಜ್ ಸುಧಿ, ತುಕಾಲಿ ಸಂತೋಷ್, ವರ್ಧನ್, ಸೂರಜ್, ಗಿರೀಶ್ ಜಟ್ಟಿ, ನಿರಂಜನ್ ಅಶ್ವತ್, ವಂದನಾ, ಶಿವಮೊಗ್ಗ ರಾಮಣ್ಣ, ಉಗ್ರಂ ವಿಜಿ, ಉಗ್ರಂ ರೆಡ್ಡಿ, ಪ್ರೇಮ ಹಾಗೂ ಮಂಡ್ಯ ಸಿದ್ದು ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

 

Copyright@2018 Chitralahari | All Rights Reserved. Photo Journalist K.S. Mokshendra,